

ಗಂಗಾವತಿ: ಯಾದಗಿರಿಯಲ್ಲಿ ಆಯೋಜಿಸಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕಲ್ಯಾಣ ಕರ್ನಾಟಕ ವಿಭಾಗದ ಜಾಂಬೋರೇಟ್ ಕಾರ್ಯಾಗಾರದಲ್ಲಿ ಜಿಲ್ಲೆಯ 300 ಶಿಬಿರಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಉಪಾಧ್ಯಕ್ಷ ಎಚ್.ಎಂ. ಸಿದ್ರಾಮಯ್ಯಸ್ವಾಮಿ ಹೇಳಿದರು.
ಕಾರ್ಯಾಗಾರಕ್ಕೆ ತೆರಳುತ್ತಿರುವ ಶಿಬಿರಾರ್ಥಿಗಳ ವಾಹನಕ್ಕೆ ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಗುರುವಾರ ಚಾಲನೆ ನೀಡಿ ಮಾತನಾಡಿದರು. ರಾಜ್ಯದ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ, ಶಾಲಾ ಶಿಕ್ಷಣ ಇಲಾಖೆ ಮತ್ತು ಯಾದಗಿರಿ ಜಿಲ್ಲಾಡಳಿತದಿಂದ ಜ.17ರಿಂದ 21ರವರೆಗೆ ಜಾಂಬೋರೇಟ್ ನಡೆಯಲಿದೆ.
ಡಿಜಿಟಲ್ ಯುಗದಲ್ಲಿ ಮರೆಯುತ್ತಿರುವ ಕರಕುಶಲತೆ ಬಗ್ಗೆ ಮಾಹಿತಿ ನೀಡಲಾಗುತ್ತಿದ್ದು, ಮೆಹಂದಿ, ರಂಗೋಲಿ, ಪೇಪರ್ ಕಟಿಂಗ್, ಕ್ಲೇ ಮಾಡಲಿಂಗ್, ಸ್ವಿಮಿಂಗ್, ಬೆಂಕಿ ಇಲ್ಲದೆ ಅಡುಗೆ, ತರಕಾರಿ ಮಾದರಿ, ಸೋಲಾರ್ ತಂತ್ರಜ್ಞಾನದ ಮಾಹಿತಿ, ರಸ ಸಂಜೆ, ಜಿಲ್ಲಾ ವೈಭವ ಸೇರಿ ಮನರಂಜನೆಯೊಂದಿಗೆ ವ್ಯಕ್ತಿತ್ವ ವಿಕಸನದ ಪೂರಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
ಜಿಲ್ಲೆಯಿಂದ 15 ತರಬೇತುದಾರರು ಭಾಗವಹಿಸಲಿದ್ದು, ಸಂಸ್ಥೆಯಿಂದ ಎಲ್ಲ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದರು. ಬಿಇಒ ಕಚೇರಿ ವ್ಯವಸ್ಥಾಪಕಿ ಉಮಾದೇವಿ, ಸಂಸ್ಥೆ ತಾಲೂಕು ಘಟಕದ ಪದಾಧಿಕಾರಿಗಳಾದ ಹುಸೇನ್‌ಸಾಬ್ ಮಕನಾಂದರ್, ಅರುಣಾ ವಸದ್, ಸೈಯದ್ ಮೊಹ್ಮದ್ ಗುತ್ತಿ, ಯರ‌್ರೆಣ್ಣ ಇತರರಿದ್ದರು.