

ಶಿಗ್ಗಾಂವಿ(ಗ್ರಾ): ಉಸಿರಾಟದ ಸಮಸ್ಯೆಯಿಂದ ಬಳಲುವವರ ಆರೈಕೆಗಾಗಿ 25 ಆಕ್ಸಿಜನ್ ಕಾನ್ಸನ್ಟ್ರೇಟರ್ಗಳನ್ನು ಶಿಗ್ಗಾಂವಿ ಸಾರ್ವಜನಿಕ ತಾಲೂಕು ಆಸ್ಪತ್ರೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಗುರುವಾರ ಹಸ್ತಾಂತರಿಸಿದರು.
ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದಲ್ಲಿ ಕೋವಿಡ್ ಸ್ಥಿತಿಗತಿ, ತಾಲೂಕಾಸ್ಪತ್ರೆಗಳಲ್ಲಿ ಕೈಗೊಂಡ ವ್ಯವಸ್ಥೆ ಪರಿಶೀಲಿಸಿ ಅವರು, ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆಸ್ಪತ್ರೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಡ್ಗಳನ್ನು ಸಿದ್ಧಪಡಿಸಬೇಕಾಗಿದೆ. ತಕ್ಷಣ ಶಿಗ್ಗಾಂವಿ ತಾಲೂಕಾಸ್ಪತ್ರೆಯಲ್ಲಿ 46 ಹೆಚ್ಚುವರಿ ಬೆಡ್ಗಳನ್ನು ಸಿದ್ಧಪಡಿಸುವಂತೆ ವೈದ್ಯಾಧಿಕಾರಿಗೆ ಸೂಚಿಸಿದರು.
ಸವಣೂರಲ್ಲಿ ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಂಡು ಹೆಚ್ಚುವರಿಯಾಗಿ 20 ಹಾಸಿಗೆಗಳನ್ನು ಸಿದ್ಧಪಡಿಸಿ ಎಂದು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಇನ್ನು ನಾಲ್ಕು ದಿನಗಳಲ್ಲಿ 25 ಆಕ್ಸಿಜನ್ ಕಾನ್ಸನ್ಟ್ರೇಟರ್ಗಳನ್ನು ಸವಣೂರ ಆಸ್ಪತ್ರೆಗೆ ಒದಗಿಸಲಾಗುವುದು. ಆರಂಭದಲ್ಲಿ ಕೋವಿಡ್ ಸಮಸ್ಯೆ ಅಷ್ಟೊಂದು ಕಂಡುಬರುವುದಿಲ್ಲ. ಆದರೆ, ಉಸಿರಾಟ ಸಮಸ್ಯೆ ಆಗುತ್ತಿದ್ದಂತೆ ರೋಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಅಂಥವರಿಗಾಗಿ ಆಕ್ಸಿಜನ್ ಕಾನ್ಸನ್ಟ್ರೇಟರ್ಗಳನ್ನು ವಿತರಿಸಲಾಗುತ್ತಿದೆ. ವೈದ್ಯರು ಸೋಂಕಿತರಿಗೆ ಸಮಯೋಚಿತವಾಗಿ ಆಕ್ಸಿಜನ್ ನೀಡಿ ಅವರ ಪ್ರಾಣ ರಕ್ಷಿಸಬೇಕು ಎಂದು ಸೂಚಿಸಿದರು.