ಚಾಮುಂಡಿಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ವಿತರಿಸಲು ಸಿದ್ಧವಾಗುತ್ತಿದೆ 25 ಸಾವಿರ ಮ್ಯಾಂಗೋ ಬರ್ಫಿ

9
Published on

ಮೊದಲ ಆಷಾಢ ಶುಕ್ರವಾರ(ಜೂ.23) ಚಾಮುಂಡಿ ದರ್ಶನಕ್ಕೆ ಚಾಮುಂಡಿಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ವಿತರಿಸಲು 25 ಸಾವಿರ ಮ್ಯಾಂಗೋ ಬರ್ಫಿ ಸಿದ್ಧವಾಗುತ್ತಿದೆ.

ಮೊದಲ ಆಷಾಢ ಶುಕ್ರವಾರದಂದು ಕಳೆದ 18 ವರ್ಷಗಳಿಂದ ಪ್ರಸಾದ ವ್ಯವಸ್ಥೆ ಮಾಡುತ್ತಿರುವ ನೂರಡಿ ರಸ್ತೆಯ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ಈ ಬಾರಿಯೂ ಪ್ರಸಾದ ವಿತರಣೆ ಮಾಡುತ್ತಿದೆ. ಅದಕ್ಕಾಗಿ ಭಕ್ತರಿಗೆ ವಿತರಿಸಲು 25 ಸಾವಿರ ಮ್ಯಾಂಗೋ ಬರ್ಫಿ ತಯಾರಾಗುತ್ತಿದೆ. ನಗರದ ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ 8 ಬಾಣಸಿಗರ ತಂಡ ಮಂಗಳವಾರದಿಂದ ಖಾದ್ಯ ತಯಾರಿಕೆ ಆರಂಭಿಸಿದೆ. ಮೂರು ದಿನಗಳಲ್ಲಿ 25 ಸಾವಿರ ಬರ್ಫಿ ತಯಾರಿಕೆ ಪೂರ್ಣಗೊಳ್ಳಲಿದೆ.

30 ಕೆಜಿ ಮೈದಾ, 200 ಕೆಜಿ ಹಾಲುಕೋವಾ, 400 ಕೆಜಿ ಸಕ್ಕರೆ, 100 ಲೀಟರ್ ಮಾವಿನ ಹಣ್ಣಿನ ಪಲ್ಪ್, 3 ಕೆಜಿ ಪಿಸ್ತಾ, 5 ಕೆಜಿ ಬಾದಾಮಿ, 2 ಟಿನ್ ನಂದಿನಿ ತುಪ್ಪ, 30 ಕೆಜಿ ನಂದಿನಿ ಮಿಲ್ಕ್ ಪೌಡರ್ ಬಳಸಿ ಬರ್ಫಿ ತಯಾರಿಸಲಾಗುತ್ತಿದೆ. ಇದರ ಜವಾಬ್ದಾರಿಯನ್ನು ಆದಿತ್ಯ ಕೇಟರರ್ಸ್ ವಹಿಸಿಕೊಂಡಿದೆ.

ಬೆಳಗ್ಗೆಯಿಂದಲೇ ವಿತರಣೆ

ಬೆಟ್ಟದ ಪಾರ್ಕಿಂಗ್ ಜಾಗದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಶುಕ್ರವಾರ ಬೆಳಗ್ಗೆಯಿಂದಲೇ ವಿತರಣೆ ಆರಂಭವಾಗಲಿದೆ. ಅಂದು ಬೆಳಗ್ಗೆ ಉಪಾಹಾರಕ್ಕೆ ಪೈನಾಪಲ್ ಕೇಸರ್‌ಬಾತ್, ಪೊಂಗಲ್, ರವಾ ವಾಂಗೀಬಾತ್ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ ಊಟಕ್ಕೆ ಕೋಸಂಬರಿ, ಪಲ್ಯ, ಬಿಸಿಬೇಳೆಬಾತ್, ಅನ್ನ- ಸಾಂಬಾರ್, ಹಪ್ಪಳ, ಮೊಸರು ಹಾಗೂ ಮ್ಯಾಂಗೋಬರ್ಫಿ ವಿತರಿಸಲಾಗುತ್ತದೆ. ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ.


‘ಪ್ರತಿ ವರ್ಷದ ಮೊದಲ ಆಷಾಢ ಶುಕ್ರವಾರ ವಿಶೇಷ ಸಿಹಿ ವಿತರಿಸಲಾಗುತ್ತಿದ್ದು, ಈ ಬಾರಿ ಮ್ಯಾಂಗೋ ಬರ್ಫಿ ನೀಡಲಾಗುತ್ತಿದೆ’ ಎಂದು ಸೇವಾರ್ಥದಾರ ಅರುಣ್‌ಕುಮಾರ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net