ಮತ್ಸಾಶ್ರಯದಡಿ 25 ಮನೆ ಮಂಜೂರು

Deshapande
Published on

ಹಳಿಯಾಳ: ಮೀನುಗಾರರ ಕುಟುಂಬಗಳಿಗೆ ಮೀನುಗಾರಿಕೆ ಇಲಾಖೆಯ ಮತ್ಸಾಶ್ರಯ ವಸತಿ ಯೋಜನೆಯಡಿ ಹಳಿಯಾಳ ಕ್ಷೇತ್ರಕ್ಕೆ 25 ಮನೆಗಳು ಮಂಜೂರಾಗಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.

ಪಟ್ಟಣದ ಅವರ ನಿವಾಸದಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ವಿುಕರ ಕಲ್ಯಾಣ ಮಂಡಳಿಯಿಂದ ಚಾಲಿತ ಆರೋಗ್ಯ ಘಟಕ (ಆಂಬುಲೆನ್ಸ್) ಹಳಿಯಾಳ ಕ್ಷೇತ್ರಕ್ಕೆ ಮಂಜೂರಾಗಿದ್ದು, ಕೆಲವೆ ದಿನಗಳಲ್ಲಿ ಸೇವೆಗೆ ಲಭ್ಯವಾಗಲಿದೆ ಎಂದರು.

ವೈದ್ಯಕೀಯ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಳಿಯಾಳ, ದಾಂಡೇಲಿ ಹಾಗೂ ಜೊಯಿಡಾ ತಾಲೂಕಿನ 12 ಜನ ಫಲಾನುಭವಿಗಳಿಗೆ 2,73,194 ರೂ.ಗಳ ಪರಿಹಾರ ದೊರಕಿದೆ ಎಂದರು.

ಜೊಯಿಡಾ ತಾಲೂಕಿನ ಕುಂಬಾರವಾಡ ಹೋಬಳಿಗೆ ಹೊಸ ಮುರಾಜಿ ದೇಸಾಯಿ ವಸತಿ ಶಾಲೆ ಮಂಜೂರಾಗಿದ್ದು, ದಟ್ಟ ಅರಣ್ಯ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಕಾಶಗಳಲ್ಲಿ ಉತ್ತಮಗೊಳಿಸಲು ಇದರಿಂದ ಅನುಕೂಲವಾಗಲಿದೆ. ಹಾಲಕ್ಕಿ ಜನಾಂಗವನ್ನು ಅನುಸೂಚಿತ ಪಂಗಡ (ಎಸ್​ಟಿ) ವರ್ಗದಲ್ಲಿ ಸೇರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಕೋವಿಡ್ ಭಯ ಬೇಡ, ಎಚ್ಚರಿಕೆ ವಹಿಸಿ

ಕೋವಿಡ್ ಸಾಂಕ್ರಾಮಿಕ ರೋಗದ ಬಗ್ಗೆ ಭಯ ಪಡದೆ ಎಚ್ಚರಿಕೆ ವಹಿಸಬೇಕು ಎಂದು ಆರ್​ವಿಡಿ ತಿಳಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಹಳಿಯಾಳ, ದಾಂಡೇಲಿ, ಜೊಯಿಡಾ ತಾಲೂಕಿನ ಸರ್ಕಾರಿ ಆಸ್ಪತ್ರೆ ಹಾಗೂ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಚಿಕಿತ್ಸಾ ಕೇಂದ್ರಗಳಲ್ಲಿ ಕೋವಿಡ್ ಸೋಂಕಿತರನ್ನು ಉಪಚರಿಸಲು ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ಈಗಾಗಲೇ ಪುರುಷರಿಗೆ 10 ಹಾಸಿಗೆಯ ಮತ್ತು ಮಹಿಳೆಯರಿಗೆ ಆರು ಹಾಸಿಗೆಯ ಪತ್ಯೇಕವಾದ ಎಲ್ಲ ವೈದ್ಯಕೀಯ ವ್ಯವಸ್ಥೆ ಒಳಗೊಂಡ ಕೋವಿಡ್ ವಾರ್ಡ್ ಕೊಠಡಿಯನ್ನು ಹಳಿಯಾಳ ಸರ್ಕಾರಿ ಆಸ್ಪತ್ರೆಯಲ್ಲಿ ಸಿದ್ಧಗೊಳಿಸಲಾಗಿದೆ. ಕೋವಿಡ್ ಸೋಂಕಿತರಿಗೆ ಉಪಚರಿಸಲು ಯಾವುದೇ ವೈದ್ಯಕೀಯ ಕೊರತೆಯಾಗದಂತೆ ಕ್ರಮ ಕೈಗೊಳ್ಳಲು ವೈದ್ಯರು ಮತ್ತು ತಾಲೂಕಾಡಳಿತಕ್ಕೆ ಸೂಚಿಸಲಾಗಿದೆ ಎಂದು ಶಾಸಕರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾ ಪಾಟೀಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net