25ರಿಂದ ಶ್ರೀರಂಗಪಟ್ಟಣ ದಸರಾ

SRP_01-01jpj
Published on

ಶ್ರೀರಂಗಪಟ್ಟಣ: ಈ ಬಾರಿಯ ಶ್ರೀರಂಗಪಟ್ಟಣ ದಸರಾ ಆಚರಣೆ ಜನಮನ್ನಣೆಗಳಿಸಲು ಎಲ್ಲ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ತಮ್ಮ ವ್ಯಾಪಿಯ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಸೆ.25ರಿಂದ 28ರವರೆಗೆ ನಾಲ್ಕು ದಿನಗಳು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಶಾಸಕರೂ ಆದ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಸಲಹೆ ನೀಡಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸೋಮವಾರ ಶ್ರೀರಂಗಪಟ್ಟಣ ದಸರಾ ಆಚರಣೆ ಸಂಬಂಧ ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು. ಈಗಾಗಲೇ ಜಿಲ್ಲಾಡಳಿತದ ಸಭೆಯಲ್ಲಿ ಕಾರ್ಯಕ್ರಮಗಳ ರೂಪುರೇಷೆ ಕುರಿತು ಚರ್ಚಿಸಲಾಗಿದೆ. ಸ್ಥಳೀಯ ಕಲಾವಿದರು, ಜಾನಪದ ಕಲಾತಂಡಗಳು, ರೈತಾಪಿ ವರ್ಗದವರು ವೈವಿಧ್ಯಮ ಕಾರ್ಯಕ್ರಮಗಳನ್ನು ನೀಡಲು ಅವಕಾಶ ಮಾಡಿಕೊಡಲಾಗುವುದು. ಈ ಬಾರಿ ವಿದ್ಯುತ್ ದೀಪಾಲಂಕಾರ ವಿಶೇಷವಾಗಿರಬೇಕು. ಕಳೆದ ಬಾರಿಯ ಅಲಂಕಾರ ಪುನರಾವರ್ತನೆಗೊಳ್ಳಬಾರದು. ದಸರಾ ಮಂಟಪ, ವೇದಿಕೆ ನಿರ್ಮಾಣ, ಸ್ವಚ್ಛತೆ ಸೇರಿದಂತೆ ಎಲ್ಲ ಸಿದ್ಧತೆ ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಜಂಬೂ ಸವಾರಿ ಸಾಗುವ ಮಾರ್ಗದಲ್ಲಿನ ರಸ್ತೆ ದುರಸ್ತಿಗೊಳ್ಳಬೇಕು. ಮೆರವಣಿಗೆ ಸಾಗುವ ಪ್ರಮುಖ ವೃತ್ತಗಳ ಕಟ್ಟಡಗಳನ್ನು ಸುಣ್ಣ-ಬಣ್ಣ, ತೋರಣಗಳಿಂದ ಅಲಂಕೃತಗೊಳಿಸಬೇಕು. ನಿಗದಿತ ಸ್ಥಳದಲ್ಲಿ ಪುಷ್ಪಾರ್ಚನೆ ಮತ್ತು ಪೂಜಾ ಕೈಂಕರ್ಯ ನಡೆದು ಶ್ರೀರಂಗನಾಥಸ್ವಾಮಿ ಮೈದಾನ ತಲುಪವವರೆಗೆ ಜಾಗ್ರತೆ ವಹಿಸಬೇಕು. ಆನೆಗಳ ಆಗಮಿಸುವ ವೇಳೆ ಉಳಿಯುವ ಸ್ಥಳ, ಅವುಗಳಿಗೆ ಆಹಾರ, ಅಲಂಕಾರ ಮತ್ತು ಅವುಗಳ ಆರೋಗ್ಯ ಎಚ್ಚರ ವಹಿಸಲು ಪಶುಇಲಾಖೆ ವೈದ್ಯರು ಮತ್ತು ಅರಣ್ಯ ಇಲಾಖೆ ಎಚ್ಚರವಹಿಸಬೇಕು. ದಸರಾ ವೇದಿಕೆ ಕಾರ್ಯಕ್ರಮದ ಬಳಿ ಉತ್ತಮ ಟೆಂಟ್ ನಿರ್ಮಾಣ, ಮೂಲಸೌಕರ್ಯ ಒದಗಿಸಬೇಕು ಎಂದರು.

ಆರೋಗ್ಯ ಮೇಳ, ಆಹಾರ ಮೇಳ, ಪುಸ್ತಕ ಪ್ರದರ್ಶನ, ಸಮಗ್ರ ಕೃಷಿ, ರೇಷ್ಮೆ ಬೆಳೆ ಪರಿಚಯಿಸುವ ವಿಶೇಷ ಕಾರ್ಯಕ್ರಮಗಳು, ರೈತ ದಸರಾ, ಹಾಲು ಕರೆಯುವ ಸ್ಪರ್ಧೆ, ಯುವ ದಸರಾ, ವಿಚಾರಗೋಷ್ಠಿ, ಕವಿಗೋಷ್ಠಿ, ಮಕ್ಕಳು ಮತ್ತು ಮಹಿಳೆಯರು ಪಾಲ್ಗೊಳ್ಳುವಂತೆ ವಿಶೇಷ ಕ್ರೀಡೆ, ಸ್ಪರ್ಧೆಗಳನ್ನು ಆಯೋಜಿಸುವುದು ಸಂಬಂಧಪಟ್ಟ ಇಲಾಖೆಗಳ ಜವಾಬ್ದಾರಿ. ಪೊಲೀಸ್ ಇಲಾಖೆ ಭದ್ರತೆ ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಪುರಸಭೆ ಪ್ರಭಾರ ಅಧ್ಯಕ್ಷ ಎಂ.ಎಲ್.ದಿನೇಶ್, ತಹಸೀಲ್ದಾರ್ ಚೇತನಾ ಯಾದವ್, ಡಿವೈಎಸ್ಪಿ ಶಾಂತಮಲ್ಲಪ್ಪ, ವೇಣು, ಸಹಾಯಕ ಕೃಷಿ ಅಧಿಕಾರಿ ಪ್ರಿಯದರ್ಶನಿ, ನಿಮಿಷಾಂಬ ದೇಗುಲ ಪ್ರಭಾರ ಇಒ ತಮ್ಮೇಗೌಡ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ನಂದೀಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಶ್ರೀನಿವಾಸ್, ಸಿಡಿಪಿಒ ಸಕಲೇಶ್ವರ, ಇನ್‌ಸ್ಪೆಕ್ಟರ್ ಬಿ.ಜಿ.ಕುಮಾರ್, ರಾಜಸ್ವ ನೀರಿಕ್ಷಕ ರೇವಣ್ಣ, ಕಿರಂಗೂರು ಪಿಡಿಒ ಪ್ರಶಾಂತ್ ಬಾಬು, ಗ್ರಾಮ ಲೆಕ್ಕಿಗರು, ವಿವಿಧ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.

ಕಾವೇರಿ ದೀಪಾರತಿ

ಕಳೆದ ಬಾರಿಯಂತೆ 4 ದಿನಗಳ ಕಾಲ ಡಾ.ವಿ.ಭಾನುಪ್ರಕಾಶ್ ಶರ್ಮ ಹಾಗೂ ಲಕ್ಷ್ಮೀಶ ಶರ್ಮ ನೇತೃತ್ವದಲ್ಲಿ ಕಾವೇರಿ ದೀಪಾರತಿ ನಡೆಸುವಂತೆ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ತಿಳಿಸಿದರು. ಪಟ್ಟಣದ ಸ್ನಾನಘಟ್ಟದಲ್ಲಿ ಇದಕ್ಕಾಗಿ ವಿಶೇಷ ವೇದಿಕೆ ನಿರ್ಮಾಣ ಮಾಡಲಾಗುತ್ತಿದ್ದು, ವೈದಿಕರ ತಂಡದಿಂದ ಹಿಂದು ಧಾರ್ಮಿಕ ಸಂಸ್ಕೃತಿ ಸಂಪ್ರದಾಯದಂತೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಗುವುದು ಎಂದರು.

25ರಿಂದ ಅ.2ರವರೆಗೆ ವಿದ್ಯುತ್ ದೀಪಾಂಲಕಾರ

ಸೆ.25ರಿಂದ ಅಕ್ಟೋಬರ್ 8ರವರೆಗೆ ಒಟ್ಟು 8 ದಿನಗಳ ಕಾಲ ವರ್ಣರಂಜಿತ ದೀಪಾಲಂಕಾರ ಮಾಡುವಂತೆ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಎಇಇ ಮಂಜುನಾಥ್ ಪ್ರಸಾದ್ ಅವರಿಗೆ ಸೂಚಿಸಿದರು. ದಸರಾ ಆಚರಣೆ ವೇಳೆ ಯಾವುದೇ ವಿದ್ಯುತ್ ಅವಘಡಗಳು, ವ್ಯತ್ಯಯವಾಗದಂತೆ ಸಿಬ್ಬಂದಿಗಳು ಎಚ್ಚರವಹಿಸಬೇಕು ಎಂದು ಸೂಚನೆ ನೀಡಿದರು.

ದಸರಾ ದಿಬ್ಬಣ ಆಗಮನಕ್ಕೆ ಮನವಿ

ಪ್ರತಿವರ್ಷ ಜಂಬೂ ಸವಾರಿಯ ದಸರಾ ದಿಬ್ಬಣ ಸಂತೆ ಮೈದಾನದ ಮಾರ್ಗದಿಂದ ಶ್ರೀರಂಗಪಟ್ಟಣ ಪುರ ಪ್ರವೇಶಿಸುತ್ತಿದೆ. ಈ ಬಾರಿ ದಿಬ್ಬಣ ಕೋಟೆ ಪ್ರವೇಶದ್ವಾರದ ಮೂಲಕವೇ ಕರೆತರುವಂತೆ ಜ್ಯೋತಿಷಿ ಭಾನುಪ್ರಕಾಶ್ ಶರ್ಮ ಹಾಗೂ ಲಕ್ಷ್ಮೀಶ ಶರ್ಮ ಮನವಿ ಮಾಡಿದರು. ತಾಯಿ ಚಾಮುಂಡೇಶ್ವರಿ ದೇವಿಯ ಅಂಬಾರಿ ಹೊತ್ತ ಜಂಬೂ ಸವಾರಿ ಕೋಟೆ ಪ್ರವೇಶಿಸಲು ಯಾವುದೇ ಅಡೆ-ತಡೆ ಇಲ್ಲವಾದಲ್ಲಿ ತಜ್ಞರ ತಂಡ ಪರಿಶೀಲಿಸಲಿ. ಸಮಸ್ಯೆ ಇಲ್ಲ ಎಂದಾದರೆ ಈ ಮಾರ್ಗದಲ್ಲೇ ಸಾಗಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಪ್ಲಾಸ್ಟಿಕ್ ಮುಕ್ತ

ದಸರಾವನ್ನು ಸಾಧ್ಯವಾದಷ್ಟು ಪ್ಲಾಸ್ಟಿಕ್ ಮುಕ್ತವಾಗಿರಿಸಲು ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಹಾಗೂ ತಾಲೂಕು ಪಂಚಾಯಿತಿ ವಿಶೇಷ ಅಧಿಕಾರಿ ಲಕ್ಷ್ಮೀ ತಿಳಿಸಿದರು. ಮೂಲಸೌಲಭ್ಯಗಳ ಕಲ್ಪಿಸುವಿಕೆ, ಸಿರಿ ಧಾನ್ಯಗಳಿಂದ ವರ್ಣರಂಜಿತ ಆಕೃತಿಗಳ ತಯಾರಿ, ಆರೋಗ್ಯವಂತ ಮಕ್ಕಳ ಪ್ರದರ್ಶನ, ಬಾಲ್ಯ ವಿವಾಹ ನಿಯಂತ್ರಣ, ತಾಯಿ-ಮಗು ಆರೋಗ್ಯ ಕುರಿತ ಅರಿವು ಕಾರ್ಯಕ್ರಮ, ಸ್ತಬ್ಧ ಚಿತ್ರಗಳ ನಿರ್ಮಾಣ ಮಾಡಬೇಕು. ಹೆಣ್ಣು ಮಕ್ಕಳ ಡೊಳ್ಳು ಕುಣಿತ, ಮಹಿಳೆಯರ ಕೋಲಾಟ ಹಾಗೂ ಕನ್ನಡ ನಾಡು-ನುಡಿ ಬಿಂಬಿಸುವ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಎಂದು ಸಭೆಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net