

ಬೆಂಗಳೂರು ಗ್ರಾಮಾಂತರ: ಪಶುಪಾಲನಾ ಇಲಾಖೆ ವತಿಯಿಂದ ದೇವನಹಳ್ಳಿ ತಾಲೂಕು ಯಲಿಯೂರಿನಲ್ಲಿ ಶನಿವಾರ ಜಿಲ್ಲಾಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ದೇವನಹಳ್ಳಿಯ ರಾಸುಗಳು ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದರೆ ಹೊಸಕೋಟೆ ತಾಲೂಕಿನ ರಾಸು ಮೂರನೇ ಬಹುಮಾನ ಪಡೆದುಕೊಂಡಿತು.
ದೇವನಹಳ್ಳಿ ತಾಲೂಕು ಹಾರೋಹಳ್ಳಿಯ ನಾರಾಯಣಪ್ಪ ಅವರ ಹಸು 37.110 ಕಿಲೋ ಹಾಲು ನೀಡಿ 25 ಸಾವಿರ ರೂ.ನಗದು ಹಾಗೂ ಪಾರಿತೋಷಕ ಪಡೆಯಿತು. ಇದೇ ತಾಲೂಕಿನ ಮಾಳಿಗೇನಹಳ್ಳಿಯ ಟಿ.ಲೋಕೇಶ್ ಅವರ ಹಸು 35.010 ಕಿಲೋ ಹಾಲು ಕರೆದು ದ್ವಿತೀಯ ಸ್ಥಾನಗಳಿಸಿ 20 ಸಾವಿರ ರೂ. ಮತ್ತು ಪಾರಿತೋಷಕ ಪಡೆದುಕೊಂಡರೆ, ಹೊಸಕೋಟೆ ತಾಲೂಕು ಇಟ್ಟಸಂದ್ರದ ರಾಮಚಂದ್ರಪ್ಪ ಅವರ ಹಸು 34.130 ಕಿಲೋ ಹಾಲು ಕರೆಯುವ ಮೂಲಕ ತೃತೀಯ ಬಹುಮಾನ 10 ಸಾವಿರ ಮತ್ತು ಪಾರಿತೋಷಕ ಪಡೆದುಕೊಂಡಿತು.
ವೈಜ್ಞಾನಿಕ ಪದ್ಧತಿಯಿಂದ ಅಧಿಕ ಲಾಭ: ರೈತರು ಹೈನುಗಾರಿಕೆಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ಅಧಿಕ ಲಾಭ ಪಡೆಯುವ ಮೂಲಕ ಸ್ವಾವಲಂಬಿ ಬದುಕು ನಡೆಸಬೇಕು ಎಂದು ಜಿಪಂ ಸದಸ್ಯೆ ಅನಂತಕುಮಾರಿ ಚಿನ್ನಪ್ಪ ಹೇಳಿದರು.
ಕರೊನಾ ಲಾಕ್‌ಡೌನ್ ಸಂದರ್ಭದಲ್ಲಿ ರೈತರು ಸಾಕಷ್ಟು ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಇದರ ನಡುವೆ ಹೈನುಗಾರಿಕೆ ಕೈಹಿಡಿದಿರುವುದು ಸಂತಸದ ವಿಷಯವಾಗಿದೆ ಎಂದರು. ಬಮುಲ್ ನಿರ್ದೇಶಕ ಇರಿಗೇನಹಳ್ಳಿ ಶ್ರೀನಿವಾಸ್ ಮಾತನಾಡಿ, ಹೈನುಗಾರಿಕೆ ದೊಡ್ಡ ಉದ್ಯಮವಾಗಿ ಬೆಳೆದಿದೆ, ಇದರಲ್ಲಿ ಸಾಕಷ್ಟು ಅವಕಾಶಗಳಿದ್ದು ವ್ಯವಸ್ಥಿತ ಹೈನುಗಾರಿಕೆಯಲ್ಲಿ ಉತ್ತಮ ಭವಿಷ್ಯವಿದೆ ಎಂದರು.
ಹೆಚ್ಚು ಲಾಭಾಂಶ ಸಾಧ್ಯ: ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಜಿ.ಎಂ.ನಾಗರಾಜು ಮಾತನಾಡಿ, ಇಲಾಖೆಯ ಆವಿಷ್ಕಾರಗಳಲ್ಲೊಂದಾದ ಲಿಂಗ ನಿರ್ಧರಿತ ವೀರ್ಯ ನಳಿಕೆಗಳನ್ನು ಹೆಚ್ಚಾಗಿ ಬಳಸುವ ಮೂಲಕ ಶೇ.95 ಹೆಣ್ಣು ಕರು ಪಡೆಯಲು ಸಾಧ್ಯವಿದೆ, ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅಧಿಕ ಮೇವು ಇಳುವರಿ ನೀಡುವ ಸುಧಾರಿತ ಸುಬಾಬುಲ್ ನಾರಿ ನಿರ್ಬೀಜ ತಳಿಯನ್ನು ಅಳವಡಿಸಿಕೊಂಡು ಹೈನುಗಾರಿಕೆಯಲ್ಲಿ ಉತ್ಪಾದನಾ ವೆಚ್ಚ ಕಡಿಮೆಗೊಳಿಸಿ, ಹೆಚ್ಚಿನ ಲಾಭಾಂಶ ಪಡೆಯಬಹುದು ಎಂದು ಮಾಹಿತಿ ನೀಡಿದರು.
ಮಿಶ್ರತಳಿ ಕರು ಪ್ರದರ್ಶನ: ಆಧುನಿಕ ಪಶುಪಾಲನಾ ಪದ್ಧತಿ ಅಳವಡಿಸಿಕೊಂಡು ಕರುಗಳನ್ನು ಸಾಕಲು ರೈತರನ್ನು ಪ್ರೋತ್ಸಾಹಿಸಲು ಮಿಶ್ರತಳಿ ಕರುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಪ್ರದರ್ಶನದಲ್ಲಿ ಭಾಗವಹಿಸಿದ 47 ಕರುಗಳ ಪೈಕಿ ಉತ್ತಮವಾಗಿ ಪೋಷಿಸಲಾದ 3 ತಿಂಗಳ ಕರುಗಳು, 6 ಹಾಗೂ 1 ವರ್ಷದವರೆಗಿನ ಕರುಗಳಿಗೆ ಪ್ರತ್ಯೇಕವಾಗಿ ಬಹುಮಾನ ಮತ್ತು ಖನಿಜ ಮಿಶ್ರಣ ಪೊಟ್ಟಣಗಳನ್ನು ವಿತರಿಸಲಾಯಿತು. ಸ್ಪರ್ಧೆಯಲ್ಲಿ ಜಿಲ್ಲೆಯ 4 ತಾಲೂಕುಗಳಿಂದ 17 ಹಸುಗಳು ಭಾಗವಹಿಸಿದ್ದು, ಎರಡು ಹೊತ್ತಿನ ಹಾಲಿನ ಇಳುವರಿಯ ಒಟ್ಟು ತೂಕದ ಮಾನದಂಡ ಪರಿಗಣಿಸಿ ಬಹುಮಾನ ೋಷಿಸಲಾಯಿತು.
ಎಲ್ಲ ರಾಸು ಮಾಲೀಕರಿಗೂ ಬಹುಮಾನ: ಭಾಗವಹಿಸಿದ ಎಲ್ಲ ರಾಸುಗಳ ಮಾಲೀಕರಿಗೆ ಯಲಿಯೂರು ಗ್ರಾಪಂ ಅಧ್ಯಕ್ಷ ಸೊಣ್ಣೇಗೌಡ ತಲಾ 1 ಸಾವಿರ ರೂ.ನಗದು ಹಾಗೂ ಪಶುಪಾಲನಾ ಇಲಾಖೆಯಿಂದ ಸಮಾಧಾನಕರ ಬಹುಮಾನ ನೀಡಲಾಯಿತು.