

ಬಂಟ್ವಾಳ: ಅಮ್ಟೂರು ಗ್ರಾಮದ ಮೊಗರ್ನಾಡು ದೇವಮಾತಾ ಚರ್ಚಿನ 250ನೇ ವರ್ಷಾಚರಣೆಗೆ ಕ್ರಿಸ್ಮಸ್ ಸಂಭ್ರಮಾಚರಣೆ ಸಂದರ್ಭ ಚಾಲನೆ ನೀಡಲಾಯಿತು.
ಮಂಗಳೂರು ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ವಿಲ್ಫ್ರೆಡ್ ಪ್ರಕಾಶ್ ಡಿಸೋಜ ಚರ್ಚಿನ 250ನೇ ವರ್ಷಾಚರಣೆಯ ಲಾಂಛನವನ್ನು ಅನಾವರಣಗೊಳಿಸಿದರು.
ಚರ್ಚ್ ವ್ಯಾಪ್ತಿಯ ಭಕ್ತರು ಐತಿಹಾಸಿಕ ಕ್ಷಣವನ್ನು ಸ್ಮರಣೀಯಗೊಳಿಸುವ ಜತೆಗೆ ಏಕತೆ, ನಂಬಿಕೆ ಮತ್ತು ಕೃತಜ್ಞತೆಯ ಸಂಕೇತವಾಗಿ ಬರೋಬ್ಬರಿ 250 ಕ್ಯಾಂಡಲ್ಗಳನ್ನು ಅದೇ ಸಂಖ್ಯೆಯ ಆಕಾರದಲ್ಲಿ ಬೆಳಗಿಸಿ ಸಂಭ್ರಮಿಸಿದರು.
ಚರ್ಚಿನ ಪ್ರಧಾನ ಧರ್ಮಗುರು ಅನಿಲ್ ಕೆನ್ಯುಟ್ ಡಿಮೆಲ್ಲೊ ವರ್ಷವಿಡೀ ನಡೆಯುವ 250ನೇ ವರ್ಷಾಚರಣೆ ಕಾರ್ಯಕ್ರಮದ ಪಟ್ಟಿ ಅನಾವರಣಗೊಳಿಸಿದರು. ವರ್ಷಾಚರಣೆಯ ಥೀಮ್ ಹಾಡನ್ನು ಪ್ರಸ್ತುತ ಪಡಿಸಲಾಯಿತು.
ಐತಿಹಾಸಿಕ ವರ್ಷಾಚರಣೆಯಲ್ಲಿ ಆಧ್ಯಾತ್ಮಿಕತೆ, ಸಮುದಾಯ ಸಂಘಟನೆ, ಸಾಂಸ್ಕೃತಿಕ ವೈಭವ ಸೇರಿದಂತೆ ಚರ್ಚಿನ ಗೌರವಯುತ ಪರಂಪರೆಯನ್ನು ಮುಂದುವರಿಸುವ ದೃಷ್ಟಿಯಿಂದ ಹತ್ತಾರು ಕಾರ್ಯಕ್ರಮಗಳನ್ನು ನಡೆಸುವ ಕುರಿತು ಈ ಸಂದರ್ಭ ವಿವರಿಸಲಾಯಿತು. ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಸಂತೋಷ್ ಡಿಸೋಜ, ಕಾರ್ಯದರ್ಶಿ ವಿಲ್ರೆಡ್ ಲೋಬೊ, ಸರ್ವ ಆಯೋಗಗಳ ಸಂಚಾಲಕಿ ಎಮಿಲಿಯಾ ಡಿಕುನ್ಹಾ ಉಪಸ್ಥಿತರಿದ್ದರು.