25 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಭೂಮಿಪೂಜೆ

2blrp1
Published on

ಬೇಲೂರು: ತಾಲೂಕಿನ ಗೆಂಡೇಹಳ್ಳಿ ಹಾಗೂ ಎಸ್.ಬೊಮ್ಮಡಿಹಳ್ಳಿ ಗ್ರಾಮದ ಸಂಪರ್ಕ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಕೆ.ಎಸ್.ಲಿಂಗೇಶ್ ಭೂಮಿಪೂಜೆ ನೆರವೇರಿಸಿದರು.

ಎಸ್‌ಸಿಪಿ ಯೋಜನೆಯ 25 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನಾನು ಶಾಸಕನಾದ ನಂತರ ನಮ್ಮ ಸರ್ಕಾರ ಇಲ್ಲದ ಸಂದರ್ಭದಲ್ಲಿಯೂ 1800 ಕೋಟಿ ರೂ., ಅನುದಾನ ತಂದು ಬೇಲೂರು ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ ಎಂದರು.

ಈಗಾಗಲೇ ಈ ಭಾಗದ ಅಗಸರಹಳ್ಳಿ ಸೇತುವೆ ಕಾಮಗಾರಿ ಸಂಪೂರ್ಣ ಮುಗಿದಿದೆ. ಬಾಕಿ ಇರುವ ಎಲ್ಲ ರಸ್ತೆಗೂ ಅನುದಾನ ತಂದಿದ್ದು, ಇನ್ನೆರಡು ತಿಂಗಳಲ್ಲಿ ಕಾಮಗಾರಿಗಳು ಮುಗಿಯಲಿವೆ. ನಾನು ಶಾಸಕನಾಗಿ ಮಾಡಿಸಿದ ಕೆಲಸ ಮತ್ತು ಹಿಂದಿನ ಶಾಸಕರ ಕೆಲಸದ ಬಗ್ಗೆ ತಾಳೆ ಹಾಕಲಿ. ಬೇಲೂರು ವಿಧಾನಸಭಾ ಕ್ಷೇತ್ರಕ್ಕೆ ಎತ್ತಿನಹೊಳೆ, ರಣಘಟ್ಟ ಮತ್ತು ಯಗಚಿ ಏತ ನೀರಾವರಿ ಯೋಜನೆಯಿಂದಾಗಿ ಬಹುತೇಕ ಭಾಗಕ್ಕೆ ನೀರಾವರಿ ಯೋಜನೆಯ ಫಲ ದೊರೆಯುತ್ತಿದೆ ಎಂದರು.

ಹೆಬ್ಬಾಳು, ನಾರಾಯಣಪುರ, ಬಂಟೇನಹಳ್ಳಿ, ಯಲಹಂಕ, ರಾಜನಶಿರಿಯೂರು ಮತ್ತು ಹನಿಕೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ಹೆಬ್ಬಾಳು ಏತ ನೀರಾವರಿ ಮೂಲಕ ನೀರು ಕೊಡುವುದಕ್ಕೆ ಸಿದ್ಧತೆ ನಡೆದಿದ್ದು, ಪುಷ್ಪಗಿರಿ ಮಠಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೆಬ್ಬಾಳು ಏತ ನೀರಾವರಿ ಯೋಜನೆ ಕಡತಕ್ಕೆ ಸಹಿ ಹಾಕಿದ್ದಾರೆ. ಕೆಲವರು ಮಲೆನಾಡು ಭಾಗದಲ್ಲಿ ಅಭಿವೃದ್ಧಿ ಕುಠಿತವಾಗಿದೆ ಎಂದು ಆರೋಪಿಸುತ್ತಾರೆ. ಆದರೆ ಇಲ್ಲಿನ ಅಭಿವೃದ್ಧಿಯನ್ನು ಸಹಿಸದ ಕೆಲವರು ವಿನಾಃ ಕಾರಣ ಆರೋಪ ಮಾಡುತಿದ್ದಾರೆ. ಆ ಭಾಗಕ್ಕೂ ಹೆಚ್ಚಿನ ಅನುದಾನ ತಂದು ಕೆಲಸ ಮಾಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ಎಚ್.ಮಹೇಶ್, ಜೆಡಿಎಸ್ ಮುಖಂಡ ಎಂ.ಕೆ.ಆರ್.ಸೋಮೇಶ್, ಗ್ರಾಪಂ ಸದಸ್ಯ ಮಧು, ಮುಖಂಡರಾದ ಶಾಂತೇಗೌಡ, ಉಮೇಶ್, ನವೀನ್, ರಘು, ಆದರ್ಶ, ಪಿಡಿಒ ಸಂತೋಷ್, ಗುತ್ತಿಗೆದಾರರಾದ ಪುಟ್ಟಸ್ವಾಮಿ, ಎಸ್.ಕೆ.ನಾಗೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net