

ಯಲಬುರ್ಗಾ: ಪಂಚಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪಿಸುವ ಉದ್ದೇಶದಿಂದ ಅನುಷ್ಠಾನ ಸಮಿತಿ ರಚಿಸಿದ್ದು, ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಗೃಹಲಕ್ಷ್ಮಿ ಯೋಜನೆ ಅಡಿ 60783ಲಾನುಭವಿಗಳಿದ್ದು, ಎನ್.ಪಿ.ಸಿಎಲ್ನಿಂದ 390 ಅನರ್ಹ ಫಲಾನುಭವಿಗಳಿದ್ದಾರೆ. 64 ಜನ ಮೃತಪಟ್ಟ ಫಲಾನುಭವಿಗಳಿದ್ದಾರೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೇಟದಪ್ಪ ಮಾಳೆಕೊಪ್ಪ ಮಾಹಿತಿ ನೀಡಿದರು.
ಅನ್ನಭಾಗ್ಯ ಯೋಜನೆಯಡಿ ಯಲಬುರ್ಗಾ ಮತ್ತು ಕುಕನೂರು ತಾಲೂಕುಗಳ 58542 ಲಾನುಭವಿಗಳಿಗೆ 236,57 ಕೋಟಿ ರೂ. ಖರ್ಚು ಆಗಿದೆ ಎಂದು ಆಹಾರ ಇಲಾಖೆ ಶಿರಸ್ತೇದಾರ್ ಮಲ್ಲೀಕಾರ್ಜುನ ಹಿರೇಮಠ ತಿಳಿಸಿದರು.
ನ್ಯಾಯಬೆಲೆ ಅಂಗಡಿ ಮಾಲೀಕರಿಂದ ನೋಟಿಸ್ ಜಾರಿ ಮಾಡಿ, 25ದಿನಗಳವರೆಗೆ ಪಡಿತರ ವಿತರಿಸಿ, ತೂಕದಲ್ಲಿ ಯಾವುದೇ ವ್ಯತ್ಯಾಸ ಇರಬಾರದು. ಅ.6ರಂದು ಮುಖ್ಯಮಂತ್ರಿ ಆಗಮಿಸುವ ಕಾರಣ ತಾಲೂಕಿನ 256ಮತಗಟ್ಟೆಗಳಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಅನುಷ್ಠಾನ ಸಮಿತಿ ಅಧ್ಯಕ್ಷ ಸದಸ್ಯರು, ಪಿಡಿಒ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಒಟ್ಟಾಗಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕರೆತರಬೇಕು. ಇದು ಫಲಾನುಭವಿಗಳ ಸಮಾವೇಶ ಆದ್ದರಿಂದ ಸೌಲಭ್ಯ ಪಡೆದ ಫಲಾನುಭವಿಗಳನ್ನು ಕಾರ್ಯಕ್ರಮಕ್ಕೆ ಕರೆ ತರಬೇಕು ಎಂದು ರೆಡ್ಡಿ ಶ್ರೀನಿವಾಸ ಹೇಳಿದರು. ಶಕ್ತಿಯೋಜನೆ, ಗೃಹಜ್ಯೋತಿ, ಯುವನಿಧಿ ಯೋಜನೆಗಳ ಬಗ್ಗೆ ಮಾಹಿತಿ ಒದಗಿಸಿದರು.
ಸಾರಿಗೆ ಘಟಕದ ವ್ಯವಸ್ಥಾಪಕ ಸಣ್ಣ ಕುಂಟೆಪ್ಪ ಆಲೂರು, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸುಧೀರ್ ಕೊರ್ಲಳ್ಳಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಮಹಮದ್ ಕಲೀಮ್, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಶಿವಯೋಗಿ, ಕುಕನೂರು ತಾಪಂ ಇಒ ಸಂತೋಷ ಬಿರಾದಾರ ಪಾಟೀಲ್, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸಂಗಮೇಶ ಗುತ್ತಿ,
ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ಯಲಬುರ್ಗಾ ತಾಪಂ ಇಒ ನಿಲಗಂಗಾ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಸಂಗಮೇಶ ಗಡಾದ, ವೀರಭದ್ರಪ್ಪ ಶೆಟ್ಟರ್, ಓಬಳೆಪ್ಪ ಕುಲಕರ್ಣಿ, ಪುನೀತ್ ಕೊಪ್ಪಳ, ಹುಲುಗಪ್ಪ, ಗವಿಸಿದ್ದಪ್ಪ ಚಂಡೂರು, ಸಂತೋಷ ಮೇಣಸಿನಕಾಯಿ, ಪ್ರವೀಣಾ ಅಂಗಡಿವ, ಸೀನಪ್ಪ ನಾಯಕ ಇತರರಿದ್ದರು.