25ರಂದು ಗ್ರಾಮಾಭಿವೃದ್ಧಿ ಯೋಜನೆ ಕಟ್ಟಡ‘ವಿಕಾಸಸೌಧ’ ಲೋಕಾರ್ಪಣೆ

CTD VIKASUDAA----06
Published on

ಚಿತ್ರದುರ್ಗ: ಹೊಳಲ್ಕೆರೆಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿ ನೂತನ ಕಟ್ಟಡ‘ವಿಕಾಸ ಸೌಧ’ದ ಉದ್ಘಾಟನಾ ಸಮಾರಂಭ ಡಿ.25 ರಂದು ನಡೆಯಲಿದೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದಾಜು 3.74 ಕೋಟಿ ರೂ. ವೆಚ್ಚದ ಈ ಕಟ್ಟಡಕ್ಕೆ ಪುರಸಭೆ ನಿವೇಶನ ಮಂಜೂರು ಮಾಡಿತ್ತು ಎಂದು ತಿಳಿಸಿದರು.

ಪಟ್ಟಣದ ಕೊಟ್ರೆನಂಜಪ್ಪ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಅಂದು ಬೆಳಗ್ಗೆ 10ಕ್ಕೆ ನಡೆಯುವ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ. ವಿರೇಂದ್ರ ಹೆಗ್ಗಡೆ ಅವರು ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಸ್ವಸಹಾಯ ಸಂಘಗಳಿಗೆ ಲಾಭಾಂಶ, ಸಂಸದ ಗೋವಿಂದ ಎಂ. ಕಾರಜೋಳ ಅವರು ನಮ್ಮೂರು-ನಮ್ಮ ಕೆರೆ ಪ್ರಮಾಣ ಪತ್ರ ವಿತರಿಸುವರು. ಮಾಜಿ ಸಚಿವ ಎಚ್. ಅಂಜನೇಯ ಅವರು ವಾತ್ಸಲ್ಯ ಮನೆ ಹಸ್ತಾಂತರಿಸಲಿದ್ದಾರೆ. ಎಂಎಲ್‌ಸಿ ಕೆ.ಎಸ್. ನವೀನ್ ಸುಜ್ಞಾನ ನಿಧಿ ಶಿಷ್ಯ ವೇತನ ವಿತರಿಸಲಿದ್ದಾರೆ ಎಂದು ತಿಳಿಸಿದರು.

ಡಿಸಿ ಟಿ. ವೆಂಕಟೇಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಸಿಇಒ ಎಸ್.ಎಸ್. ಅನಿಲ್‌ಕುಮಾರ್,ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಬಿ.ಕೆ. ಸುಮಿತ್ರ, ಪುರಸಭೆ ಅಧ್ಯಕ್ಷ ಎಲ್. ವಿಜಯಸಿಂಹ ಖಾಟ್ರೋತ್, ಉಪಾಧ್ಯಕ್ಷೆ ನಾಗರತ್ನ ಎಚ್.ಆರ್. ವೇದಮೂರ್ತಿ ಹಾಗೂ ಉಪಸ್ಥಿತರಿರುವರು.

ಸಮಾರಂಭದಲ್ಲಿ ಸ್ವಸಹಾಯ ಮಹಿಳಾ ಸಂಘಗಳ 60 ಸಾವಿರಕ್ಕೂ ಹೆಚ್ಚು ಮಹಿಳೆಯರು ಸಹಿತ ಒಂದು ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಪಟ್ಟಣದ ಶಿವನಕೆರೆಯಲ್ಲಿ ನಿರ್ಮಿಸಿರುವ ಶಿವನ ಪ್ರತಿಮೆ ನಿರ್ವಹಣೆಯನ್ನು ಗ್ರಾಮಾಭಿವೃದ್ಧಿ ಯೋಜನೆಗೆ ವಹಿಸಲು ಸಿದ್ಧ. ಹೊಳಲ್ಕೆರೆಗೆ ವೀರೇಂದ್ರ ಹೆಗ್ಗಡೆ ಆಗಮಿಸುತ್ತಿರುವುದು ನಮ್ಮ ಪುಣ್ಯ, ನಲವತ್ತು ವರ್ಷಗಳ ನಂತರ ಪಟ್ಟಣಕ್ಕೆ ಅವರು ಭೇಟಿ ನೀಡುತ್ತಿದ್ದಾರೆ ಎಂದರು.

ಬಿ.ಸಿ.ಟ್ರಸ್ಟ್ ನಿರ್ದೇಶಕ ದಿನೇಶ್‌ಪೂಜಾರ್, ಯೋಜನಾಧಿಕಾರಿಗಳಾದ ಸುರೇಂದ್ರ ಆಚಾರ್, ಪ್ರಭಾಕರ್, ವಸಂತ್, ಪುರಸಭೆ ಮಾಜಿ ಅಧ್ಯಕ್ಷ ಅಶೋಕ್, ಡಿ.ಸಿ. ಮೋಹನ್, ದುಮ್ಮಿ ರಮೇಶ್‌ಗೌಡ್ರ, ಸರಸ್ವತಿ, ಸಾಸಲು ರುದ್ರಣ್ಣ, ಸಾಸಲು ದೇವರಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net