

ಮೂಡಿಗೆರೆ: ಅರಣ್ಯ ಕಾಯ್ದೆ 4(1)ರಲ್ಲಿದ್ದ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲು 17(1) ಜಾರಿ ಮಾಡಲು ಸಿದ್ಧತೆ ನಡೆದಿದೆ. ಸುಪ್ರೀಂಕೋರ್ಟ್ ಆದೇಶದಂತೆ ಕಾಯ್ದೆ ಜಾರಿಯಾದರೆ ಕಳಸ ಭಾಗದಲ್ಲಿ 2,548 ಹೆಕ್ಟೇರ್ ಭೂಮಿ ಅರಣ್ಯ ಇಲಾಖೆ ಪಾಲಾಗಲಿದೆ ಎಂದು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದ್ದಾರೆ.
ಕಳಸ ಅರಣ್ಯ ವಲಯ ವ್ಯಾಪ್ತಿಯಲ್ಲಿ ಅರಮನೆ ತಲಗೂರು ಗ್ರಾಮ 40 ಹೆಕ್ಟೇರ್, ಕಲ್ಮನೆ ಗ್ರಾಮ 80, ಮಾಳಿಗನಾಡು 92, ಬಿಳಗಲಿ 167, ಜಾವಳಿ ಗ್ರಾಮದ ಹೇಮಾವತಿ ನದಿ ಸುತ್ತಮುತ್ತ 229, ಕೆ.ಕೆಳಗೂರು 52, ಮಾವಿನಕೆರೆ 96, ಶ್ರೀ ಅನ್ನಪೂರ್ಣೇಶ್ವರಿ 3 ಬ್ಲಾಕ್‌ನಿಂದ 526, ತಲಕೋಡು 2 ಬ್ಲಾಕ್‌ನಿಂದ 222, ಎಡೂರು 2 ಬ್ಲಾಕ್‌ನಿಂದ 84, ಹೆಮ್ಮಕ್ಕಿ 6 ಬ್ಲಾಕ್‌ನಿಂದ 166, ಇಡಕಣಿ ಬ್ಲಾಕ್ 6ರಲ್ಲಿ 87, ಕಾರೆಕಳಗೂಡು 162, ಕೂವೆ, ಕಲ್ಮನೆ, ಮಾಳಿಗನಾಡು ಸೇರಿ 251, ಮಾವಿನಕೆರೆ ಬ್ಲಾಕ್ 4ರಲ್ಲಿ 17, ತಲಕೋಡು 1ರಿಂದ 5 ಬ್ಲಾಕ್‌ವರೆಗೆ 50, ಒಟ್ಟು 2,548 ಹೆಕ್ಟೇರ್ ಪ್ರದೇಶ ಅರಣ್ಯ ಕಾಯ್ದೆ 4(1)ರಿಂದ 17(1)ಗೆ ಮಾಡಲು ಸರ್ಕಾರ ಎಸ್‌ಎಫ್‌ಒ ಅಧಿಕಾರಿ ನೇಮಕ ಮಾಡಿದೆ. ಒಂದು ವೇಳೆ ಈ ಎಲ್ಲ ಪ್ರದೇಶ ಅರಣ್ಯ ಕಾಯ್ದೆ 17(1) ಆದರೆ ಈ ಗ್ರಾಮದ ಎಲ್ಲ ರೈತರು, ಕಾರ್ಮಿಕರು ಬೀದಿಪಾಲಾಗಲಿದ್ದಾರೆ ಎಂದು ಶನಿವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಾಲೂಕಿನಲ್ಲಿ ನಿವೇಶನಕ್ಕಾಗಿ ಫಲಾನುಭವಿಗಳು ಕಾದು ಕುಳಿತಿದ್ದಾರೆ. ನಿವೇಶನ ರಹಿತರು ಕಾಫಿ ತೋಟದ ಕೂಲಿ ಲೈನ್ ಮತ್ತು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. 2019ರಲ್ಲಿ ಉಂಟಾದ ಪ್ರವಾಹದಿಂದ ಜಮೀನು ಕಳೆದುಕೊಂಡ ನಿರಾಶ್ರಿತರಿಗೆ ಹರಸಾಹಸ ಪಟ್ಟು ಬದಲಿ ಜಾಗ ನೀಡಲಾಗಿದೆ. ಕಳಸ ಭಾಗದಲ್ಲಿ 2,548 ಹೆಕ್ಟೇರ್ ಪ್ರದೇಶ ಅರಣ್ಯ ಪಾಲಾದರೆ ಅಲ್ಲಿಂದ ಒಕ್ಕಲೇಳುವ ಸಂತ್ರಸ್ತರಿಗೆ ಬದಲಿ ಜಾಗ ಕೊಡಲು ಸರ್ಕಾರಕ್ಕೆ ಸಾಧ್ಯವಾಗದು. ನಿವೇಶನ ರಹಿತ ಫಲಾನುಭವಿಗಳಿಗೆ ನಿವೇಶನ ಕೊಡಲು ಸಾಧ್ಯವಾಗದೆ ಅಧಿಕಾರಿಗಳು ಕೈಚೆಲ್ಲಿ ಕುಳಿತಿರುವಾಗ, ಇರುವ ಜಮೀನನ್ನು ಅರಣ್ಯ ಇಲಾಖೆಗೆ ಬಿಟ್ಟುಕೊಡಬಾರದು. ಸರ್ಕಾರ ಈ ಬಗ್ಗೆ ಗಂಭೀರ ನಿರ್ಧಾರ ಕೈಗೊಂಡು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿ ಈ ಪ್ರಕ್ರಿಯೆ ಕೈಬಿಡಲು ಕ್ರಮ ವಹಿಸಬೇಕು. ಇಲ್ಲವಾದರೆ ರೈತರೊಂದಿಗೆ ಸೇರಿ ದೊಡ್ಡ ಮಟ್ಟದ ಹೋರಾಟ ರೂಪಿಸುವುದು ಅನಿವಾರ್ಯವಾಗಲಿದೆ ಎಂದು ಹೇಳಿದ್ದಾರೆ.