253 ಒಳಗೆ, 351 ಹೊರಗೆ

carona logo
Published on

ಧಾರವಾಡ: ಜಿಲ್ಲೆಯಲ್ಲಿ ಬುಧವಾರ 253 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದರೆ, 351 ಜನರು ಕರೊನಾ ವೈರಸ್ ಗೆದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಒಟ್ಟು ಪ್ರಕರಣಗಳ ಸಂಖ್ಯೆ 8384ಕ್ಕೇರಿದೆ. ಈವರೆಗೆ 5721 ಜನ ಗುಣವಾಗಿ ಆಸ್ಪತ್ರೆಯಿಂದ ಮನೆಗೆ ಹೋಗಿದ್ದು, 2405 ಪ್ರಕರಣಗಳು ಸಕ್ರಿಯವಾಗಿವೆ. 36 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೆ 9 ಜನ ಮೃತಪಟ್ಟಿದ್ದಾರೆ. ಇದರಿಂದಾಗಿ ಸಾವಿಗೀಡಾದವರ ಸಂಖ್ಯೆ 253ಕ್ಕೆ ಜಿಗಿದಿದೆ.

ಬುಧವಾರ ಪ್ರಕಟವಾದ ಪ್ರಯೋಗಾಲಯ ವರದಿಯಲ್ಲಿ ಹುಬ್ಬಳ್ಳಿಯಲ್ಲೇ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಧಾರವಾಡ ತಾಲೂಕು ಹಾಗೂ ಗ್ರಾಮೀಣ ಭಾಗ ಸೇರಿ ಅಂದಾಜು 55 ಸ್ಥಳಗಳಲ್ಲಿ ಪ್ರಕರಣಗಳು ಪತ್ತೆಯಾಗಿದ್ದರೆ, ಹುಬ್ಬಳ್ಳಿ ತಾಲೂಕು ಹಾಗೂ ಗ್ರಾಮೀಣ ಸೇರಿ ಅಂದಾಜು 65 ಪ್ರದೇಶಗಳಲ್ಲಿ ಪ್ರಕರಣಗಳು ಪತ್ತೆಯಾಗಿವೆ. ಇನ್ನು ಕೆಲ ಪ್ರದೇಶಗಳಲ್ಲಿ ನಿತ್ಯ ಒಂದಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದ್ದರೆ, ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವವರ ಪ್ರಮಾಣದಲ್ಲಿ ಸಹ ಏರಿಕೆಯಾಗಿದೆ.

ಕಲಘಟಗಿ ತಾಲೂಕಿನ ಗಳಗಿಹುಲಕೊಪ್ಪ, ಗಂಜಿಗಟ್ಟಿಯ ಬರದೂರ ಓಣಿ, ಮಾಚಾಪುರ ತಾಂಡ, ಮಲಕನಕೊಪ್ಪ, ಅಗಡಿ ತಾಂಡಾ, ಕಲಕುಂದಿ, ಗಂಬ್ಯಾಪುರ, ಹೊರಕೇರ, ಹುಲಿಕಟ್ಟಿ; ನವಲಗುಂದದ ನವಲಗುಂದ ಓಣಿ, ತಿರ್ಲಾಪುರ, ಹೆಬ್ಬಾಳ, ಕರ್ಲವಾಡ, ಶಲವಡಿ ವಗ್ಗರ ಓಣಿ, ಅಳಗವಾಡಿಯ ಬಸ್ ನಿಲ್ದಾಣ ಹತ್ತಿರ, ಶಾನುಭೋಗರ ಓಣಿ, ಭೋಗಾನೂರ ಗೌಡರ ಓಣಿ, ಭದ್ರಾಪುರ ಇಂದಿರಾನಗರ, ಸಾಸ್ವಿಹಾಳ, ಶಿರೂರ; ಕುಂದಗೊಳದ ಕುಲಕರ್ಣಿ ಗಲ್ಲಿ, ಗುಡಗೇರಿಯ ಬೆಟದೂರು ಓಣಿ, ಇನಾಮಕೊಪ್ಪಗಳಲ್ಲಿ ಪ್ರಕರಣಗಳು ಪತ್ತೆಯಾಗಿವೆ. ಅಕ್ಕಪಕ್ಕದ ಜಿಲ್ಲೆಗಳ ಒಂದಿಷ್ಟು ಜನ ಸೋಂಕಿತರು ಧಾರವಾಡ ಜಿಲ್ಲೆಯ ಆಸ್ಪತ್ರೆಗಳಿಗೆ ದಾಖಲಾಗಿವೆ.

ಗಂಟಲ ದ್ರವ ಪರೀಕ್ಷೆಗೆ ಹಿಂದೇಟು

ಹುಬ್ಬಳ್ಳಿ: ಕರೊನಾ ಸೋಂಕಿತರೊಂದಿಗೆ ಯಾವುದೇ ರೀತಿಯ ಸಂಪರ್ಕ ಇರದಿದ್ದರೂ ಸೋಂಕಿತರ ಸಂಬಂಧಿಗಳಿಗೆ ಜಿಲ್ಲಾ ಸಂಖ್ಯಾ ಸಂಗ್ರಹಣಾ ಅಧಿಕಾರಿಗಳ ಕಚೇರಿ ಸಿಬ್ಬಂದಿ, ಕ್ವಾರಂಟೈನ್ ಇರುವಂತೆ ಒತ್ತಡ ಹೇರುತ್ತಿರುವುದಾಗಿ ತಿಳಿದುಬಂದಿದೆ.

ಸೋಂಕಿತರೊಂದಿಗೆ ಪ್ರಥಮ ಹಾಗೂ ದ್ವಿತೀಯ ಸಂಪರ್ಕ ಇರುವವರನ್ನು ನಿಯಮಗಳ ಪ್ರಕಾರ ಕ್ವಾರಂಟೈನ್ ಮಾಡಬೇಕು. ಆದರೆ, ಸೋಂಕಿತ ವ್ಯಕ್ತಿಯನ್ನು ತಿಂಗಳುಗಟ್ಟಲೇ ಭೇಟಿಯಾಗದ ಸಂಬಂಧಿಕರಿಗೂ ಕ್ವಾರಂಟೈನ್ ಇರುವಂತೆ ಒತ್ತಡ ಹೇರಲಾಗುತ್ತಿದೆ.

ಸೋಂಕಿತರಿಗೆ ಕರೆ ಮಾಡುವ ಜಿಲ್ಲಾ ಸಂಖ್ಯಾ ಸಂಗ್ರಹಣಾ ಅಧಿಕಾರಿಗಳ ಕಚೇರಿ ಸಿಬ್ಬಂದಿ, ತಂದೆ- ತಾಯಿ, ಅತ್ತೆ- ಮಾವನ ವಿವರ ಕೇಳುತ್ತಾರೆ. ಅವರು ಬೇರೆ ಊರಿನಲ್ಲಿ ಇದ್ದರೂ ವಿವರ ನೀಡುವಂತೆ ಒತ್ತಾಯಿಸುತ್ತಾರೆ. ಮಾಹಿತಿ ಪಡೆದುಕೊಂಡ ನಂತರ, ಸೋಂಕಿತನ ಸಂಬಂಧಿಗಳಿಗೆ ಕರೆ ಮಾಡಿ ಕ್ವಾರಂಟೈನ್​ನಲ್ಲಿ ಇರುವಂತೆ ಸೂಚಿಸುತ್ತಾರೆ.

ಅಧಿಕಾರಿಗಳ ಈ ವರ್ತನೆ ಮಾಹಿತಿ ಬಾಯಿಂದ ಬಾಯಿಗೆ ಹರಡಿದೆ. ಹೀಗಾಗಿ, ಸೋಂಕಿನ ಲಕ್ಷಣ ಇದ್ದರೂ ಅನೇಕರು ಗಂಟಲ ದ್ರವ ಪರೀಕ್ಷೆಗೆ ಹಿಂದೇಟು ಹಾಕುವಂತಾಗಿದೆ. ಪರೀಕ್ಷೆಯಲ್ಲಿ ಸೋಂಕು ಇರುವುದು ದೃಢಪಟ್ಟರೆ ತನ್ನಿಂದಾಗಿ ದೂರದ ಊರಿನಲ್ಲಿರುವ ತನ್ನ ತಂದೆ- ತಾಯಿ, ಅತ್ತೆ- ಮಾವನಿಗೆಲ್ಲ ತೊಂದರೆ ಆಗಬಾರದೆಂದು ಪರೀಕ್ಷೆಯಿಂದ ದೂರ ಉಳಿಯುತ್ತಿದ್ದಾರೆ.

ಸೋಂಕಿತ ವ್ಯಕ್ತಿಯಿಂದ ಆತನ ಸ್ನೇಹಿತರ ಹೆಸರನ್ನೂ ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ. ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲಿಲ್ಲ ಎಂದರೂ ಕೇಳದ ಅಧಿಕಾರಿಗಳು, ನಮಗೆ ಟಾರ್ಗೆಟ್ ನೀಡಿದ್ದಾರೆ. ಆ ಪ್ರಕಾರ ನಮಗೆ ಹೆಚ್ಚಿನ ಹೆಸರು ಬೇಕೆಂದು ಪಟ್ಟು ಹಿಡಿಯುತ್ತಾರೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ.

ನಿಗದಿತ ಸಂಖ್ಯೆಯ ಜನರ ಗಂಟಲ ದ್ರವ ಪರೀಕ್ಷೆ ಮಾಡಬೇಕು ಹಾಗೂ ಕ್ವಾರಂಟೈನ್ ಮಾಡಬೇಕೆಂದು ನಮಗೆ ಗುರಿ ನಿಗದಿಯಾಗಿರುತ್ತದೆ. ಹೀಗಾಗಿ ಸೋಂಕಿತರ ಸಂಬಂಧಿಕರ ಮಾಹಿತಿ ಪಡೆದು ಕ್ವಾರಂಟೈನ್​ಗೆ ಶಿಫಾರಸು ಮಾಡುತ್ತೇವೆ.- ಟಿ. ಮಾರುತಿ, ಸಹಾಯಕ ನಿರ್ದೇಶಕ, ಜಿಲ್ಲಾ ಸಂಖ್ಯಾ ಸಂಗ್ರಹಣಾ ಅಧಿಕಾರಿ ಕಚೇರಿ

ಕರೊನಾ ಗೆದ್ದು ಬಂದ ಕಾನ್ಸ್​ಟೇಬಲ್​ಗೆ ಸನ್ಮಾನ

ಹುಬ್ಬಳ್ಳಿ: ಕರೊನಾ ಗೆದ್ದು ಬಂದ ಇಲ್ಲಿನ ಉತ್ತರ ಸಂಚಾರ ಪೊಲೀಸ್ ಠಾಣೆ ಕಾನ್ಸ್​ಟೇಬಲ್ ಸೋಮು ಹೆಳ್ಳಕ್ಕನವರಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪುಷ್ಪವೃಷ್ಟಿ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು.

ಠಾಣೆಗೆ ಆಗಮಿಸಿದ ಸೋಮು ಅವರ ಮೇಲೆ ಪುಷ್ಪವೃಷ್ಠಿ ಮಾಡಿ ಚಪ್ಪಾಳೆ ಮೂಲಕ ಸ್ವಾಗತಿಸಿದರು. ಶಾಲು, ಹಾರ ಹಾಕಿ ಸನ್ಮಾನಿಸಿದರು. ‘ಎಲ್ಲರೂ ನಿಮ್ಮೊಂದಿಗೆ ಇದ್ದೇವೆ.ಧೈರ್ಯದಿಂದ ಸೇವೆ ಮುಂದುವರಿಸಿ’ ಎಂದು ಇನ್ಸ್​ಪೆಕ್ಟರ್ ಶ್ರೀಕಾಂತ ತೊಟಗಿ ನೈತಿಕ ಸ್ಥೈರ್ಯ ತುಂಬಿದರು.

ಆಂಟಿಜೆನ್ ನೆಗೆಟಿವ್ ಬಂದರೆ ಆರ್​ಟಿಪಿಸಿಆರ್ ಕಡ್ಡಾಯ

ಧಾರವಾಡ: ನೆಗಡಿ, ಕೆಮ್ಮು, ಜ್ವರದ ಲಕ್ಷಣಗಳಿರುವ ವ್ಯಕ್ತಿಗಳ ರ್ಯಾಪಿಡ್ ಆಂಟಿಜನ್ ಪರೀಕ್ಷೆ ವರದಿ ನೆಗೆಟಿವ್ ಬಂದರೆ ಕೂಡಲೆ ಅವರನ್ನು ಕಡ್ಡಾಯವಾಗಿ ಆರ್​ಟಿಪಿಸಿಆರ್ (ರಿಯಲ್ ಟೈಮ್ ಪಾಲಿಮರೇಸ್ ಚೈನ್ ರಿಯಾಕ್ಷನ್) ಪರೀಕ್ಷೆಗೂ ಒಳಪಡಿಸಿ ಪ್ರಯೋಗಾಲಯ ಮಾದರಿ ಸಂಗ್ರಹಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಜಿಲ್ಲಾ ಆರೋಗ್ಯ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲಾದ್ಯಂತ ಎಲ್ಲ ಸ್ವಾ್ಯಬ್ ಸಂಗ್ರಹಣೆ ಕೇಂದ್ರಗಳ ಅರೆ ವೈದ್ಯಕೀಯ ಹಾಗೂ ಸಹಾಯಕ ಸಿಬ್ಬಂದಿಗೂ ಈ ಕುರಿತು ಸ್ಪಷ್ಟ ಸೂಚನೆ ನೀಡಬೇಕು. ಮೊದಲ ಆದ್ಯತೆಯಡಿ ಆರ್​ಎಟಿ ಕಿಟ್ ಪರೀಕ್ಷೆ ಕೈಗೊಳ್ಳಬೇಕು. ರೋಗ ಲಕ್ಷಣವಿರುವ ವ್ಯಕ್ತಿಗಳ ವರದಿ ನೆಗೆಟಿವ್ ಬಂದರೆ ಆರ್​ಟಿಪಿಸಿಆರ್ ತಪಾಸಣೆ ನಡೆಸಿ ವರದಿ ಅಪ್​ಡೇಟ್ ಮಾಡಬೇಕು. 2 ದಿನಗಳಿಂದ ಜಿಲ್ಲೆಯಲ್ಲಿ ನಿತ್ಯ ಸುಮಾರು 2500 ಜನರ ತಪಾಣೆ ನಡೆಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಜಿಪಂ ಸಿಇಒ ಡಾ. ಬಿ.ಸಿ. ಸತೀಶ ಮಾತನಾಡಿ, ಜಿಲ್ಲೆಯ ಆಸ್ಪತ್ರೆಗಳಿಗೆ ಆಕ್ಸಿಜನ್ ಕಿಟ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕರ್ತವ್ಯ ನಿರ್ವಹಿಸಬೇಕು ಎಂದರು.

ಪ್ಲಾಸ್ಮಾ ಥೆರಪಿಗೆ ಕಿಟ್ ಕೊರತೆ

ಹುಬ್ಬಳ್ಳಿ: ಕಿಮ್ಸ್​ನಲ್ಲಿ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ಮಾಡಲು ‘ಪ್ಲಾಸ್ಮಾ ವಿಂಗಡಣೆಯ ಡಿಸ್ಪೋಸೆಬಲ್ ಕಿಟ್’ ಬರ ಉಂಟಾಗಿದೆ. ಹೀಗಾಗಿ, ಒಂದು ವಾರದಿಂದ ಪ್ಲಾಸ್ಮಾ ಥೆರಪಿ ನಡೆಯುತ್ತಿಲ್ಲ ಎಂದು ತಿಳಿದುಬಂದಿದೆ.

ಕಿಮ್ಸ್​ಗೆ ಡಿಸ್ಪೋಸೆಬಲ್ ಕಿಟ್​ಅನ್ನು ಧಾರವಾಡ ಜಿಲ್ಲಾಡಳಿತ ಒದಗಿಸಬೇಕಿದೆ. ಪ್ರತಿ ಕಿಟ್​ಗೆ 6500 ರೂ.ದರವಿದ್ದು, ಒಂದು ಬಾಕ್ಸ್​ನಲ್ಲಿ 16 ಕಿಟ್ ಇರುತ್ತದೆ. ಕನಿಷ್ಠ 2 ಬಾಕ್ಸ್ ಸದ್ಯ ಬೇಕಿದೆ. ಆದರೆ, ಜಿಲ್ಲಾಡಳಿತ ಹಾಗೂ ಕಿಟ್ ಪೂರೈಸುವ ಕಂಪನಿ ಮಧ್ಯೆ ಹಣದ ವಿಷಯದಲ್ಲಿ ಹಗ್ಗ ಜಗ್ಗಾಟ ನಡೆದಿದೆ ಎಂದು ಹೇಳಲಾಗಿದೆ.

ಮೊದಲು ಹಣ ಪಾವತಿಸಿ ಎಂದು ಪೂರೈಕೆದಾರ ಕಂಪನಿ ಕೇಳುತ್ತಿದೆ. ಮೊದಲು ಕಿಟ್ ಪೂರೈಸಿ, ನಂತರ ಹಣ ನೀಡುತ್ತೇವೆ ಎಂದು ಜಿಲ್ಲಾಡಳಿತ ಹೇಳುತ್ತಿದೆ, ಹೀಗಾಗಿ ಕಿಮ್ಸ್​ನಲ್ಲಿ ಚಿಕಿತ್ಸೆ ವಿಳಂಬವಾಗುತ್ತಿದೆ ಎನ್ನಲಾಗಿದೆ.

ಈ ಮಧ್ಯೆ ದೆಹಲಿಯ ಕಂಪನಿಯೊಂದು ಪೂರೈಕೆಗೆ ಒಪ್ಪಿಕೊಂಡಿದೆ, ಇನ್ನೆರಡು ದಿನದಲ್ಲಿ ಕಿಟ್ ತಲುಪಲಿದೆ ಎಂದು ಅಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.

ವಿಳಂಬದ ಕುರಿತು ಪ್ರತಿಕ್ರಿಯೆಗೆ ಸಂರ್ಪಸಿದಾಗ, ನಿರಂತರ ಸಭೆಗಳಲ್ಲಿ ಭಾಗಿಯಾಗುತ್ತಿರುವ ಜಿಲ್ಲಾಧಿಕಾರಿಯವರು ಲಭ್ಯವಾಗಲಿಲ್ಲ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net