ಮುಗಿಯದ ಕೋಲ್ಡ್ ಸ್ಟೋರೇಜ್ ಕಾಮಗಾರಿ

13 CHN 2
Published on

ಟಿ.ಎನ್.ಜಗದೀಶ್ ಚನ್ನಗಿರಿ

ಚನ್ನಗಿರಿ ತಾಲೂಕಿನಲ್ಲಿ ಶೇ.95 ರಷ್ಟು ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಬೆಳೆಗಳಿಗೆ ಉತ್ತಮ ಬೆಲೆ ಸಿಗುವವರೆಗೆ ದೀರ್ಘಕಾಲದವರೆಗೆ ಕೆಡದಂತೆ ಇಡಲು ನಿರ್ವಿುಸಲಾಗುತ್ತಿರುವ ಶೀತಲ ಶೇಖರಣೆ ಘಟಕ (ಕೋಲ್ಡ್ ಸ್ಟೋರೇಜ್) ಕಾಮಗಾರಿ ಅರ್ಧಕ್ಕೆ ನಿಂತಿದೆ. ಈ ಘಟಕ ಪೂರ್ಣಗೊಳ್ಳುವುದು ಯಾವಾಗ ಎಂದು ರೈತರು ಎದುರು ನೋಡುತ್ತಿದ್ದಾರೆ.

ತೋಟಗಾರಿಕೆ ಹಾಗೂ ಕೃಷಿ ಉತ್ಪನ್ನ ಹಾಳಾಗುತ್ತದೆ ಎನ್ನುವ ಕಾರಣಕ್ಕೆ ಬೆಂಬಲ ಬೆಲೆ ಸಿಗದಿದ್ದರೂ ಹತ್ತಿರದ ಮಧ್ಯವರ್ತಿಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಕೃಷಿಕರಿಗೆ ಲಾಭದ ಹೊರತಾಗಿ ಜಮೀನಿಗೆ ಹಾಕಿದ ಬಂಡವಾಳ ವಾಪಸ್ ಪಡೆಯುವುದು ಹರಸಾಹಸವಾಗಿದೆ.

ರೈತರು ಮಾರುಕಟ್ಟೆಯಲ್ಲಿ ಬೆಳೆಗಳಿಗೆ ಉತ್ತಮ ಬೆಲೆ ಸಿಗುವವರೆಗೆ ಸಂಗ್ರಹಿಸಿಡಲು 2022 ರಲ್ಲಿ ಶಾಸಕರಾಗಿದ್ದ ಮಾಡಾಳು ವಿರೂಪಾಕ್ಷಪ್ಪ ಅವರು ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಆರ್​ಐಡಿಪಿ ನಬಾರ್ಡ್ ಯೋಜನೆಯಿಂದ 2500 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯವುಳ್ಳ ಕೋಲ್ಡ್ ಸ್ಟೋರೇಜ್ ಘಟಕವನ್ನು ಪ್ರಾರಂಭಿಸಲು ತೀರ್ವನಿಸಿ ತಾಲೂಕಿನ ದೇವರಹಳ್ಳಿ ಗ್ರಾಮ ಸಮೀಪದ 4 ಸಾವಿರ ಚದರ ಅಡಿ ಅಳತೆ ಇರುವ ನಿವೇಶನವನ್ನು ಹುಡುಕಿ ಅದಕ್ಕೆ 9.5 ಕೋಟಿ ರೂ. ಮಂಜೂರು ಮಾಡಿಸಿದರು. ಅಲ್ಲದೇ ಕೃಷಿ ಸಚಿವರಾಗಿದ್ದ ಬಿ.ಸಿ. ಪಾಟೀಲ್ ಅವರಿಂದ 2023ರ ಫೆಬ್ರವರಿ 8 ರಂದು ಗುದ್ದಲಿ ಪೂಜೆ ನೆರವೇರಿಸಿದರು.

ವರ್ಷಗಟ್ಟಲೇ ಬೆಳೆಗಳನ್ನು ಸಂಗ್ರಹ ಮಾಡಿಡುವ ಕೋಲ್ಡ್ ಸ್ಟೋರೇಜ್ ಅನ್ನು ನಿರ್ವಿುಸಲು ವಿರೂಪಾಕ್ಷಪ್ಪ ಅವರು ನುರಿತ ತಜ್ಞರನ್ನು ಕರೆತಂದು, ಅಧಿಕಾರಿಗಳ ಜತೆ ಓಡಾಟ ನಡೆಸಿ ಘಟಕ ಹೇಗೆ ಇರಬೇಕು ಎಂಬುದನ್ನು ಯೋಜನೆ ಮಾಡಿ, ರೂರಲ್ ಅಗ್ರಿಕಲ್ಚರ್ ಇನ್​ಫ್ರಾಸ್ಟ್ರಕ್ಚರ್ ಎಂಬ ಸಂಸ್ಥೆಗೆ ಟೆಂಡರ್ ಕರೆದು 9 ತಿಂಗಳ ಅವಧಿಗೆ ಕೆಲಸ ನೀಡಿದರು. ಆದರೆ ಕಾಮಗಾರಿ 2 ವರ್ಷ ಕಳೆದರೂ ಮುಗಿದಿಲ್ಲ.

ತಾಲೂಕಿನ ದೇವರಹಳ್ಳಿ, ರಾಮಗೊಂಡನಹಳ್ಳಿ, ಚಿಕ್ಕದೇವರಹಳ್ಳಿ ಸೇರಿ ಅನೇಕ ಗ್ರಾಮಗಳಲ್ಲಿ ತರಕಾರಿ ಬೆಳೆಯನ್ನು ಸಂತೇಬೆನ್ನೂರು, ಕುಲೇನೂರು, ಅಬ್ಬಿಗೆರೆ, ಕೆರೆಬಿಳಚಿ ಸೇರಿ ಹಲವು ಗ್ರಾಮಗಳಲ್ಲಿ ಮಾವಿನಹಣ್ಣುಗಳನ್ನು ಬೆಳೆಯುತ್ತಾರೆ. ಇವುಗಳನ್ನು ಸಂಗ್ರಹ ಮಾಡಲಾಗದೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ಮಾವಿಗೆ ಉತ್ತಮ ಬೆಲೆಯಿದ್ದರೂ ಸಹ ಹಾಳಾಗುತ್ತದೆ ಎಂದು ಹೊರರಾಜ್ಯಗಳಿಗೆ ಹೋಗಿ ಮಾರಾಟ ಮಾಡಿ ಬರುವ ಪರಿಸ್ಥಿತಿ ಇದೆ.

ಸಂತೇಬೆನ್ನೂರು ಭಾಗದ ಸುತ್ತಮುತ್ತ ವಿವಿಧ ಜಾತಿಯ ಮಾವಿನಹಣ್ಣನ್ನು ಬೆಳೆಯಲಾಗುತ್ತದೆ. ಮೊದಲು ಸಂತೇಬೆನ್ನೂರಿನಲ್ಲಿ ಘಟಕ ಸ್ಥಾಪನೆಗೆ ನಿವೇಶನ ಹುಡುಕಾಟ ನಡೆದಿತ್ತು. ನಿವೇಶನ ಸಿಗದ ಕಾರಣ ದೇವರಹಳ್ಳಿಯನು ಆಯ್ದುಕೊಳ್ಳಲಾಯಿತು. ಗುತ್ತಿಗೆದಾರರು ಅವಧಿಯೊಳಗೆ ಕೆಲಸ ಮುಗಿಸಬೇಕಿತ್ತು. ಆದರೆ ತಾಂತ್ರಿಕ ತೊಂದರೆಯಿಂದ ಕಾಮಗಾರಿ ಹಾಗೇ ನಿಂತಿದೆ. ಮೇಲಧಿಕಾರಿಗಳ ಜತೆ ಮಾತನಾಡಿ, ಕೆಲಸ ಮುಗಿಸುವ ಪ್ರಯತ್ನ ಮಾಡಲಾಗುವುದು. | ಅರುಣ್, ತಾಲೂಕು ಸಹಾಯಕ ಕೃಷಿ ನಿರ್ದೇಶಕ, ಕೃಷಿ ಇಲಾಖೆ ಚನ್ನಗಿರಿ. ಬೆಳೆ ಕಟಾವು ಮಾಡಿದ ದಿನದಲ್ಲಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವುದಿಲ್ಲ. ಹಾಗಾಗಿ ಎಂಬ ಕಾರಣಕ್ಕೆ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗುತ್ತದೆ. ಕೋಲ್ಡ್ ಸ್ಟೋರೇಜ್ ನಿರ್ವಣವಾದರೆ ಬೆಲೆ ಸಿಗುವವರೆಗೆ ಸಂಗ್ರಹ ಮಾಡಬಹುದು. ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಆಸಕ್ತಿ ತೋರಿಸಿ ಬೇಗ ಕಾಮಗಾರಿ ಪೂರ್ಣಗೊಳಿಸಿ ಕೊಡಬೇಕು. | ಕುಮಾರ್ ಕೋಗಲೂರು, ರೈತ ಮುಖಂಡ ಘಟಕ ನಿರ್ವಣಕ್ಕೆ ಅನುದಾನ ಮಂಜೂರಾದರೂ ಗುತ್ತಿಗೆದಾರರು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ರೈತರಿಗೆ ಅವಶ್ಯವಾದ ಕಾರ್ಯವನ್ನು ಮುಗಿಸದಿರುವುದು ಸರಿಯಲ್ಲ. ರೈತರ ಪರವಾದ ಸರ್ಕಾರ ಎಂದು ಬಾಯಿ ಮಾತಿನಲ್ಲಿ ಹೇಳಿದರೆ ಸಾಲದು, ಅವರ ಅಭಿವೃದ್ಧಿಗೆ ಶ್ರಮಿಸಬೇಕು. | ಎ.ಎಸ್. ಬಸವರಾಜ್, ತಾಪಂ ಮಾಜಿ ಅಧ್ಯಕ್ಷ, ದೇವರಹಳ್ಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net