

ಕಡೂರು: ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸಬಲರಾಗಿಸಲು ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ನಿಗಮದಡಿ ರಾಜ್ಯಸರ್ಕಾರ ಪ್ರಸಕ್ತ ಸಾಲಿಗೆ 250 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು ಇದರ ಸದ್ಬಳಕೆಗೆ ಕ್ರೈಸ್ತ ಸಮುದಾಯ ಆದ್ಯತೆ ನೀಡಬೇಕು ಎಂದು ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ನಿರ್ದೇಶಕ ಹರ್ಷಮೆಲ್ವಿನ್ ಹಸ್ರಾದೊ ತಿಳಿಸಿದರು.
ಪಟ್ಟಣದ ನಿತ್ಯಾಧಾರ ಮಾತೆ ಚರ್ಚ್ ಆವರಣದಲ್ಲಿ ಶುಕ್ರವಾರ ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಬಗ್ಗೆ ಪ್ರಚಾರ ಮತ್ತು ಜಾಗೃತಿ ಮೂಡಿಸುವ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಈ ಹಿಂದೆ ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣ ನಿಧಿಯಡಿ ಸವಲತ್ತುಗಳನ್ನು ಪಡೆದು ಕೊಳ್ಳುವಾಗ ಕ್ರಿಶ್ಚಯನ್ ಸಮುದಾಯದ ಲಾನುಭವಿಗಳಿಗೆ ಯಾವುದೇ ಸೌಲಭ್ಯಗಳು ಸಿಗದೆ ಮರಿಚಿಕೆಯಾಗುತ್ತಿದ್ದವು. ಇದನ್ನು ಮನಗಂಡ ರಾಜ್ಯಸರ್ಕಾರ ಕ್ರಿಶ್ಚಯನ್ ಸಮುದಾಯಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸಿ ಅನುದಾನ ಮೀಸಲಿಟ್ಟು ಸಮುದಾಯದ ಅಭಿವೃದ್ಧಿಗೆ ಒತ್ತುಕೊಡುತ್ತಿದೆ ಎಂದರು.
ನಿಗಮದಡಿ 10 ಯೋಜನೆಗಳಿಗೆ ಚಾಲನೆ ದೊರೆತಿದ್ದು, ಸಮುದಾಯದ ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಧನ, ಅರಿವು ಯೋಜನೆ, ಮಹಿಳೆಯರಿಗೆ ಸ್ವಾವಲಂಬಿ ಯೋಜನೆ, ಶ್ರಮಶಕ್ತಿ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಸವಲತ್ತುಗಳನ್ನು ಪಡೆದುಕೊಳ್ಳಲು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸಮುದಾಯಕ್ಕೆ ಸಶ್ಮಾನ ಮತ್ತು ಸಮುದಾಯ ಭವನ ನಿರ್ಮಾಣದ ಬೇಡಿಕೆಗೆ ನಿಗಮದ ಸಮಿತಿ ಬಳಿ ಚರ್ಚಿಸಿ ಕ್ರಮವಹಿಸಲಾಗುತ್ತದೆ. ಈಗಾಗಲೇ ಚರ್ಚ್‌ಗಳ ದುರಸ್ತಿಗೆ ಸರ್ಕಾರದಿಂದ ಅನುದಾನ ನೀಡಲಾಗುತ್ತಿದ್ದು, ಸಮುದಾಯ ಭವನ ನಿರ್ಮಾಣಕ್ಕೆ ಸೂಕ್ತ ಜಾಗ ಮತ್ತು ದಾಖಲೆ ಲಭ್ಯವಾಗಿದ್ದರೆ ನಿಗಮದಿಂದ 50 ಲಕ್ಷ ರೂ. ಅನುದಾನ ನೀಡಲಾಗುತ್ತದೆ ಎಂದರು.