

ಆಯನೂರು: ಆಕೆಯ ಆಕೌಂಟ್‌ನಲ್ಲಿ ಇದ್ದಿದ್ದೇ ಎರಡೂವರೆ ಸಾವಿರ ರೂಪಾಯಿ. ಆದರೆ ಆಕೆ ಹಣಕ್ಕಾಗಿ ನೀಡಿದ್ದು 20 ಸಾವಿರ ರೂ. ಚೆಕ್. ಇಷ್ಟೇ ಹಣ ಬೇಕು ಎಂಬ ಆಕೆಯ ಪಟ್ಟಿಗೆ ಬ್ಯಾಂಕ್ ಸಿಬ್ಬಂದಿ ಸುಸ್ತಾಗಿ ಪೊಲೀಸರ ಮೊರೆ ಹೋಗಬೇಕಾಯಿತು. ಈ ಘಟನೆ ನಡೆದಿದ್ದು ಸೋಮವಾರ ಆಯನೂರಿನ ಬ್ಯಾಂಕ್ ಶಾಖೆಯೊಂದರಲ್ಲಿ.
ಬ್ಯಾಂಕಿಗೆ ಬೆಳಗ್ಗೆ 11 ಗಂಟೆ ಸುಮಾರಿಗೆ ಆಗಮಿಸಿದ ಮಹಿಳೆ(ಗ್ರಾಹಕಿ) 20 ಸಾವಿರದ ಚೆಕ್ ನೀಡಿ ಹಣ ಕೊಡುವಂತೆ ಕೇಳಿದ್ದಾಳೆ. ಆದರೆ ಮಹಿಳೆಯ ಖಾತೆಯಲ್ಲಿ ಕೇವಲ ಎರಡೂವರೆ ಸಾವಿರ ರೂ. ಇದ್ದ ಕಾರಣ 2 ಸಾವಿರ ರೂ. ತೆಗೆದುಕೊಳ್ಳುವಂತೆ ಬ್ಯಾಂಕಿನ ಸಿಬ್ಬಂದಿ ತಿಳಿಸಿದ್ದಾರೆ. ನನಗೆ 20 ಸಾವಿರವೇ ಬೇಕೆಂದು ರಚ್ಚೆ ಹಿಡಿದ ಮಹಿಳೆ ಮಧ್ಯಾಹ್ನ 2 ಗಂಟೆಯವರೆಗೆ ಅಧಿಕಾರಿಗಳನ್ನು ಸತಾಯಿಸಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದೆ ಮೈಮೇಲೆ ದೇವರು ಬಂದಂತೆ ವರ್ತಿಸತೊಡಗಿದ್ದಾಳೆ. ಕೂಗಾಡಿ, ಚೀರಾಡಿ ಬ್ಯಾಂಕ್ ಗ್ರಾಹಕರಿಗೆ ಕಿರಿಕಿರಿ ಉಂಟುಮಾಡಿದ್ದಾಳೆ.
ನನಗೆ ದುಡ್ಡು ಕೊಡಬೇಕು ಅಷ್ಟೇ ಹ್ಞೂಂ, ನಾನು ದೇವರು ಹ್ಞೂಂ, ನನಗೆ ಕತ್ತು ನೋಯುತ್ತಿದೆ ಹ್ಞೂಂ, ಹೊಟ್ಟೆ ಹಸಿಯುತ್ತಿದೆ, ಮನೆಗೆ ಹೋಗಬೇಕು. ನಾನು ಕೇಳಿದಷ್ಟು ಹಣ ನೀಡಿ. ನಾನು ದೇವರು ಕೇಳಿದರೂ ಹಣ ನೀಡುವುದಿಲ್ಲವೇ ಎಂದು ರಂಪಾಟ ಮಾಡಿದ್ದಾಳೆ. ಕೊನೆಗೆ ಬ್ಯಾಂಕಿನ ಅಧಿಕಾರಿಗಳು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ಪೊಲೀಸರು ಬಂದು, ಸುಮ್ಮನೆ ದುಡ್ಡು ಕೊಡುತ್ತಾರೇನಮ್ಮ ಎಂದು ಕೇಳಿದಾಗ ಕೊಡಬೇಕು ಅಷ್ಟೇ ಹ್ಞೂಂ ಎಂದಳು. ಪೊಲೀಸರೇ ಅನುಕಂಪದಿಂದ 500 ರೂ. ನೋಟು ನೀಡಿದರೆ ಇದು 500 ರೂಪಾಯಿ ಎಂದು ನಿರಾಕರಿಸಿದಳು. ಚೆಕ್ ನೀಡಿದರೆ, ಇದು ಬೇಡ ನನಗೆ 20 ಸಾವಿರವೇ ಬೇಕು ಎಂದು ಹಠ ಹಿಡಿದು ಕುಳಿತೇಬಿಟ್ಟಳು.
ಕೊನೆಗೆ ಇವಳ ಕಾಟ ತಾಳಲಾರದೆ ಆಕೆಯ ತಾಯಿಯನ್ನು ಕರೆತಂದ ಪೊಲೀಸರು ತಾಯಿಯ ಜತೆ ಕಳುಹಿಸಿದ ಬಳಿಕವೇ ಬ್ಯಾಂಕಿನ ಸಿಬ್ಬಂದಿ ನಿಟ್ಟುಸಿರು ಬಿಡುವಂತಾಯಿತು. ಮಹಿಳೆಯ ಅಸಹಾಯಕತೆ ನೋಡಿದ ಎಎಸ್‌ಐ ನಂಜುಂಡಪ್ಪ 500 ರೂ. ನೀಡಿದರು. ಹರಸಾಹಸ ನಡೆಸಿ ಪಿಎಸ್‌ಐ ಶಾಂತರಾಜ್, ಎಎಸ್‌ಐ ನಂಜುಂಡಯ್ಯ, ಪಿಸಿ ಲಕ್ಷ್ಮೀ, ಹೆಡ್ ಕಾನ್‌ಸ್ಟೇಬಲ್ ಸತೀಶ್ ತಾಯಿಯ ಜತೆ ಕಳಿಸಿಕೊಟ್ಟರು.
ಈಕೆ ಆಯನೂರು ಸಮೀಪದ ಮಂಡಘಟ್ಟ ಗ್ರಾಮದ ಮಹಿಳೆಯಾಗಿದ್ದು ಮಾನಸಿಕ ಅಸ್ವಸ್ಥೆ ಎಂದು ತಿಳಿದುಬಂದಿದೆ. ಗಂಡ ಮೃತಪಟ್ಟಿದ್ದು ಮನೆಯಲ್ಲಿ ಕೂಲಿ ಕೆಲಸ ಮಾಡುವ ತಾಯಿಯೊಂದಿಗೆ ಇರುವ ಈಕೆ ಶಿವಮೊಗ್ಗದ ಮಾನಸಿಕ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಇತ್ತೀಚೆಗೆ ಔಷಧ ತೆಗೆದುಕೊಂಡಿಲ್ಲ ಎಂದು ಈಕೆಯ ತಾಯಿ ತಿಳಿಸಿದರು.