

ತುಮಕೂರು : 6 ರಿಂದ 8ನೇ ತರಗತಿಗೆ 15 ಸಾವಿರ ಪದವೀಧರ ಶಿಕ್ಷಕರ ನೇಮಕಾತಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಇದರಿಂದ ಕಳೆದ 25 ವರ್ಷಗಳಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪದವೀಧರ ಶಿಕ್ಷಕರು ಮುಂಬಡ್ತಿಯಿಂದ ವಂಚಿತರಾಗಲಿದ್ದಾರೆ.
2016ರ ಪೂರ್ವದಲ್ಲಿ ನೇರ ನೇಮಕಾತಿ ಹೊಂದಿದ ಪ್ರಾಥಮಿಕ ಶಾಲಾ ಶಿಕ್ಷಕರು (1-7ನೇ ತರಗತಿ) ಮೂಲ ವೃಂದದ 1 ಲಕ್ಷ 8 ಸಾವಿರ ಮಂಜೂರು ಹುದ್ದೆಗಿಂತ ಹೆಚ್ಚುವರಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದು, ಇವರಲ್ಲಿ 80 ಸಾವಿರಕ್ಕೂ ಹೆಚ್ಚು ಶಿಕ್ಷಕರು ಪದವಿ ವಿದ್ಯಾರ್ಹತೆ ಹೊಂದಿದ್ದಾರೆ. ಅಲ್ಲದೆ, 20-25 ವರ್ಷಗಳ ಸೇವಾನುಭವ ಪಡೆದಿರುವವರಾದರೂ ಇವರನ್ನು 6 ರಿಂದ 8ನೇ ತರಗತಿವರೆಗಿನ ಮಕ್ಕಳಿಗೆ ಪಾಠ ಬೋಧಿಸಲು ಬಳಸಿಕೊಳ್ಳದೆ ಹೊಸದಾಗಿ ನೇಮಕ ಮಾಡಿಕೊಳ್ಳುತ್ತಿರುವುದು ಅಸಮಾಧಾನ ಭುಗಿಲೇಳಲು ಕಾರಣವಾಗಿದೆ.
ಸರ್ಕಾರವು ಹೊಸ ನೇಮಕಾತಿ ವೇಳೆ ಇಲಾಖೆಯ ಪರೀಕ್ಷೆ ಬರೆದು ಬಡ್ತಿ ಪಡೆಯುವಂತೆ ಸೂಚಿಸಿರುವುದು ಶಿಕ್ಷಕರಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ.
ಜಿಪಿಟಿ ವೃಂದ ಬಡ್ತಿಗೆ ಕೂಗು: ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (ಎನ್‌ಸಿಟಿಇ) ನಿಗದಿಪಡಿಸಿರುವ ವಿದ್ಯಾರ್ಹತೆ ಹೊಂದಿರುವ ಅರ್ಹ ಸೇವಾನಿರತ ಪದವೀಧರ ಶಾಲಾ ಶಿಕ್ಷಕರನ್ನು 6-8ನೇ ತರಗತಿಗೆ ಹೊಸದಾಗಿ ಪದವೀಧರ ಶಿಕ್ಷಕರ ನೇಮಕಾತಿ ವೇಳೆ ಅರ್ಹತೆಯೊಂದಿಗೆ ಪರಿಗಣಿಸಬೇಕೆಂಬ ಕೂಗು ಕೇಳಿಬಂದಿದೆ. ಇದರ ಜತೆಗೆ ಎಲ್ಲ 80 ಸಾವಿರ ಸೇವಾನಿರತ ಶಾಲಾ ಶಿಕ್ಷಕರನ್ನು 6-8ನೇ ತರಗತಿಗೆ ಬೋಧಿಸುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (ಜಿಪಿಟಿ) ವೃಂದಕ್ಕೆ ಅಖಂಡ ಜ್ಯೇಷ್ಠತೆಯೊಂದಿಗೆ 2016ಕ್ಕಿಂತ ಪೂರ್ವಾನ್ವಯವಾಗುವಂತೆ ಪರಿಗಣಿಸಬೇಕೆಂಬ ಆಗ್ರಹ ಈ ಹಿಂದಿನಿಂದಲೂ ಇದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ (ನೇಮಕಾತಿ) ವಿಶೇಷ ನಿಯಮಗಳು-2022ರ ಅಧಿಸೂಚನೆ ಹಲವು ನ್ಯೂನತೆಗಳನ್ನು ಹೊಂದಿದ್ದು, ಇದರಿಂದ ನೇರ ನೇಮಕಾತಿ ಮತ್ತು ಮುಂಬಡ್ತಿ ಎರಡೂ ಪ್ರಕ್ರಿಯೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲಾಗುತ್ತಿಲ್ಲ. ಈ ಅನ್ಯಾಯ ಸರಿಪಡಿಸುವಂತೆ ಪದವೀಧರ ಶಿಕ್ಷಕರು ಹತ್ತಾರು ಬಾರಿ ಇಲಾಖೆ ಸಚಿವರು, ಉನ್ನತಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾರೊಬ್ಬರೂ ಕಿವಿಗೊಡುತ್ತಿಲ್ಲವೆಂದು ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘ ಆರೋಪಿಸಿದೆ.
ಬಿಎ., ಎಂ.ಎ., ಎಂ.ಎಸ್ಸಿ., ಬಿ.ಇಡಿ., ಎಂ.ಇಡಿ., ಪಿಎಚ್‌ಡಿ., ಪದವಿಗಳನ್ನು ಹೊಂದಿರುವ ಸೇವಾನಿರತ ಪ್ರಾಥಮಿಕ ಶಾಲಾ ಶಿಕ್ಷಕರನ್ನು ವಿದ್ಯಾರ್ಹತೆ ಜತೆಗೆ ಅನುಭವವನ್ನಿಟ್ಟುಕೊಂಡು ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳ 5 ಸಾವಿರ ಹಾಗೂ ಉಳಿದ ಜಿಲ್ಲೆಗಳ 10 ಸಾವಿರ ಹೊಸ ಪದವೀಧರ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಪರಿಗಣಿಸಬೇಕು. ಈ ಹಿಂದೆ ಆಗಿರುವ ಅನ್ಯಾಯ ಸರಿಪಡಿಸದೇ ಇದ್ದರೆ ನ್ಯಾಯಾಲಯದ ಮೆಟ್ಟಿಲೇರುವುದು ಪದವೀಧರ ಶಿಕ್ಷಕರಿಗೆ ಅನಿವಾರ್ಯವೆನಿಸಿದೆ.
ಶಿಕ್ಷಕರ ಬೇಡಿಕೆ ಕುರಿತು ಪರಿಶೀಲಿಸಲು ಸೂಚನೆ : ಬೆಂಗಳೂರು: ರಾಜ್ಯ ಸರ್ಕಾರ ನೇಮಕ ಮಾಡಿಕೊಳ್ಳಲು ಮುಂದಾಗಿರುವ 15 ಸಾವಿರ ಶಿಕ್ಷಕರ ನೇಮಕಾತಿ ಪೂರ್ಣಗೊಳಿಸುವ ಮೊದಲು ಪ್ರಾಥಮಿಕ ಶಾಲಾ ಶಿಕ್ಷಕರಿಗೆ 6ರಿಂದ 8ನೇ ತರಗತಿಗೆ ಬಡ್ತಿ ನೀಡುವ ಸಾಧ್ಯತೆ ಪರಿಶೀಲಿಸುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಅವರ ನಿಯೋಗ ಸಚಿವರನ್ನು ಭೇಟಿ ಮಾಡಿ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದು, ಈ ಬಡ್ತಿ ನೀಡುವ ವಿಚಾರ ಪ್ರಮುಖವಾಗಿದೆ. ಅಲ್ಲದೆ, ಸಿಆರ್‌ಪಿ, ಬಿಆರ್‌ಪಿಗಳಿಗೆ ಸೂಕ್ತ ಸ್ಥಳ ಆಯ್ಕೆ ಮಾಡಿಕೊಳ್ಳಲು ತಾಲೂಕಿನಲ್ಲಿಯೇ ಅವಕಾಶ ನೀಡಬೇಕೆಂದು ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವರು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು, ಸಂಘದವರು ನೀಡಿರುವ ಮನವಿಯನ್ನು ಪರಿಶೀಲಿಸಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ.
ಪ್ರಾಥಮಿಕ ಶಿಕ್ಷಕರಿಗೆ ಉನ್ನತ ಅಧ್ಯಯನಕ್ಕೆ 3 ವರ್ಷ ಮನೆಯಲ್ಲೇ ಕೂರಿಸಿ ಸರ್ಕಾರವೇ ಸಂಬಳ ಕೊಟ್ಟಿದೆ. ಸಾವಿರಾರು ವಿಜ್ಞಾನ, ಇಂಗ್ಲೀಷ್ ಶಿಕ್ಷಕರು ಪದವಿ ಪಡೆದಿದ್ದಾರೆ. ಕೆಲವರು ಸಂಬಳರಹಿತ ರಜೆ ಪಡೆದು ಬಿ.ಇಡಿ., ಪೂರ್ಣಗೊಳಿಸಿದ್ದಾರೆ. ಹೊಸ ಪದವೀಧರ ಶಿಕ್ಷಕರ ನೇಮಕಾತಿ ವೇಳೆ ಸೇವಾಹಿರಿತನ ಪರಿಗಣಿಸಲಿ, ಅದನ್ನು ಬಿಟ್ಟು ಪರೀಕ್ಷೆ ಎದುರಿಸಿ ಅಂತ ಹೇಳುತ್ತಿರುವುದು ಅವೈಜ್ಞಾನಿಕವೆನಿಸಿದೆ. ಎಸ್.ವೈ.ಸೊರಟಿ, ಅಧ್ಯಕ್ಷ, ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘ ಸೇವಾನಿರತ ಪದವೀಧರ ಶಿಕ್ಷಕರಿಗೂ ಹೊಸ ನೇಮಕಾತಿಯಲ್ಲಿ ಇಂತಿಷ್ಟು ಹುದ್ದೆಗಳನ್ನು ಮೀಸಲಿಡಲಾಗಿದ್ದು, ಪರೀಕ್ಷೆ ಬರೆದು ಅರ್ಹವಾಗಿ ಪಡೆಯುವುದು ಅನಿವಾರ್ಯ. ಪರೀಕ್ಷೆ ಕೈಬಿಟ್ಟು ಬಡ್ತಿ ನೀಡಬೇಕೆಂಬ ಶಿಕ್ಷಕರ ಸಂಘದ ಒತ್ತಾಯವು ಸಾಧುವೇ ಎಂಬ ಬಗ್ಗೆ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗುತ್ತಿದೆ. ಬಿ.ಸಿ.ನಾಗೇಶ್, ಶಿಕ್ಷಣ ಸಚಿವ