25 ಕ್ವಿಂಟಲ್ ಮೆಕ್ಕೆಜೋಳ ಕಳವು, ಇಬ್ಬರ ಬಂಧನ

shiralakoppa police station
Published on

ಶಿವಮೊಗ್ಗ: ಒಣಗಿಸಲು ಹಾಕಿದ್ದ 25 ಕ್ವಿಂಟಲ್ ಹಸಿ ಮೆಕ್ಕೆಜೋಳ ಕಳವು ಮಾಡಿದ್ದ ಹಾವೇರಿ ಜಿಲ್ಲೆಯ ಇಬ್ಬರನ್ನು 48 ಗಂಟೆಯೊಳಗೆ ಬಂಧಿಸಿರುವ ಶಿರಾಳಕೊಪ್ಪ ಠಾಣೆ ಪೊಲೀಸರು, 55 ಸಾವಿರ ರೂ. ಮೌಲ್ಯದ ಹಸಿ ಮೆಕ್ಕೆಜೋಳ, 9 ಲಕ್ಷ ರೂ. ಮೌಲ್ಯದ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನವನ್ನು ಜಪ್ತಿ ಮಾಡಿದ್ದಾರೆ.

ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಸೀತೆಕೊಂಡ ಗ್ರಾಮದ ನವೀನ್(21) ಮತ್ತು ಆಪಿನಕೊಪ್ಪ ಗ್ರಾಮದ ರಾಜೇಂದ್ರ (20) ಬಂಧಿತರು. ಗುರುವಾರ(ಮೇ 22) ಕಣಸೋಗಿ ಗ್ರಾಮದ ಗೋಪಾಲಪ್ಪ, ಕೊಳಗಿ ಗ್ರಾಮದ ಸಂದೀಪ ಮತ್ತು ಕೊಳಗಿ ತಾಂಡದ ಶಿವಕುಮಾರ್ ಎಂಬುವರು ಹಸಿ ಮೆಕ್ಕೆಜೋಳವನ್ನು ಒಣಗಿಸಲು ಹಾಕಿದ್ದರು. ಅದನ್ನು ಗಮನಿಸಿದ್ದ ಆರೋಪಿಗಳಿಬ್ಬರೂ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನದಲ್ಲಿ 25 ಕ್ವಿಂಟಲ್‌ನಷ್ಟು ಹಸಿ ಮೆಕ್ಕೆಜೋಳವನ್ನು ಕಳವು ಮಾಡಿ ಪರಾರಿಯಾಗಿದ್ದರು.

ಈ ಬಗ್ಗೆ ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡಿವೈಎಸ್‌ಪಿ ಕೆ.ಇ.ಕೇಶವ ಅವರ ಮೇಲ್ವಿಚಾರಣೆಯಲ್ಲಿ ಶಿಕಾರಿಪುರ ಟೌನ್ ವೃತ್ತದ ಸಿಪಿಐ ಸಂತೋಷ್ ಪಾಟೀಲ್ ನೇತೃತ್ವದಲ್ಲಿ ಶಿರಾಳಕೊಪ್ಪ ಠಾಣೆ ಪಿಎಸ್‌ಐ ಟಿ.ಬಿ.ಪ್ರಶಾಂತ್ ಕುಮಾರ್ ಮತ್ತು ಸಿಬ್ಬಂದಿಗಳಾದ ಆರ್.ಸಂತೋಷಕುಮಾರ್, ಜಿ.ರಾಕೇಶ್, ಸಲ್ಮಾನ್ ಖಾನ್ ಹಾಜಿ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net