25 ರೂಪಾಯಿಗೆ ಫೇಸ್​ಶೀಲ್ಡ್!

4hnr1 a
Published on

ಹೊನ್ನಾವರ: ಕೋವಿಡ್ ಸೋಂಕು ಹಬ್ಬುವುದನ್ನು ತಡೆಯಲು ಮಾಸ್ಕ್, ಫೇಸ್ ಶೀಲ್ಡ್ ಅಗತ್ಯ. ದೇಶಕ್ಕೆ ಅಗತ್ಯವಾದ ಫೇಸ್ ಶೀಲ್ಡ್​ಗಳನ್ನು ಬಹುತೇಕವಾಗಿ ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಹೊನ್ನಾವರ ಮೂಲದ ಬೆಂಗಳೂರು ಉದ್ಯಮಿಯೊಬ್ಬರು ಪ್ರಧಾನಿ ಮೋದಿ ಅವರ ಆತ್ಮನಿರ್ಭರ ಭಾರತ ಕರೆ ಸ್ಪಂದಿಸಿ, ಚೀನಾಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಈ ಉತ್ಪನ್ನ ತಯಾರಿಸಿ ಮಾರಾಟಕ್ಕೆ ಮುಂದಾಗಿದ್ದಾರೆ.

ಉದ್ಯಮಿ ಶ್ರೀರಾಮ ಭಟ್ ಅವರು ಕೇವಲ 25 ರೂ.ಗೆ ಫೇಸ್​ಶೀಲ್ಡ್​ಗಳನ್ನು ನೇರವಾಗಿ ಬಳಕೆದಾರ ಸಂಸ್ಥೆಗಳಿಗೆ ಪೂರೈಕೆ ಮಾಡುತ್ತಿದ್ದಾರೆ. ತಮ್ಮ ಶ್ರೀಮಾತಾ ಪ್ರೆಸಿಶನ್ ಕಂಪೋನೆಂಟ್ ಕೈಗಾರಿಕೆಯಲ್ಲಿ ಪ್ರತಿ ತಿಂಗಳಿಗೆ ಐದು ವಿಧದ ಲಕ್ಷಕ್ಕೂ ಹೆಚ್ಚು ಫೇಸ್​ಶೀಲ್ಡ್​ಗಳನ್ನು ತಯಾರಿಸಿ ಮಾರುಕಟ್ಟೆಗೆ ಪೂರೈಸುತ್ತಿದ್ದಾರೆ.

ಫೇಸ್ ಮಾಸ್ಕ್, ಫೇಸ್​ಶೀಲ್ಡ್​ನಂಥ ವೈದ್ಯಕೀಯ ಬಳಕೆಯ ಸಾಮಾನ್ಯ ವಸ್ತುಗಳೂ ಚೀನಾದಿಂದ ಆಮದಾಗುತ್ತಿದ್ದವು. ಆದರೆ, ಭಾರತಕ್ಕೆ ಬೇಡಿಕೆಗೆ ತಕ್ಕಷ್ಟು ಪೂರೈಕೆಯಾಗಲಿಲ್ಲ. ವೈದ್ಯಕೀಯ ಮಾತ್ರವಲ್ಲ, ಪೊಲೀಸ್ ಇತರ ಇಲಾಖೆಗಳು ಮಾಸ್ಕ್​ಗಿಂತ ಹೆಚ್ಚು ಸುರಕ್ಷತೆ ಒದಗಿಸುವ ಫೇಸ್​ಶೀಲ್ಡ್​ಗೆ ಬೇಡಿಕೆ ಇಟ್ಟವು. 50ರಿಂದ 100 ರೂಪಾಯಿಗೆ ಮಾರಾಟವಾಗುತ್ತಿದ್ದವು. ಇದನ್ನೇ ಸವಾಲಾಗಿ ಸ್ವೀಕರಿಸಿದ ಶ್ರೀರಾಮ ಭಟ್ ಅವರು ಫೇಸ್​ಶೀಲ್ಡ್ ತಯಾರಿಸಲು ಮುಂದಾಗಿದ್ದಾರೆ.

ಲಾಕ್​ಡೌನ್ ಆದಾಗ ಸಂಸ್ಥೆಯ ನೌಕರರಿಗೆ ಉದ್ಯೋಗ ಇಲ್ಲದಂತಾಯಿತು. ಇದೇ ಸಂದರ್ಭದಲ್ಲಿ ಫೇಸ್​ಶೀಲ್ಡ್​ಗೆ ಕೊರತೆಯ ವಿಷಯ ತಿಳಿದ ಶ್ರೀರಾಮ ಭಟ್ ತಮ್ಮ ನೌಕರರಿಗೆ ಕೆಲಸ ಕೊಡಲು ಮುಂದಾದರು. ತಮ್ಮ ಬಳಿ ಇರುವ ಯಂತ್ರೋಪಕರಣಗಳನ್ನು ಮಾರ್ಪಡಿಸಿಕೊಂಡರು. ಇನ್ನು ಕೆಲವನ್ನು ಹೊಸದಾಗಿ ಖರೀದಿಸಿ ಫೇಸ್​ಶೀಲ್ಡ್ ತಯಾರಿಕೆ ಆರಂಭಿಸಿದರು.

ಇದೀಗ ಐದು ಮಾಡೆಲ್​ಗಳಲ್ಲಿ ಫೇಸ್​ಶೀಲ್ಡ್ ತಯಾರಿಸಲಾಗುತ್ತಿದೆ. ಮಕ್ಕಳಿಗೆ ಇನ್ನೊಂದು ಮಾಡೆಲ್ ಪ್ರಾಯೋಗಿಕವಾಗಿ ಸಿದ್ಧವಾಗಿದೆ. ಚೀನಾಕ್ಕಿಂತ ಕಡಿಮೆ ಬೆಲೆಯಲ್ಲಿ ಫೇಸ್ ಶೀಲ್ಡ್​ಗಳನ್ನು ಒದಗಿಸುವ ಮೂಲಕ ಶ್ರೀರಾಮ ಭಟ್ ಅವರು ಪ್ರಧಾನಿ ಮೋದಿಯವರ ‘ಆತ್ಮ ನಿರ್ಭರ ಭಾರತ’ ಕರೆಗೆ ಸ್ಪಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net