250 ಕೋಟಿ ರೂ. ಸ್ವತ್ತು ಪರಭಾರೆಗೆ ಹುನ್ನಾರ : ಕೆಂಗೇರಿ ಉಪನಗರ ಪ್ಲೇಗ್ರೌಂಡ್ ಮೇಲೆ ಖಾಸಗಿಯವರ ಕಣ್ಣು

playground
Published on

ಆರ್​​.ತುಳಸಿಕುಮಾರ್​

ಬೆಂಗಳೂರು: ರಾಜಧಾನಿಯ ಮೊದಲ ಉಪನಗರ ಖ್ಯಾತಿಯ ಕೆಂಗೇರಿ ಸ್ಯಾಟಲೈಟ್ ಟೌನ್ ಬಡಾವಣೆಯಲ್ಲಿರುವ ಏಕೈಕ ಆಟದ ಮೈದಾನವನ್ನು ಖಾಸಗಿಯವರಿಗೆ ಪರಭಾರೆ ಮಾಡುವ ಹುನ್ನಾರ ನಡೆದಿದೆ.

ಹಾಲಿ ಬಿಡಿಎ ಸುಪರ್ದಿಯಲ್ಲಿರುವ 2 ಎಕರೆ 32 ಗುಂಟೆ ವಿಸ್ತೀರ್ಣದ ಸ್ವತ್ತು ಕೆಂಗೇರಿಯ ಆಯಾಕಟ್ಟಿನ ಜಾಗದಲ್ಲಿದೆ. ಮಾರುಕಟ್ಟೆಯಲ್ಲಿ 250 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯ ಹೊಂದಿರುವ ಈ ಅಮೂಲ್ಯ ಜಮೀನಿನ ಮೇಲೆ ಖಾಸಗಿಯವರ ಕಾಕದೃಷ್ಟಿ ಬಿದ್ದಿದೆ. ಬಿಡಿಎ ಮಾಡಿರುವ ಸಣ್ಣ ಎಡವಟ್ಟನ್ನು ತಮ್ಮ ಸ್ವಹಿತಾಸಕ್ತಿಗೆ ಬಳಸಿಕೊಳ್ಳಲು ಕೆಲ ಖಾಸಗಿ ವ್ಯಕ್ತಿಗಳು ಮಧ್ಯವರ್ತಿಗಳ ಮೂಲಕ ಪ್ರಾಧಿಕಾರದ ಕದ ತಟ್ಟಿದೆ.

ಪ್ರಸ್ತುತ ಕೆಂಗೇರಿ ಉಪನಗರ ಬಡಾವಣೆಯಲ್ಲಿ ಏಕೈಕ ಆಟದ ಮೈದಾನ ಇದೆ. ಸರಿಸುಮಾರು 10 ಸಾವಿರ ಕುಟುಂಗಳಿರುವ ಬಡಾವಣೆಯಲ್ಲಿ ಬೇರೆ ಪ್ಲೇಗ್ರೌಂಡ್ ಇಲ್ಲ. ಆದರೆ, ಬಿಡಿಎ ಲೇಔಟ್ ರಚಿಸುವಾಗ ನಿಯಮದಂತೆ ಆಟದ ಮೈದಾನಕ್ಕೆ ಜಾಗ ನಿಗದಿ ಮಾಡಿದ್ದರೂ, ಆನಂತರ ಅದನ್ನು ನಾಗರಿಕರ ಉದ್ದೇಶಕ್ಕೆ ಮೀಸಲಾದ ಸಿ.ಎ. ನಿವೇಶನವನ್ನಾಗಿ ಮಾರ್ಪಡಿಸಿದೆ. ಹೀಗಾಗಿ ಈ ಆಟದ ಮೈದಾನವು ಈವರೆಗೂ ಸಿ.ಎ. ಸೈಟ್ ಎಂದೇ ಪ್ರಾಧಿಕಾರದ ಕಡತಗಳಲ್ಲಿ ಉಳಿದುಬಿಟ್ಟಿದೆ. ಈ ವಿಚಾರವಾಗಿ 2008ರಲ್ಲಿ ನಡೆದ ಪ್ಲೇಗ್ರೌಂಡ್ ಉಳಿಸಿ ಅಭಿಯಾನಕ್ಕೆ 2010ರಲ್ಲಿ ಯಶಸ್ಸು ಸಿಕ್ಕಿತು. ಇದನ್ನಾಧರಿಸಿ ಬಿಡಿಎ 2010ರ ತನ್ನ ಮಂಡಳಿ ಸಭೆಯಲ್ಲಿ ಸಿ.ಎ.ಗೆ ಮೀಸಲಿದ್ದ 2.23 ಎಕರೆ ಜಾಗವನ್ನು ಸಂಘ-ಸಂಸ್ಥೆಗಳಿಗೆ ಹಂಚಿಕೆ ಮಾಡದೆ ಸ್ಥಳೀಯರ ಒತ್ತಾಯಕ್ಕೆ ಮಣಿದು ಪ್ಲೇಗ್ರೌಂಡ್ ಆಗಿ ಮುಂದುವರಿಸುವ ನಿರ್ಣಯ ಕೈಗೊಂಡಿತು. ಆದರೆ, ಬಡಾವಣೆ ನಕ್ಷೆಯಲ್ಲಿ ಆಟದ ಮೈದಾನವೆಂದು ಸ್ಥಿರೀಕರಣ ಮಾಡಲಿಲ್ಲ. ಆನಂತರವೂ ಪ್ರಾಧಿಕಾರ ಈ ಪ್ಲೇಗ್ರೌಂಡ್‌ಗೆ ಹೊನಳು ಬೆಳಕಿನ ದೀಪದ ವ್ಯವಸ್ಥೆ ಕೈಗೊಂಡು ವಿವಿಧ ಕ್ರೀಡಾಕೂಟಗಳಿಗೆ ಬೆಂಬಲ ನೀಡಿತು.

ಶಾಸಕರ ಪತ್ರಕ್ಕೆ ಸಿಗದ ಮಾನ್ಯತೆ:

2021ರ ಜೂ.15ರಂದು ಶಾಸಕ ಎಸ್.ಟಿ.ಸೋಮಶೇಖರ್ ಅವರು ಸ್ಥಳೀಯರ ಮನವಿಯಂತೆ ಆಟದ ಮೈದಾನವನ್ನು ಸ್ಟೇಡಿಯಂ ಆಗಿ ಪರಿವರ್ತಿಸಲು ಕೋರಿ ಈ ಜಾಗವನ್ನು ಬಿಬಿಎಂಪಿಗೆ ಹಸ್ತಾಂತರಿಸುವಂತೆ ಬಿಡಿಎಗೆ ಪತ್ರ ಬರೆದರು. ಇದನ್ನಾಧರಿ ಬಿಡಿಎ ಅದೇ ವರ್ಷದ ಡಿ.3ರಂದು ಪಾಲಿಕೆ ಆಯುಕ್ತರಿಗೆ ಪತ್ರ ಬರೆದು ಸಿ.ಎ. ಸೈಟ್ ಹಸ್ತಾಂತರಿಸಲು 30 ವರ್ಷದ ಗುತ್ತಿಗೆ ಅವಧಿಗೆ 9.61 ಕೋಟಿ ರೂ. ಹಾಗೂ ವಾರ್ಷಿಕ ಗುತ್ತಿಗೆ ಶುಲ್ಕವಾಗಿ 1.74 ಕೋಟಿ ರೂ. ಪಾವತಿಸಿದರೆ ಗುತ್ತಿಗೆ ನೋಂದಣಿ ಮಾಡಿಕೊಡುವುದಾಗಿ ಪತ್ರ ಬರೆಯಿತು. ಇದಕ್ಕೆ ಪ್ರತಿಕ್ರಿಯಸದ ಪಾಲಿಕೆ ಪ್ಲೇಗ್ರೌಂಡ್‌ಗಾಗಿ ಹಣ ಪಾವತಿಸುವ ಅಗತ್ಯವಿಲ್ಲ ಎಂದು ಅಧಿಕಾರಿ ಮಟ್ಟದಲ್ಲಿ ಚರ್ಚಿಸಿ ಮಾರುತ್ತರ ಬರೆಯಲಿಲ್ಲ. ಇತ್ತೀಚಿನ ನೆನಪೋಲೆ ಬರೆದರೂ ಪಾಲಿಕೆಯಿಂದ ಉತ್ತರ ಬಾರದ ಕಾರಣ ಬಿಡಿಎ ಆಟದ ಮೈದಾನವನ್ನು ಸಿ.ಎ. ರೂಪದಲ್ಲಿ ಬೇರೆ ಸಂಸ್ಥೆಗೆ ಹಂಚಿಕೆ ಮಾಡುವತ್ತ ದೃಷ್ಟಿ ಹರಿಸಿದೆ. ಇದರ ಸುಳಿವು ಅರಿತ ಕೆಲ ಖಾಸಗಿ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಪ್ರಾಧಿಕಾರಕ್ಕೆ ಭೇಟಿ ನೀಡಿ ತಮಗೆ ಗುತ್ತಿಗೆ ನೀಡುವ ಬಗ್ಗೆ ಮೌಖಿಕ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಬೆಳವಣಿಗೆ ಬಗ್ಗೆ ಮಾಹಿತಿ ಇಲ್ಲ ಎಂದು ಬಿಡಿಎ ಪ್ರತಿಕ್ರಿಯಿಸಿದೆ.

ನಿರ್ಣಯ ಸ್ಥಿರೀಕರಿಸಲು ಹಿಂದೇಟು:

2010ರಲ್ಲಿ ನಡೆದ ಬಿಡಿಎ ಮಂಡಳಿ ಸಭೆಯಲ್ಲಿ ಕೆಂಗೇರಿ ಉಪನಗರ ಬಡಾವಣೆಯ ಸಿ.ಎ. ಸೈಟ್ ಸಂಖ್ಯೆ-3ನ್ನು ಆಟದ ಮೈದಾನವನ್ನಾಗಿ ಉಳಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿರುವ ಕಾರಣ ಈ ಸ್ವತ್ತನ್ನು ಬೇರೆಯವರಿಗೆ ಹಂಚಿಕೆ ಮಾಡದಿರಲು ತೀರ್ಮಾನಿಸಲಾಯಿತು. ಈ ಸ್ವತ್ತು ಪ್ಲೇಗ್ರೌಂಡ್‌ಗೆ ಅವಶ್ಯವಿರುವುದರಿಂದ ಈ ಮುಂಚಿನ ಹಂಚಿಕೆಯನ್ನು ರದ್ದು ಮಾಡಲಾಗಿದೆ. ಅಂದರೆ ಹಾಲಿ ಬಳಕೆಯಾಗುತ್ತಿರುವ ಉದ್ದೇಶಕ್ಕೆ (ಆಟದ ಮೈದಾನ) ಬಳಸಿಕೊಳ್ಳಲು ಬಿಡಿಎ ಸ್ಥಿರೀಕರಣ ಮಾಡಲಿಲ್ಲ. ಬಡಾವಣೆ ನಕ್ಷೆಯಲ್ಲಿ ಮಾರ್ಪಾಡು ಮಾಡಬೇಕಿದ್ದ ನಗರ ಯೋಜನೆ ವಿಭಾಗ ತನ್ನ ಹೊಣೆಯನ್ನು ನಿಭಾಯಿಸದ ಕಾರಣ ಈಗ ಸಮಸ್ಯೆ ಕಗ್ಗಂಟಾಗಿ ಮಾರ್ಪಟ್ಟಿದೆ.

ಪ್ಲೇಗ್ರೌಂಡ್ ಕೈ ತಪ್ಪುವ ಭೀತಿ:

ಕೆಂಗೇರಿ ಉಪನಗರ ಬಡಾವಣೆಯ ಆಟದ ಮೈದಾನವು ಬಿಡಿಎ ಕಾಗದಪತ್ರಗಳಲ್ಲಿ ಸಿ.ಎ. ಸೈಟಾಗಿ ನಮೂದಾಗಿರುವ ಕಾರಣ ಈ ಜಾಗವು ಸ್ಥಳೀಯರ ಕೈತಪ್ಪುವ ಭೀತಿ ಎದುರಾಗಿದೆ. ಏಕೆಂದರೆ, 2020ರ ಜು.28ರ ನಗರಾಭಿವೃದ್ಧಿ ಇಲಾಖೆಯ ಅಧಿಸೂಚನೆ ಅನ್ವಯ ಬಿಡಿಎಗೆ ಸೇರಿದ ಸಿ.ಎ. ಸೈಟ್‌ಗಳನ್ನು ಈಗಾಗಲೇ ಗುತ್ತಿಗೆ ಪಡೆದಿರುವ ಸಂಸ್ಥೆಗಳಿಗೆ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿದೆ. ಈ ಅಧಿಸೂಚನೆ ದುರುಪಯೋಗಕ್ಕೆ ಒಳಗಾಗಿದ್ದು, ನಾಗರಿಕ ಸೌಲಭ್ಯಕ್ಕೆ ಮೀಸಲಾದ ನಿವೇಶನವನ್ನು ಕ್ರಯಕ್ಕೆ ಪಡೆಯಲು ಖಾಸಗಿಯವರು ಪೈಪೋಟಿಗೆ ಇಳಿದಿರುವುದು ಸದರಿ ಪ್ಲೇಗ್ರೌಂಡ್ ಜಾಗ ಅನ್ಯರ ಪಾಲಾಗುವುದೇ ಎಂಬ ಪ್ರಶ್ನೆ ಎದ್ದಿದೆ.

ನಾಳೆ ಅರ್ಜಿ ಸಮಿತಿ ಭೇಟಿ ನಿಗದಿ:

ಕೆಂಗೇರಿ ಉಪನಗರದ ಆಟದ ಮೈದಾನ ಕುರಿತು ಸಲ್ಲಿಕೆಯಾಗಿರುವ ದೂರು ಹಿನ್ನೆಲೆಯಲ್ಲಿ ವಿಧಾನಸಭೆಯ ಅರ್ಜಿ ಸಮಿತಿಯು ಈ ತಿಂಗಳ 24ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲು ನಿರ್ಧರಿಸಿದೆ. ಈ ವೇಳೆ ಪ್ಲೇಗ್ರೌಂಡ್ ಸ್ಥಿತಿಗತಿ, ಒಡೆತನ ಹಾಗೂ ಯಾವ ಉದ್ದೇಶಕ್ಕಾಗಿ ಆಟದ ಮೈದಾನ ಬಳಕೆಯಾಗುತ್ತಿರುವ ಕುರಿತು ಸಮಿತಿಯು ಮಾಹಿತಿ ಪಡೆಯಲಿದೆ.

ಪ್ಲೇಗ್ರೌಂಡ್​​, ಪಾರ್ಕ್ ಗಳನ್ನು ನೇರವಾಗಿ ಹಸ್ತಾಂತರಿಸಬೇಕೆಂಬ ನಿಯಮ ಇದೆ. ಹಾಲಿ ಪ್ರಕರಣದಲ್ಲಿ ಸಿ.ಎ. ಗುತ್ತಿಗೆ ಮೌಲ್ಯ ಪಾವತಿಸುವಂತೆ ಬಿಡಿಎಯಿಂದ ಪತ್ರ ಬಂದಿದೆ. ಈ ಬಗ್ಗೆ ಹೆಚ್ಚಿನ ಚರ್ಚೆ ನಡೆಸಿದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

- ತುಷಾರ್​​ ಗಿರಿನಾಥ್​​, ಬಿಬಿಎಂಪಿ ಮುಖ್ಯ ಆಯುಕ್ತ

ಬಿಡಿಎ ಮಂಡಳಿ ಸಭೆಯಲ್ಲಿ ಪ್ಲೇಗ್ರೌಂಡ್ ಉಳಿಸಿಕೊಳ್ಳಲು ತೀರ್ಮಾನ ಕೈಗೊಳ್ಳಲಾಗಿದೆ. ಇದರ ನಂತರ ಈ ಜಾಗವನ್ನು ಆಟದ ಮೈದಾನವೆಂದು ಸ್ಥಿರೀಕರಣ ಮಾಡದೆ ಕಾಲಹರಣ ಮಾಡಲಾಗಿದೆ. ಇದರಿಂದ ಕೋಟ್ಯಂತರ ರೂ. ಬೆಲೆಬಾಳುವ ಜಮೀನಿನ ಮೇಲೆ ಖಾಸಗಿ ವ್ಯಕ್ತ್ತಿಗಳ ವಕ್ರದೃಷ್ಟಿ ಬಿದ್ದಿದ್ದು, ಇದಕ್ಕೆ ಬಿಡಿಎ ಅಧಿಕಾರಿಗಳು ನೀರೆರೆಯುತ್ತಿರುವುದಕ್ಕೆ ಸರ್ಕಾರ ತಡೆ ಹಾಕಲಿ.

- ಬಿ.ಎಂ.ಶಿವಕುಮಾರ್, ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕೆಯ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net