ವಿದ್ಯಾಪೀಠದಲ್ಲಿ 26 ಮಿಮೀ ಮಳೆ: ದಕ್ಷಿಣ,ಪೂರ್ವ,ಪಶ್ಚಿಮ ವಲಯದಲ್ಲಿ ಬಿರುಸು

Raining
Published on

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಸತತ 4 ದಿನವೂ ವರುಣಾರ್ಭಟ ಮುಂದುವರಿದಿದೆ.ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಆರ್​.ಆರ್​.ನಗರ ವಲಯ ವ್ಯಾಪ್ತಿಯ ಪ್ರದೇಶಗಳಲ್ಲಿ ಭಾನುವಾರ ಧಾರಾಕಾರವಾಗಿ ಸುರಿದಿದೆ.

ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಕಾಣಿಸಿಕೊಂಡಿತ್ತು. ಮಧ್ಯಾಹ್ನ 2.30ಕ್ಕೆ ಶುರುವಾದ ಮಳೆ ಅರ್ಧಗಂಟೆ ಕಾಲ ಹಲವು ಪ್ರದೇಶಗಳಲ್ಲಿ ಬಿರುಸಾಗಿ ಸುರಿಯಿತು.ಮಾರತ್ತಹಳ್ಳಿ, ವಿಶ್ವನಾಥ ನಾಗೇಹಳ್ಳಿ, ವನ್ನರ್​ಪೇಟೆ, ದೊರೆಸಾನಿಪಾಳ್ಯ, ಪಟ್ಟಾಭಿರಾಮನಗರ, ಬೊಮ್ಮನಹಳ್ಳಿ, ಬಿಳೇಕಹಳ್ಳಿ, ಮಾರುತಿ ಮಂದಿರ, ಎಚ್​ಎಎಲ್​ ವಿಮಾನ ನಿಲ್ದಾಣ, ಉತ್ತರಹಳ್ಳಿ, ಹಂಪೆನಗರದಲ್ಲಿ ಸರಾಸರಿ 10 ಮಿಮೀ ಮಳೆಯಾಗಿದೆ. ನಾಗಬಾವಿ, ನಾಯಂಡಹಳ್ಳಿ, ಮೈಸೂರು ರಸ್ತೆ, ಚಾಮರಾಜಪೇಟೆ, ಕೆಂಗೇರಿ, ಇಟ್ಟಮಡು, ಮೆಜೆಸ್ಟಿಕ್​, ಕೆ.ಆರ್​.ಮಾರುಕಟ್ಟೆ ಸೇರಿ ನಗರದ ವಿವಿಧ ಭಾಗಗಳಲ್ಲಿಯೂ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಯಿತು. ಕೆಲ ರಸ್ತೆಗಳ ಮೇಲೆ ನೀರು ನುಗ್ಗಿದ ಪರಿಣಾಮ ವಾಹನ ಸವಾರರ ಪರದಾಡಿದರು. ಮಳೆಯಿಂದಾಗಿ ಮೇಲ್ಸುತುವೆ ಸೇರಿ ಇತರ ಪ್ರಮುಖ ರಸ್ತೆಗಳಲ್ಲಿ ವಾಹನಗಳು ನಿಧಾನಗತಿಯಲ್ಲಿ ಸಾಗಿದವು. ಮ್ಯಾನ್​ಹೋಲ್​ ಹುಕ್ಕಿ ಹರಿದ ಪರಿಣಾಮ ರಸ್ತೆಯ ಮೇಲೆ ಕೊಳಚೆ ನೀರು ಹರಿಯುವ ದೃಶ್ಯ ಅಲ್ಲೆಲ್ಲಿ ಕಂಡುಬಂತು.ವಾರಾಂತ್ಯ ಹಿನ್ನೆಲೆಯಲ್ಲಿ ಹೊರಗಡೆ ತೆರಳಿದವರು ಮಳೆಯಿಂದ ತೊಂದರೆಗೆ ಸಿಲುಕಿದರು.

4 ದಿನ ಮಳೆ: ನಗರದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 4 ದಿನ ಮುಂದುವರಿಯಲಿದೆ. ಕೆಲವೆಡೆ ಬಿರುಸಾಗಿ ಸುರಿದರೆ ಇನ್ನೂ ಕೆಲವೆಡೆ ಸಾಧಾರಣ ಪ್ರಮಾಣದಲ್ಲಿ ಗುಡುಗು ಮಿಂಚು, ಬಿರು ಗಾಳಿ ಸಹಿತ ಮಳೆಯಾಗಲಿದೆ. ಮುಂದಿನ ಎರಡು ದಿನ ಮೋಡ ಕವಿಡ ವಾತಾವರಣ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಡಿ.ಸೆ ಮತ್ತು 20 ಡಿ.ಸೆ. ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಬಿಬಿಎಂಪಿಗೆ ಫಜೀತಿ: ಮರ, ಕೊಂಬೆ ಮುರಿದು ಬಿದ್ದಿರುವ ಸಂಬಂಧಪಟ್ಟಂತೆ ಬಿಬಿಎಂಪಿ ಸಹಾಯವಾಣಿಗೆ ಸಾವಿರಾರು ದೂರುಗಳು ಬರುತ್ತಿರುವ ನಡುವೆಯೂ ನಿರಂತರ ಮಳೆಯಿಂದಾಗಿ ಬಿಬಿಎಂಪಿ ಅರಣ್ಯ ವಿಭಾಗ ಹೈರಾಣಾಗಿದೆ.ಮರ, ಕೊಂಬೆಗಳ ತೆರವು ಕಾರ್ಯಾಚರಣೆ ಮಾಡುತ್ತಿದ್ದರೂ ನಿರಂತರವಾಗಿ ವರುಣಾರ್ಭಟಕ್ಕೆ ಒಣಗಿದ, ಬೀಳುವ ಹಂತದಲ್ಲಿರುವ ಮರ ಧರಾಶಾಹಿಯಾಗುತ್ತಿವೆ. ಮಳೆಯಿಂದ ರಕ್ಷಣೆ ಪಡೆಯಲು ರಸ್ತೆಬದಿ ವಾಹನ ನಿಲ್ಲಿಸಿದ್ದ ವಾಹನಗಳು ಮರ ಬಿದ್ದ ರಭಸಕ್ಕೆ ಜಖಂವಾಗುತ್ತಿವೆ.ಅಲ್ಲದೆ, ಮಳೆ ಬೀಳುವ ಸಂದರ್ಭದಲ್ಲಿ ವಾಹನ ಸವಾರರು, ಪಾದಚಾರಿಗಳು ಪ್ರಾಣ ಭಯದಲ್ಲೇ ಸಂಚರಿಸುವಂತಾಗಿದೆ.

ಎಲ್ಲೆಲ್ಲಿ ಎಷ್ಟು ಮಳೆ?

ಪ್ರದೇಶ                ಮಿಮೀ

ವಿದ್ಯಾಪೀಠ                26

ಕೆಂಗೇರಿ                 20

ರಾಜರಾಜೇಶ್ವರಿನಗರ     19

ನಾಯಂಡಹಳ್ಳಿ           18

ಎಚ್​.ಗೊಲ್ಲಹಳ್ಳಿ         17

ಹೆಮ್ಮೀಗೆಪುರ            16

ಹಂಪೆನಗರ             15

ಉತ್ತರಹಳ್ಳಿ                14

ಎಚ್​ಎಎಲ್​ ವಿಮಾನ ನಿಲ್ದಾಣ 14

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net