

ಮಂಗಳೂರು: ಮಂಗಳೂರಿನಲ್ಲಿ ಸುಮಾರು 25 ವರ್ಷ ಹಿಂದೆ ಅಂಬಾಸಿಡರ್ ಕಾರು ಕಳವು ಪ್ರಕರಣದಲ್ಲಿ ತಲೆಮರೆಸಿದ್ದ ಆರೋಪಿಯನ್ನು ಬಂದರು ಪೊಲೀಸರು ಬಂಧಿಸಿದ್ದಾರೆ.
ಪಿರಿಯಾಪಟ್ಟಣದ ಆರೆನಹಳ್ಳಿ ನಿವಾಸಿ ಅಸ್ಲಾಂ ಯಾನೆ ಅಸ್ಲಾಂ ಪಾಷಾ ಬಂಧಿತ ಆರೋಪಿ. ಈತನ ವಿರುದ್ಧ 1997ರಲ್ಲಿ ಅಂಬಾಸಿಡರ್ ಕಾರು ಕಳವಿಗೆ ಸಂಬಂಧಿಸಿ ಮಂಗಳೂರು ದಕ್ಷಿಣ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಆರೋಪಿ ಅಸ್ಲಾಂ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಆದರೆ ಆರೋಪಿ ಅಸ್ಲಾಂ 2000 ಇಸ್ವಿಯಿಂದ ನ್ಯಾಯಾಲಯಕ್ಕೆ ಗೈರಾಗಿದ್ದು, 2015ರಲ್ಲಿ ಆರೋಪಿಯ ಪತ್ತೆಗೆ ನ್ಯಾಯಾಲಯ ವಾರಂಟ್ ಹೊರಡಿಸಿತ್ತು. ಆರೋಪಿ ತನ್ನ ವಿಳಾಸವನ್ನು ಪೀಣ್ಯ, ಬೆಂಗಳೂರು ಎಂದು ನೀಡಿರುವುದರಿಂದ ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದ್ದರು. ಕೊನೆಗೂ ಆರೋಪಿಯ ಮೂಲ ವಿಳಾಸ ಪತ್ತೆ ಮಾಡುವಲ್ಲಿ ಸಿಬ್ಬಂದಿ ಪುಟ್ಟರಾಮ ಮತ್ತು ರವಿ ಕುಮಾರ್ ಯಶಸ್ವಿಯಾಗಿದ್ದು, ಆತನನ್ನು ಬಂಧಿಸಿ ಕರೆತಂದಿದ್ದಾರೆ.