

ಆಲಮೇಲ: ಭೀಮಾನದಿ ಹಿನ್ನೀರಿನಲ್ಲಿ ಮುಳಗಡೆಯಾದ ತಾವರಖೇಡ ಗ್ರಾಮದ ಫಲಾನುಭವಿಗಳನ್ನು ತಾವರಖೇಡ ಗ್ರಾಮದ ಪುನರ್‌ವಸತಿ ಕೇಂದ್ರದಲ್ಲಿ ಆ. 25ರಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ, ಸಚಿವ ಶಿವಾನಂದ ಪಾಟೀಲ, ಶಾಸಕರಾದ ಅಶೋಕ ಮನಗೂಳಿ, ಯಶವಂತರಾಯಗೌಡ ಪಾಟೀಲ ಹಾಗೂ ಜಿಲ್ಲಾಧಿಕಾರಿ ಟಿ. ಭೂಬಾಲನ್ ನೇತೃತ್ವದಲ್ಲಿ 429 ನಿವೇಶನಗಳ ಹಕ್ಕುಪತ್ರಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗುವುದು ಎಂದು ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಪಟ್ಟಣದ ತಹಸೀಲ್ದಾರ ಕಾರ್ಯಾಲಯದ ಸಭಾಭವನದಲ್ಲಿ ಮಂಗಳವಾರ ಹಕ್ಕುಪತ್ರ ವಿತರಣಾ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಿ ಅವರು ಮಾತನಾಡಿ, ಕಡಣಿ ಗ್ರಾಪಂ ವ್ಯಾಪ್ತಿಯ ತಾವರಖೇಡ ಗ್ರಾಮದ ಅರ್ಹ ಫಲಾನುಭವಿಗಳು ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಹಕ್ಕುಪತ್ರಗಳನ್ನು ಪಡೆದುಕೊಳ್ಳಬೇಕು. ಹಕ್ಕುಪತ್ರ ಪಡೆದ ಪ್ರವಾಹ ಪೀಡಿತ ಕುಟುಂಬಗಳು ಪುನರ್‌ವಸತಿ ಕೇಂದ್ರಗಳಲ್ಲಿ ವಾಸಿಸಲು ಆರಂಭಿಸಿ. ಪುನರ್‌ವಸತಿ ಕೇಂದ್ರಕ್ಕೆ ಹಂತ ಹಂತವಾಗಿ ಎಲ್ಲ ಮೂಲ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.
ನಂತರ ತಾವರಖೇಡ ಗ್ರಾಮದ ಪುನರ್‌ವಸತಿ ಕೇಂದ್ರಕ್ಕೆ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ, ತಹಸೀಲ್ದಾರ್ ಸುರೇಶ ಚಾವಲರ್, ಕಂದಾಯ ನಿರೀಕ್ಷಕ ಎಂ.ಎ. ಅತ್ತಾರ, ಕಡಣಿ ಗ್ರಾಪಂ ಅಧ್ಯಕ್ಷ ಬಸಲಿಂಗಪ್ಪ ಕತ್ತಿ, ಶರಣಪ್ಪ ತಾವರಖೇಡ, ಪಿಡಿಒ ಶರಣಗೌಡ ಕಡ್ಲೇವಾಡ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ನೀರಾವರಿ ಇಲಾಖೆಯ ಎಇಇ ಸಂತೋಷಕುಮಾರ ಪಾಟೀಲ, ಎಇ ಅರುಣಕುಮಾರ, ಪಿಎಸ್‌ಐ ಕುಮಾರ ಹಾಡಕಾರ, ಶಿರಸ್ತೆದಾರ ಪಿ.ಎಸ್. ಮುಕಿಹಾಳ, ಮಲ್ಲು ಭೋಗಂಡಿ, ಗೌಡಪ್ಪ ಬಗಲಿ, ರೇವಣಸಿದ್ಧ ಅಪಝಲಪುರ, ಸಿದ್ದು ಶಿವಗೊಂಡ ಇತರರಿದ್ದರು.