25ಕ್ಕೆ ಅಂಬೇಡ್ಕರ್ ಪುತ್ಥಳಿ ಅನಾವರಣ

17 yelandur 02
Published on

ಯಳಂದೂರು: ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಡಾ. ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಮುಂಭಾಗದಲ್ಲಿ ನಿರ್ಮಾಣಗೊಂಡಿರುವ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಯನ್ನು ಜ.25ರಂದು ಅನಾವರಣಗೊಳಿಸಲಾಗುವುದು ಎಂದು ಶಾಸಕ ಎನ್. ಮಹೇಶ್ ತಿಳಿಸಿದರು.


ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಂಗಳವಾರ ಈ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಇದು ದಕ್ಷಿಣ ಭಾರತದಲ್ಲೇ ವಿಭಿನ್ನವಾಗಿ ರೂಪುಗೊಂಡ ಪುತ್ಥಳಿಯಾಗಿದೆ. ಇದರ ಮುಂಭಾಗದಲ್ಲಿ ಸಣ್ಣ ಉದ್ಯಾನ ನಿರ್ಮಿಸಲಾಗಿದೆ. ಅಂಬೇಡ್ಕರ್ ಸಮುದಾಯ ಭನವದ ಆಧುನೀಕರಣಕ್ಕೆ ಮತ್ತೆ 15 ಲಕ್ಷ ರೂ. ಅನುದಾನವನ್ನು ನೀಡಲಾಗುತ್ತಿದ್ದು, ಪುತ್ಥಳಿ ಉದ್ಘಾಟನೆ ಜತೆಗೆ ಭವನಕ್ಕೆ ಅಗತ್ಯವಾಗಿ ಬೇಕಿರುವ ಕೊಠಡಿಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು. ಊಟದ ಹಾಲ್‌ಗೆ ಬೇಕಿರುವ ಡೈನಿಂಗ್ ಟೇಬಲ್, ಕುರ್ಚಿಗಳು, ಅಡುಗೆ ಪಾತ್ರೆಗಳನ್ನು ನೀಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.


ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಐವರು ಬಂತೇಜಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ. ಅಂದು ಬೆಳಗ್ಗೆ ವಿವಿಧ ಕಲಾತಂಡಗಳೊಂದಿಗೆ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಭವನ ನಿರ್ಮಾಣಕ್ಕೆ ಸಹಕರಿಸಿದ ಎಲ್ಲರನ್ನೂ ಸನ್ಮಾನಿಸಲಾಗುವುದು. ಇಲಾಖೆಯ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಎಲ್ಲ ಸಮುದಾಯದವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು ಎಂದು ಹೇಳಿದರು.


ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ರೇವಣ್ಣ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವಮೂರ್ತಿ, ನಿರ್ಮಿತಿ ಕೇಂದ್ರದ ಜೆಇ ನಂದೀಶ್‌ಕುಮಾರ್, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ರಾಜು, ಮುಖಂಡರಾದ ವಡಗೆರೆ ದಾಸ್, ಯರಿಯೂರು ರಾಜಣ್ಣ, ಚಕ್ರವರ್ತಿ, ಎ.ಎನ್. ನಾಗೇಂದ್ರ, ಚಿಕ್ಕಮಾದಯ್ಯ, ರಾಮು, ಮಾಂಬಳ್ಳಿ ನಂಜುಂಡಸ್ವಾಮಿ ಇತರರು ಇದ್ದರು.

1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net