

ಕೆಜಿಎಫ್: ನಗರ ಸುತ್ತಮುತ್ತ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಟೌನ್ಶಿಪ್ ನಿಮಾರ್ಣವಾಗಲಿದ್ದು, ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿಗೆ ಎಸ್ಎಚ್ಡಿಪಿ ಯೋಜನೆಯಡಿ 25 ಕೋಟಿ ರೂ.ಪ್ರಸ್ತಾವನೆಗೆ ಸರ್ಕಾರದಿಂದ ಅನುಮೋದನೆ ದೊರೆತಿದೆ ಎಂದು ಶಾಸಕಿ ಎಂ.ರೂಪಕಲಾ ತಿಳಿಸಿದರು.
ನಗರದ ಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಅಪೆಂಡಿಕ್ಸ್ ಇ (ಎಸ್ಎಚ್ಡಿಪಿ)ನಲ್ಲಿ ರಾಜಪೇಟೆ ರಸ್ತೆ ಅಭಿವೃದ್ಧಿಗೆ 12 ಕೋಟಿ ರೂ, ಐಬಿ ರಸ್ತೆ 1 ಕೋಟಿ ರೂ, ಗೋಣಮಾಕನಹಳ್ಳಿ ರಸ್ತೆಗೆ 1 ಕೋಟಿ ರೂ, ಕೋಲಾರ-ವಿ ಕೋಟ ರಸ್ತೆಗೆ 4 ಕೋಟಿ ರೂ, ಐಯಪಲ್ಲಿ, ನಲ್ಲೂರು, ಕಳ್ಳಿಕುಪ್ಪ, ನತ್ತ ಮಾರ್ಗದ ರಸ್ತೆ ಅಭಿವೃದ್ಧಿಗೆ 4.5 ಕೋಟಿ ರೂ, ಗೀತಾ ರಸ್ತೆ, ಗಿಫರ್ಡ್ ರಸ್ತೆ, ಓಡಿನಲ್ ರಸ್ತೆಗಳ ಅಭಿವೃದ್ಧಿಗೆ 2.5 ಕೋಟಿ ರೂ. ಸೇರಿ ಒಟ್ಟು 25 ಕೋಟಿ ರೂ. ಕಾಮಗಾರಿಗಳಿಗೆ ಸರ್ಕಾರ ಅನುಮೋದನೆ ನೀಡಿದೆ ಎಂದರು. ನಗರದ ಅಶೋಕ್ನಗರ ಸೇತುವೆಯ ಬಳಿಯಿಂದ ಶೋಭಾ ಸ್ಟೀಲ್ಸ್ವರೆಗೆ ಮತ್ತು ರೋಡ್ಜರ್ಸ್ ಕ್ಯಾಂಪ್ನಿಂದ ಚಂಬರಸನಹಳ್ಳಿ ಕರ್ನಾಟಕ ಗಡಿಯವರೆಗೆ ಎಸ್ಎಚ್ಡಿಪಿ ಯೋಜನೆಯಡಿ, ಚಂಬರಸನಹಳ್ಳಿಯಿಂದ ಕೆಂಪಾಪುರದವರೆಗೆ ಮತ್ತು ಜನಾರ್ಧನ ಹೊಟೇಲ್ನಿಂದ ಸಲ್ಡಾನ ವೃತ್ತದವರೆಗೆ ಸಿಆರ್ಎಫ್ ಯೋಜನೆಯಡಿ ರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದರು.
ನಗರದ ಪ್ರವಾಸಿ ಮಂದಿರವನ್ನು 10 ಕೋಟಿ ರೂ.ವೆಚ್ಚದಲ್ಲಿ ನವೀಕರಣ ಮಾಡಲಾಗುವುದು ಎಂದ ಅವರು, ನಗರದ ಸುತ್ತಮುತ್ತಲ ಪ್ರದೇಶದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಲಿರುವುದರಿಂದ ಕೈಗಾರಿಕೋದ್ಯಮಿಗಳು ದೂರದ ನಗರಗಳಿಂದ ಆಗಮಿಸಲು ಅನುಕೂಲವಾಗುವಂತೆ ಪ್ರವಾಸಿ ಮಂದಿರದ ಬಳಿ 50 ಲಕ್ಷ ರೂ.ವೆಚ್ಚದಲ್ಲಿ ನೂತನವಾಗಿ ಹೆಲಿಪ್ಯಾಡ್ ನಿಮಾರ್ಣ ಮಾಡಲು ಯೋಜನೆ ಹಾಕಿಕೊಂಡಿರುವುದಾಗಿ ತಿಳಿಸಿದರು.
ಪ್ರಧಾನ ಮಂತ್ರಿ (ಪಿಎಂ) ಉಷಾ ಯೋಜನೆಯಲ್ಲಿ 5 ಕೋಟಿ ರೂ.ಗೆ ಅನುಮೋದನೆ ದೊರೆತಿದ್ದು, 3.81 ಕೋಟಿ ರೂ.ವೆಚ್ಚದಲ್ಲಿ ಕಾಲೇಜಿನಲ್ಲಿ ಓಪನ್ ಏರ್ ಆಡಿಟೋರಿಯಂ, ಸೆಮಿನಾರ್ ಹಾಲ್, ಅಧ್ಯಾಪಕರ ನಿರೀಕ್ಷಣಾ ಕೊಠಡಿ, ಕಟ್ಟಡ ನವೀಕರಣ ಕಾಮಗಾರಿಗಳನ್ನು ಮಾಡಲಾಗುವುದು. ಉಳಿದ 1.19 ಕೋಟಿ ರೂ.ವೆಚ್ಚದಲ್ಲಿ ಕಾಲೇಜಿನ ಪೀಠೋಪಕರಣಗಳಿಗೆ ಮೀಸಲಿರಿಸಿರುವುದಾಗಿ ತಿಳಿಸಿದರು. ಬಿಇಎಂಎಲ್ ಬಳಿಯಿರುವ ಸರ್ಕಾರಿ ಐಟಿಐಯನ್ನು 2.20 ಕೋಟಿ ರೂ.ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು, ತಾಲೂಕಿನ ಬೇತಮಂಗಲ ಹೋಬಳಿಯ ಐಯಪಲ್ಲಿ, ನಲ್ಲೂರು ಮತ್ತು ಬಡಮಾಕನಹಳ್ಳಿ ಬಳಿ ಮೇಲ್ಸೇತುವೆಗಳ ನಿಮಾರ್ಣಕ್ಕೆ 7.6 ಕೋಟಿ ರೂ. ಮೀಸಲಿರಿಸಲಾಗಿದ್ದು,
ಈಗಾಗಲೇ ಒಂದು ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಮತ್ತೊಂದು ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ನ್ಯಾಯಾಧೀಶರ ವಸತಿ ಗೃಹ ನಿಮಾರ್ಣಕ್ಕೆ 1.19 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.ನಗರದ ಪ್ರಸನ್ನ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದ 65 ಅಡಿ ಎತ್ತರದ ರಾಜಗೋಪುರ ನಿಮಾರ್ಣ ಮಾಡಿ ದ್ವಾರ ಬಾಗಿಲು, ಗೋಪುರ, ದೇವಾಲಯದ ಆವರಣದಲ್ಲಿ ಶೌಚಗೃಹಗಳು ಸೇರಿ ಸಂಪೂರ್ಣವಾಗಿ ಅಭಿವೃದ್ಧಿ ಮಾಡುವುದಕ್ಕೆ 4.99 ಕೋಟಿ ರೂ. ವೆಚ್ಚವಾಗಲಿದ್ದು, ಈಗಾಗಲೇ 3 ಕೋಟಿ ರೂ.ಅನುಮೋದನೆ ದೊರೆತಿದ್ದು, ಉಳಿದ 1.99 ಕೋಟಿ ರೂ.ಗಳಿಗೆ ಅನುಮೋದನೆ ದೊರೆತ ಕೂಡಲೇ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲಾಗುವುದು. ಇದಲ್ಲದೇ ಸೋಮೇಶ್ವರ, ವಿಜಯೇಂದ್ರಸ್ವಾಮಿ, ಅರ್ಕೇಶ್ವರ, ಕದರೀಪುರ ಲಕ್ಷ್ಮಿನರಸಿಂಹಸ್ವಾಮಿ, ವಿಶ್ವಕರ್ಮ ದೇವಾಲಯಗಳ ಅಭಿವೃದ್ಧಿಗೆ 20 ಲಕ್ಷ ರೂ.ಗಳ ಅನುದಾನ ಬಿಡುಗಡೆಗೆ ಮನವಿ ಸಲ್ಲಿಸಲಾಗಿದೆ ಎಂದರು.