25 ದಿನ ಡಿಜಿಟಲ್ ಅರೆಸ್ಟ್

cybe crime
Published on

ಚಾಮರಾಜನಗರ: ಒಂದೆರಡು ಗಂಟೆಯೋ ಅಥವಾ ಒಂದೆರಡು ದಿನವೋ ಅಲ್ಲ, ಬರೋಬ್ಬರಿ 25 ದಿನಗಳ ಕಾಲ, ದೊಡ್ಡ ದೊಡ್ಡ ಅಧಿಕಾರಿಗಳ ತನಿಖೆ, ನ್ಯಾಯಾಧೀಶರ ವಿಚಾರಣೆಯ ನೆಪದಲ್ಲಿ ರೈತನೊಬ್ಬನನ್ನು ಡಿಜಿಟಲ್ ಅರೆಸ್ಟ್ ಮಾಡಿ 10 ಲಕ್ಷ ರೂ. ವಂಚನೆ ಮಾಡಲಾಗಿದೆ.

ಕೊಳ್ಳೇಗಾಲದ 69 ವರ್ಷದ ರೈತ ಮೋಸ ಹೋಗಿರುವವರು. ಎರಡು ತಿಂಗಳ ಹಿಂದೆ ನಡೆದಿರುವ ಈ ಪ್ರಕರಣ ಈಗ ಬೆಳಕಿಗೆ ಬಂದಿದೆ. ಹಣ ಅಕ್ರಮ ವರ್ಗಾವಣೆ ಮತ್ತು ಮಾನವ ಕಳ್ಳ ಸಾಗಣೆ ಪ್ರಕರಣದ ವಿಚಾರಣೆಗಾಗಿ ಜು.5ರಿಂದ ಜು.30ವರೆಗೂ ಬಂದಿರುವ ೆನ್ ಕರೆಗಳು, ವಾಟ್ಸ್‌ಆ್ಯಪ್ ಮೆಸೇಜ್‌ಗಳು, ವಿಡಿಯೋ ಕರೆಗಳು, ಜಾರಿ ನಿರ್ದೇಶನಾಲಯ(ಇಡಿ) ನೋಟಿಸ್, ಮುಂಬೈ ಪೊಲೀಸರು, ನ್ಯಾಯಾಧೀಶರ ಸೋಗಿನಲ್ಲಿ ನಡೆಸಿದ ನಾಟಕೀಯ ವಿಚಾರಣೆ, ಆರ್‌ಬಿಐಗೆ ಠೇವಣಿ ಇಡಬೇಕೆಂದು ಸುಳ್ಳು ಹೇಳಿ, ಬಂಧಿಸುವುದಾಗಿ ಹೆದರಿಸಿ 5,05,000 ಮತ್ತು 4,96,000 ರೂ.ಗಳನ್ನು ಸೂಚಿಸಿದ ಬ್ಯಾಂಕ್ ಅಕೌಂಟ್‌ಗೆ ಹಾಕಿಸಿಕೊಳ್ಳಲಾಗಿದೆ. ಉಳಿಕೆ 15 ಲಕ್ಷ ರೂ. ನೀಡಬೇಕೆಂದು ಒತ್ತಾಯವಿದ್ದ ಹಿನ್ನೆಲೆಯಲ್ಲಿ ವಿದೇಶದಲ್ಲಿದ್ದ ಮಗನಿಗೆ ವಿಷಯ ತಿಳಿಸಲಾಗಿದೆ. ಆಗ ರೈತನಿಗೆ ಮೋಸ ಹೋಗಿರುವುದರ ಅರಿವಾಗಿದೆ. ಜು.31ರಂದು ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ರೈತ ದೂರು ನೀಡಿದ್ದಾರೆ.

ಮುಂಬೈ ಪೊಲೀಸರ ಹೆಸರು

ಜು.5ರಂದು ಬೆಳಗ್ಗೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನಿಗೆ ದೂರ ಸಂಪರ್ಕ ಇಲಾಖೆ ಅಧಿಕಾರಿ ಹೆಸರಿನಲ್ಲಿ ೆನ್ ಕರೆ ಬಂದಿದೆ. ನಿಮ್ಮ ಹೆಸರಿನಲ್ಲಿ ಮತ್ತೊಂದು ಮೊಬೈಲ್ ಸಂಖ್ಯೆ ಬಳಕೆ ಮಾಡುತ್ತಿದ್ದೀರಾ. ಇದರಲ್ಲಿ ಅಕ್ರಮ ಚಟುವಟಿಕೆ ನಡೆಸಲಾಗುತ್ತಿದೆ ಎಂದು ಮುಂಬೈ ಕೊಲಾಬಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಆರೋಪಿಸಿ ಈ ಬಗ್ಗೆ ತನಿಖೆ ನಡೆಸಲು ಪೊಲೀಸರು ಕರೆ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಬಳಿಕ ಐಪಿಎಸ್ ಅಧಿಕಾರಿ ಸಂದೀಪ್ ಯಾದವ್ ಎಂಬ ಹೆಸರು ಹೇಳಿಕೊಂಡು ಕರೆ ಮಾಡಿದ ವ್ಯಕ್ತಿ ಮುಂಬೈನಲ್ಲಿ ನಿಮ್ಮ ಹೆಸರಿನಲ್ಲಿ ಕೆನರಾ ಬ್ಯಾಂಕ್‌ನಲ್ಲಿ ಖಾತೆ ತೆರೆದಿದ್ದೀರಾ. ಅಕೌಂಟ್‌ನಲ್ಲಿ 4ರಿಂದ 5 ಕೋಟಿ ರೂ. ಅಕ್ರಮ ವರ್ಗಾವಣೆ ಮತ್ತು ಮಾನವ ಕಳ್ಳಸಾಗಣೆ, ಕಾನೂನು ಬಾಹಿರ ಚಟುವಟಿಕೆಗೆ ಬಳಕೆ ಮಾಡುತ್ತಿದ್ದೀರಾ. ಖಾತೆಯಲ್ಲಿ 1.5 ಕೋಟಿ ರೂ. ಬ್ಯಾಲೆನ್ಸ್ ಇದೆ ಎಂದು ತಿಳಿಸಿದ್ದಾನೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಜನರನ್ನು ಬಂಧಿಸಲಾಗಿದೆ. ಇವರ ಭಾವಚಿತ್ರಗಳನ್ನು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಲಾಗಿದೆ. ಫೋಟೋದಲ್ಲಿರುವವರು ನಿಮಗೆ ಪರಿಚಯವಿದ್ದಾರಾ ಎಂದು ಪ್ರಶ್ನೆ ಮಾಡಿದ್ದಾನೆ. ರೈತ ತನಗೆ ಯಾರ ಪರಿಚಯವೂ ಇಲ್ಲ ಎಂದು ಹೇಳಿದ ಮೇಲೆ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಮತ್ತು ಫೋಟೋಗಳನ್ನು ಯಾರಿಗಾದರೂ ಕಳುಹಿಸಿದರೆ ಗಂಭೀರ ತೊಂದರೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾನೆ. ತನಿಖೆ ಮುಗಿಯುವವರೆಗೂ ಈ ವಿಷಯವನ್ನು ಗೌಪ್ಯವಾಗಿ ಇಡುವುದಾಗಿ ರೈತ ಭರವಸೆ ನೀಡಿದ್ದಾನೆ ಎಂದು ಇಡಿ ಹೆಸರಿನಲ್ಲಿ ಪತ್ರ ಕಳುಹಿಸಲಾಗಿದೆ.

ವಿಡಿಯೋ ಕರೆಯಲ್ಲಿ ಕೋರ್ಟ್ ವಿಚಾರಣೆ

ವಿಡಿಯೋ ಕರೆಯಲ್ಲಿ ಹಿರಿಯ ಅಧಿಕಾರಿ ಸೋಗಿನಲ್ಲಿ ವಿಚಾರಣೆ ನಡೆಸಿದ ವ್ಯಕ್ತಿ, ರೈತ ಮತ್ತು ಕುಟುಂಬವನ್ನು ಬಂಧಿಸುವುದಾಗಿ ತಿಳಿಸಿ ಪ್ರಕರಣವನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ಹೇಳಿದ್ದಾನೆ. ಜು.6ರಂದು ವಾಟ್ಸ್‌ಆ್ಯಪ್ ಕರೆಯಲ್ಲಿ ಸಮವಸದಲ್ಲಿದ್ದ ಹಲವು ಅಧಿಕಾರಿಗಳು ಮತ್ತು ನ್ಯಾಯಾಧೀಶರು ಪ್ರಕರಣದ ಬಗ್ಗೆ ಚರ್ಚೆ ನಡೆಸಿ ಬಂಧಿಸಲು ನಿರ್ದೇಶನ ನೀಡಲಾಗಿದೆ. ವಿಚಾರಣೆಗಾಗಿ ಆರ್‌ಬಿಐಗೆ 25 ಲಕ್ಷ ರೂ.ಮರು ಪಾವತಿ ಮಾಡಬಹುದಾದ ಠೇವಣಿಯನ್ನು ಪಾವತಿಸಬೇಕು. ನಿರಪರಾಧಿಯಾಗಿದ್ದರೆ ಠೇವಣಿಯೊಂದಿಗೆ ಬಡ್ಡಿ ಸೇರಿಸಿ ಕೊಡಲಾಗುವುದು ಎಂದು ತಿಳಿಸಲಾಗಿದೆ.

ಭಯದಲ್ಲೇ ಹಣ ಕಳುಹಿಸಿದ ರೈತ ವಿಡಿಯೋ ಕರೆಯ ಕೋರ್ಟ್ ವಿಚಾರಣೆಯಲ್ಲಿ ರೈತ ಅಳುತ್ತ ತನ್ನ ಪರಿಸ್ಥಿತಿಯನ್ನು ಹೇಳಿಕೊಂಡು ಆಸ್ತಿ ದಾಖಲೆ ಮತ್ತು ಹೆಂಡತಿಯ ಚಿನ್ನಾಭರಣವನ್ನು ಒತ್ತೆ ಇಟ್ಟು 25 ಲಕ್ಷ ರೂ. ಠೇವಣಿ ಇಡಲು ಹೆಚ್ಚಿನ ಸಮಯ ಕೇಳಿದ್ದಾರೆ. ಜು.17ರಂದು 5,50,000 ರೂ. ಮತ್ತು 4,96,000 ರೂ.ಗಳನ್ನು ಸೂಚನೆ ನೀಡಿದ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ. ಉಳಿಕೆ 15 ಲಕ್ಷ ರೂ.ಗಳನ್ನು ಠೇವಣಿ ಇಡಲು ಒತ್ತಾಯವೂ ಶುರುವಾಗಿದೆ. ಪ್ರತಿ 2-3 ಗಂಟೆಗೊಮ್ಮೆ ‘ಐ ಎಮ್ ಕೋ-ಆಪರೇಟಿವ್ ಆ್ಯಂಡ್ ಸ್ೇ’ ಎಂಬ ಸಂದೇಶವನ್ನು ವಾಟ್ಸ್‌ಆ್ಯಪ್‌ಗೆ ಕಳುಹಿಸಲು ಸೂಚನೆ ನೀಡಲಾಗಿದೆ. ಕೊನೆಗೆ ಈ ಬೆದರಿಕೆಯನ್ನು ರೈತ ವಿದೇಶದಲ್ಲಿ ವಾಸವಿರುವ ತನ್ನ ಮಗನಿಗೆ ತಿಳಿಸಿದ ನಂತರ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಜು.31ರಂದು ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪೊಲೀಸರ ಹೆಸರಿನಲ್ಲಿ ವಾಟ್ಸ್‌ಆ್ಯಪ್ ಮತ್ತು ಸ್ಕೈಪ್ ಆ್ಯಪ್‌ಗಳಲ್ಲಿ ಬರುವ ಕರೆಗಳನ್ನು ಯಾರೂ ಕೂಡ ನಂಬಬಾರದು. ಯಾವುದಾದರೂ ಕರೆಗಳು ಬಂದರೆ ಧೈರ್ಯವಾಗಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ರೈತನ ಡಿಜಿಟಲ್ ಅರೆಸ್ಟ್‌ನಲ್ಲಿ ಅಧಿಕಾರಿಗಳು, ಪೊಲೀಸರು ಎಂದು ಹೇಳಿ ಹಲವು ದಿನಗಳ ಕಾಲ ನಂಬಿಸಿ, ಹೆದರಿಸಿ ವಂಚನೆ ಮಾಡಲಾಗಿದೆ. ಸಾಗರ್, ಇನ್‌ಸ್ಪೆಕ್ಟರ್, ಸೈಬರ್ ಕ್ರೈಂ ಪೊಲೀಸ್ ಠಾಣೆ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net