

ಬಾಗಲಕೋಟೆ: ಯುಕೆಪಿ ಹೆಸರಿನಲ್ಲಿ ಪಾದಯಾತ್ರೆ ಮಾಡಿ ಕೊಟ್ಟಿದ್ದ ಭರವಸೆ ಈಡೇರಿಸಲಿಲ್ಲ. ಈಗ ಮತ್ತೊಮ್ಮೆ ಅಭಯ ನೀಡಿ ಅಧಿಕಾರ ಪಡೆದಿದ್ದೀರಿ. ಈಗಲಾದರೂ ನುಡಿದಂತೆ ನಡೆಯಿರಿ. ಈ ಸಾಲಿನ ಬಜೆಟ್‌ನಲ್ಲಿ ಯುಕೆಪಿಗೆ 25 ಸಾವಿರ ಕೋಟಿ ರೂ. ಅನುದಾನ ತೆಗೆದಿಡುವಂತೆ ಪರಿಷತ್ ಸದಸ್ಯ ಹನಮಂತ ನಿರಾಣಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಬಾಗಲಕೋಟೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಲ್ಲಿ ಅಧಿಕಾರಕ್ಕೆ ಬರುವಾಗ ಐದು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸುವುದಾಗಿ ಹೇಳಿ ಕೇವಲ ಏಳೆಂಟು ಸಾವಿರ ಕೋಟಿ ರೂ. ಮಾತ್ರ ಖರ್ಚು ಮಾಡಿದ್ದೀರಿ. ಯೋಜನೆ ಪೂರ್ಣವಾಗಲು ಒಂದು ಲಕ್ಷ ಕೋಟಿ ರೂ. ಅನುದಾನ ಬೇಕು. ಇದನ್ನು ಒಮ್ಮೆಲೆ ಕೊಡಿ ಎಂದು ನಾವು ಕೇಳಲ್ಲ. ವರ್ಷಕ್ಕೆ 25 ಸಾವಿರ ಕೋಟಿಯಂತೆ ಅನುದಾನ ಒದಗಿಸಿ ನಾಲ್ಕು ವರ್ಷದಲ್ಲಿ ಪೂರ್ಣಗೊಳಿಸಿ ಎಂದು ಒತ್ತಾಯಿಸಿದರು.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮುಳುಗಡೆ ಆಗುವ ಜಮೀನಿಗೆ ಬೆಲೆ ನಿರ್ಧಾರ ಮಾಡಲಾಗಿದೆ. ಒಣ ಬೇಸಾಯಕ್ಕೆ 20 ಲಕ್ಷ ಹಾಗೂ ನೀರಾವರಿಗೆ 24 ಲಕ್ಷ ರೂ. ನಿಗದಿ ಮಾಡಿ, ಅಂದಿನ ಜಲ ಸಂಪನ್ಮೂಲ ಸಚಿವರಾಗಿದ್ದ ಗೋವಿಂದ ಕಾರಜೋಳ ಚೆಕ್ ಸಹ ವಿತರಣೆ ಮಾಡಿದ್ದರು. ಯುಕೆಪಿಗೆ ಸಂಬಂಧಿಸಿದಂತೆ ಅನೇಕ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಆ ವೇಗ ಈ ಸರ್ಕಾರದ ಎಂಟು ತಿಂಗಳಲ್ಲಿ ಆಗಿಲ್ಲ. ಕಾಂಗ್ರೆಸ್ ಸರ್ಕಾರ ಈ ವರೆಗೂ 265 ಕೋಟಿ ರೂ. ಮಾತ್ರ ಖರ್ಚು ಮಾಡಿದೆ. ಸಿಬ್ಬಂದಿಗೂ ಸಹ ವೇತನ ಬರುತ್ತಿಲ್ಲ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಲ್ಲ ಎಂದು ಟೀಕಿಸಿದರು.
ಚುನಾವಣೆ ವೇಳೆ ಕೃಷ್ಣಾ ಬಗ್ಗೆ ಭರವಸೆ ನೀಡಿದ್ದೀರಿ. ಈ ನಾಲ್ಕು ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸಿ, ಖಾಲಿ ಹುದ್ದೆಗಳನ್ನು ಮೊದಲು ಭರ್ತಿ ಮಾಡಿ. ಕೊಟ್ಟ ಮಾತಿಗೆ ಬದ್ಧರಾಗಿ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕೃಷ್ಣಾ ಯೋಜನೆ ಬಗ್ಗೆ ನೀಡಿದ್ದ ಭರವಸೆ ಏಕೆ ಈಡೇರಲಿಲ್ಲ? ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಕೃಷ್ಣಾ ಯೋಜನೆಗೆ ನೆರವು ನೀಡುವ ಅಭಯ ಎಲ್ಲಿಗೆ ಬಂತು? ಮುಳುಗಡೆ ಆಗುವ ಜಮೀನಿಗೆ ಒಣ ಬೇಸಾಯಕ್ಕೆ ಎಕರೆಗೆ 30 ಲಕ್ಷ ಹಾಗೂ ನೀರಾವರಿಗೆ 40 ಲಕ್ಷ ರೂ. ಪರಿಹಾರದ ನಿಮ್ಮ ಮುಖಂಡರ ವಾಗ್ದಾನ ಎಲ್ಲಿಗೆ ಬಂತು ಎನ್ನುವ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಲು ಪರದಾಡಿದ ಪರಿಷತ್ ಸದಸ್ಯರು, ಈಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ನಮ್ಮ ಪಾಲಿನ 130 ಟಿಎಂಸಿ ನೀರು ಬಳಕೆ ಮಾಡಿಕೊಂಡು 5 ಲಕ್ಷ ಹೆಕ್ಟರ್ ಪ್ರದೇಶವನ್ನು ನೀರಾವರಿಗೆ ಒಳಪಡಿಸಬೇಕು. ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ ಕೊಡಬೇಕು. ರೈತರ ಬದುಕು ಹಸನಾಗಬೇಕು. ಇದಕ್ಕಾಗಿ ನಾವು ಧ್ವನಿ ಎತ್ತುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪರಿಷತ್ ಸದಸ್ಯ ರವಿಕುಮಾರ್, ಮುಖಂಡರಾದ ಬಸವರಾಜ್ ಯಂಕಂಚಿ, ರಾಜು ನಾಯ್ಕರ್ ಮತ್ತಿತರರು ಇದ್ದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ಟಿಕೆಟ್ ಆಕಾಂಕ್ಷಿಯಾ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರ ಸಹೋದರರು ಆಗಿರುವ ಪರಿಷತ್ ಸದಸ್ಯ ಹನಮಂತ ನಿರಾಣಿ, ಈ ಬಗ್ಗೆ ನೀವು ಅವರನ್ನೇ ಕೇಳಬೇಕು. ನಾನಂತೂ ಟಿಕೆಟ್ ಆಕಾಂಕ್ಷಿ ಅಲ್ಲ. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಅದಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ. ಪಕ್ಷದ ಅಭ್ಯರ್ಥಿ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದಕ್ಕೆ ರವಿಕುಮಾರ ಸಹ ಧ್ವನಿಗೂಡಿಸಿದರು.