

ಹೊಸಪೇಟೆ: ನಿಮ್ಮ ಬಳಿ ಡ್ರೈವಿಂಗ್ ಇಲ್ಲವೇ, ನಿಮ್ಮ ಅಪ್ರಪ್ತ ಮಕ್ಕಳು ಬೈಕ್, ಕಾರು ಓಡಿಸುತ್ತಿದ್ದಾರೆಯೇ? ಹಾಗಾದರೆ, ಎಚ್ಚರ. ಒಂದೊಮ್ಮೆ ಅಂತಹವರು ಪೊಲೀಸರ ಕೈಗೆ ಸಿಕ್ಕಿಬಿದ್ದರೆ, ಪೋಷಕರಿಗೆ ೨೫ ಸಾವಿರ ರೂ. ದಂಡ ಹಾಗೂ ೩ ವರ್ಷ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ.
ಸಾರಿಗೆ ಇಲಾಖೆಯಿಂದ ವಾಹನ ಚಾಲನಾ ಪರವಾನಿಗೆ ಪಡೆಯದೇ, ವಾಹನ ಓಡಿಸುವವುದಕ್ಕೆ ಕಡಿವಾಣ ಹಾಕಲು ಜಿಲ್ಲಾ ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಅ.೬ ರಿಂದ ಜಿಲ್ಲೆಯಲ್ಲಿ ಕಾರ್ಯಾಚಾರಣೆ ಅಪ್ರಾಪ್ತರು ಬೈಕ್, ಕಾರು ಓಡಿಸುವುದು ಕಂಡು ಬಂದರೆ, ಅಂತಹ ವಾಹನಗಳನ್ನು ಜಪ್ತಿಮಾಡಿಕೊಳ್ಳುವರು. ಅವರ ಪೋಷಕರ ವಿರುದ್ಧ ಕಲಂ ೫(೧) ಆಧಾರದಲ್ಲಿ ೧೮೦ ಐಎಂವಿ ಕಾಯ್ದೆಯಡಿ ೨೫ ಸಾವಿರ ರೂ. ದಂಡ ವಿಧಿಸುವುದರ ಜತೆಗೆ ೩ ವರ್ಷ ಜೈಲು ಶಿಕ್ಷೆಗೆ ಗುರಿಪಡಿಸಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಅಪ್ರಾಪ್ತರು ಮತ್ತು ವಾಹನ ಚಾಲನಾ ಪರವಾನಿಗೆ ಇಲ್ಲದವರಿಗೆ ವಾಹನಗಳನ್ನು ಓಡಿಸಲು ಕೊಡಬೇಡಿ ಎಂದು ಎಸ್ಪಿ ಶ್ರೀಹರಿ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.