

ಬೆಂಗಳೂರು : ರಾಜಧಾನಿಯಲ್ಲಿ ಬುಧವಾರ 728 ಹೊಸ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, 2,507 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಮತ್ತೊಂದೆಡೆ ಸೋಂಕಿಗೆ 13 ಮಂದಿ ಬಲಿಯಾಗಿದ್ದಾರೆ. ಕಳೆದ ಒಂದು ವಾರದಿಂದ ಕರೊನಾ ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆ ಒಂದು ಸಾವಿರಕ್ಕಿಂತ ಕಡಿಮೆಯಾಗಿತ್ತು. ಆದರೆ, ಬುಧವಾರ ಬರೋಬ್ಬರಿ 2,507 ಮಂದಿ ಸೋಂಕು ಮುಕ್ತರಾಗುವ ಮೂಲಕ ಗುಣಮುಖರ ಸಂಖ್ಯೆ ಹೆಚ್ಚಳವಾಗಿದೆ. ಇನ್ನು ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,75,891ಕ್ಕೆ ಏರಿಕೆಯಾಗಿದ್ದು, ಗುಣಮುಖರ ಸಂಖ್ಯೆ 3,54,004ಕ್ಕೆ ತಲುಪಿದೆ.
ಸೋಂಕಿಗೆ 13 ಬಲಿ: ಕಳೆದ ಹದಿನೈದು ದಿನಗಳಿಂದ ಸರಾಸರಿ 10ಕ್ಕಿಂತ ಕಡಿಮೆ ಜನರು ಸೋಂಕಿನಿಂದ ಸಾವನ್ನಪ್ಪುವ ಪ್ರಕರಣ ವರದಿಯಾಗುತ್ತಿತ್ತು. ಆದರೆ, ಬುಧವಾರ ಏಳು ಮಂದಿ 60 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರು ಒಳಗೊಂಡಂತೆ 13 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಒಟ್ಟು ಕೋವಿಡ್ ಸಾವಿನ ಸಂಖ್ಯೆ 4,210ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ ಕೋವಿಡ್ ನಿಗದಿತ ಆಸ್ಪತ್ರೆ, ಆರೈಕೆ ಕೇಂದ್ರಗಳು ಹಾಗೂ ಮನೆ ನಿಗಾದಲ್ಲಿ 17,676 ಸಕ್ರಿಯ ಪ್ರಕರಣಗಳಿದ್ದಾರೆ. ಈ ಪೈಕಿ 116 ಜನರಿ ಗಂಭೀರ ಸ್ಥಿತಿಯಲ್ಲಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.