ಕೃಷಿ ವಿವಿ ಪ್ರಾರಂಭಕ್ಕಿಲ್ಲ ಆತಂಕ: ಬಜೆಟ್‌ನಲ್ಲಿ 25 ಕೋಟಿ ರೂ ಘೋಷಣೆ

25 crore announced for Agricultural University Mandya
Published on

ಮಂಡ್ಯ: ರಾಜ್ಯ ಬಜೆಟ್‌ನಲ್ಲಿ 25 ಕೋಟಿ ರೂ ಘೋಷಣೆಯಾಗುವ ಮೂಲಕ ಜಿಲ್ಲೆಯಲ್ಲಿ ಸಮಗ್ರ ಕೃಷಿ ವಿಶ್ವವಿದ್ಯಾನಿಲಯ ಪ್ರಾರಂಭವಾಗುವುದು ಸ್ಪಷ್ಟವಾಗಿದೆ. ಇದರೊಂದಿಗೆ ವಿವಿ ಮಂಡ್ಯದಲ್ಲಿ ಆರಂಭಿಸದಂತೆ ಕೆಲವರು ಮಾಡಿದ ಷಡ್ಯಂತ್ರಕ್ಕೆ ಮನ್ನಣೆ ಸಿಗದಂತಾಗಿದೆ.

ಕೃಷಿ ಪ್ರಧಾನ ಜಿಲ್ಲೆಯಾಗಿರುವ ಮಂಡ್ಯಕ್ಕೆ ಕಳೆದ ಬಜೆಟ್‌ನಲ್ಲಿ ಕೃಷಿ ವಿಶ್ವವಿದ್ಯಾನಿಲಯ ಘೋಷಣೆಯಾಗಿತ್ತು. ನಂತರ ಈ ಸಂಬಂಧ ಹಲವು ಪ್ರಕ್ರಿಯೆ ನಡೆದಿವೆ. ಮಾತ್ರವಲ್ಲದೆ ಸಚಿವ ಸಂಪುಟ ಕೂಡ ಗ್ರೀನ್ ಸಿಗ್ನಲ್ ನೀಡಿದರ ಹೊರತಾಗಿಯೂ ವಿವಿಗೆ ಅಡ್ಡಿಯುಂಟು ಮಾಡುವ ಕೆಲಸ ಸದ್ದಿಲ್ಲದೆ ನಡೆಯುತ್ತಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನರಿಗೆ ಸ್ವಲ್ಪ ಗೊಂದಲವೂ ಇತ್ತು. ಆದರೀಗ ಎಲ್ಲವೂ ಸುಗಮವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಕೃಷಿ ವಿವಿ ಬಗ್ಗೆ ಪ್ರಸ್ತಾಪಿಸಿದ್ದಾರೆ. ನೂತನ ವಿವಿಗೆ ಮೂಲ ಸೌಲರ್ಯ ಕಲ್ಪಿಸಲು 25 ಕೋಟಿ ರೂ ನೀಡಿದ್ದಾರೆ. ಗಮನಾರ್ಹವೆಂದರೆ ಪ್ರಸಕ್ತ ಸಾಲಿನಿಂದಲೇ ತರಗತಿ ಪ್ರಾರಂಭಿಸಲು ಅಸ್ತು ಎಂದಿದ್ದಾರೆ. ತಾಲೂಕಿನ ವಿ.ಸಿ ಾರ್ಮ್‌ನಲ್ಲಿ ಕೃಷಿ ವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಿದ ಮೂಲ ಉದ್ದೇಶವೇ ಭವಿಷ್ಯದಲ್ಲಿ ವಿವಿಯೂ ಆಗಬೇಕೆನ್ನುವುದಾಗಿತ್ತು. ಆದರೆ ಈ ಬಗ್ಗೆ ಅಷ್ಟೊಂದು ಮಾನ್ಯತೆ ಸಿಕ್ಕಿರಲಿಲ್ಲ. ಆದರೀಗ ಸಿಕ್ಕಿದ್ದ ಅವಕಾಶ ಕಸಿದುಕೊಳ್ಳುವ ನಿಟ್ಟಿನಲ್ಲಿ ತಂತ್ರಗಾರಿಕೆ ಸದ್ದಿಲ್ಲದೆ ನಡೆಯುತ್ತಿತ್ತು. ಕಾರಣ ಮಂಡ್ಯದಲ್ಲಿ ಪ್ರಾರಂಭವಾದರೆ ಬೆಂಗಳೂರಿಗೆ ಸಿಕ್ಕಿರುವ ಅವಕಾಶ ತಪ್ಪಲಿದೆ ಎನ್ನುವುದಾಗಿತ್ತು. ಇದಕ್ಕೆ ಪೂರಕವೆನ್ನುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆಯೂ ಒತ್ತಡ ಹಾಕುವ ತಂತ್ರವೂ ನಡೆದಿತ್ತಾದರೂ ಫಲಿಸಲಿಲ್ಲ.

ಸಚಿವರ ಪತ್ರ ಬರೆದಿದ್ದರು: ಜಿಲ್ಲೆಗೆ ಒದಗಿಬಂದಿರುವ ಅವಕಾಶವನ್ನು ತಪ್ಪಿಸಲು ಷಡ್ಯಂತ್ರ ನಡೆಸುತ್ತಿರುವ ಬೆನ್ನಲ್ಲೇ ರೈತ ಸಂಘದ ಹಿರಿಯ ಮುಖಂಡರೂ ಆದ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಮೂರು ಪುಟದ ಪತ್ರ ಬರೆದಿದ್ದರು. ಅದರಲ್ಲಿ ಮಂಡ್ಯ ಜಿಲ್ಲೆಗೆ ಪ್ರತ್ಯೇಕ ಕೃಷಿ ವಿವಿಯ ಅವಶ್ಯಕತೆ ಕುರಿತು ಮಾಹಿತಿ ಹಂಚಿಕೊಂಡಿದ್ದರು. ಇದಕ್ಕೆ ಈಗ ಮನ್ನಣೆ ಸಿಕ್ಕಂತಾಗಿದೆ

ಹೈಟೆಕ್ ಹಾರ್ವೆಸ್ಟರ್‌ಗೆ ನೆರವು ಪ್ರಸ್ತುತ ಕಬ್ಬು ಬೆಳೆಯುವುದಕ್ಕಿಂತ ಕಟಾವು ಮಾಡಿಸುವುದೇ ರೈತರಿಗೆ ದೊಡ್ಡ ಸವಾಲಿನ ಕೆಲಸವಾಗಿದೆ. ಕಾರಣ ಕೂಲಿ ಕಾರ್ಮಿಕರ ಕೊರತೆ. ಈ ನಿಟ್ಟಿನಲ್ಲಿ ಹೈಟೆಕ್ ಹಾರ್ವೆಸ್ಟರ್ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದಲ್ಲಿ ರೈತರಿಗೆ ಒದಗಿಸಲು 140ಕ್ಕಿಂತ ಹೆಚ್ಚು ಷುಗರ್‌ಕೇನ್ ಹಾರ್ವೆಸ್ಟರ್ ಹಬ್ ಸ್ಥಾಪಿಸಲು ಬಜೆಟ್‌ನಲ್ಲಿ 70 ಕೋಟಿ ರೂ ಸಹಾಯಧನ ಘೋಷಣೆ ಮಾಡಲಾಗಿದೆ. ಇದು ಯಶಸ್ವಿಯಾಗಿ ಅನುಷ್ಠಾನಗೊಂಡರೆ ಕಬ್ಬು ಬೆಳೆಗಾರರಿಗೆ ದೊಡ್ಡ ಮಟ್ಟದ ನೆರವಾಗುವುದರಲ್ಲಿ ಅನುಮಾನವಿಲ್ಲ. ಕೆಲ ತಿಂಗಳ ಹಿಂದಷ್ಟೇ ಮಂಡ್ಯದಲ್ಲಿ ಹೈಟೆಕ್ ಹಾರ್ವೆಸ್ಟರ್ ಯಂತ್ರದ ಪ್ರಾತ್ಯಕ್ಷಿತೆ ನೀಡಲಾಗಿತ್ತು. ಮಾತ್ರವಲ್ಲದೆ ಮದ್ದೂರು ತಾಲೂಕಿನ ರೈತರೊಬ್ಬರು ಇದನ್ನು ಖರೀದಿ ಮಾಡಿದ್ದಾರೆ. ಇದಕ್ಕೆ ಸರ್ಕಾರದಿಂದ ಸಹಾಯಧನ ಸಿಕ್ಕಿದೆ.
ಮದ್ದೂರು ಅಭಿವೃದ್ಧಿಗೆ ಪ್ಲ್ಯಾನ್ ವೇಗವಾಗಿ ಬೆಳೆಯುತ್ತಿರುವ ಮದ್ದೂರು ಪಟ್ಟಣಕ್ಕೆ ಅಭಿವೃದ್ಧಿಯ ಸ್ಪರ್ಶ ಬೇಕಿದೆ. ಅದರಲ್ಲಿಯೂ ರಸ್ತೆ ಅಗಲೀಕರಣ ಮಾಡುವುದು ಅನಿವಾರ್ಯವಾಗಿದೆ. ಕಿಷ್ಕಿಂದೆಯಂತಿರುವ ಪಟ್ಟಣದಲ್ಲಿ ಸುಗಮ ವಾಹನ ಸಂಚಾರ ಅಸಾಧ್ಯ. ಈ ನಿಟ್ಟಿನಲ್ಲಿ ರಸ್ತೆ ಅಗಲೀಕರಣದ ಬಗ್ಗೆ ಶಾಸಕ ಕೆ.ಎಂ.ಉದಯ್ ಆಸಕ್ತಿ ತೋರಿಸಿದ್ದಾರೆ. ಈ ಸಂಬಂಧ ಈಗಾಗಲೇ ಸಮೀಕ್ಷೆ ಮಾಡಲಾಗಿದೆ. ಇದಕ್ಕೆ ಪೂರಕವಾಗಿ ಮದ್ದೂರು ನಗರದಲ್ಲಿ ರಸ್ತೆ ಅಗಲೀಕರಣಕ್ಕಾಗಿ ವಿಸ್ತೃತ ಯೋಜನಾ ವರದಿ ತಯಾರಿಸಲಾಗುತ್ತಿರುವ ಬಗ್ಗೆ ಬಜೆಟ್‌ನಲ್ಲಿ ಸಿಎಂ ಪ್ರಸ್ತಾಪಿಸಿದ್ದಾರೆ. ಮಾತ್ರವಲ್ಲದೆ ಜಿಲ್ಲಾಡಳಿತ ಕೂಡ ಈ ಬಗ್ಗೆ ಸಭೆಗಳನ್ನು ಆಯೋಜಿಸಿ ವರದಿ ಸಿದ್ಧಪಡಿಸುತ್ತಿದೆ. ಈ ಯೋಜನೆಗೆ 200 ಕೋಟಿ ರೂ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ ಎಂದು ತಿಳಿದುಬಂದಿದೆ.
  • ಬಜೆಟ್‌ನಲ್ಲಿ ಸಕ್ಕರೆನಾಡಿಗೆ ಸಿಕ್ಕಿದ್ದೇನು? * ಕೃಷಿ ವಿಶ್ವವಿದ್ಯಾನಿಲಯಕ್ಕೆ ಮೂಲಸೌಕರ್ಯ ಕಲ್ಪಿಸಲು 25 ಕೋಟಿ ರೂ ಅನುದಾನ, ಪ್ರಸಕ್ತ ಸಾಲಿನಲ್ಲಿ ತರಗತಿ ಆರಂಭ * ಜಿಲ್ಲೆಯಲ್ಲಿ ಸಮಗ್ರ ಮಣ್ಣು ಮತ್ತು ನೀರಿನ ನಿರ್ವಹಣೆ, ಸಮರ್ಪಕ ತ್ಯಾಜ್ಯ ನಿರ್ವಹಣೆ, ನೀರಿನ ಬಳಕೆ ಮತ್ತು ಸಮತೋಲನ ಪೋಷಕಾಂಶ ನಿರ್ವಹಣೆಯನ್ನು ಸಕ್ಕರೆ ಕಾರ್ಖಾನೆ ಸಹಯೋಗದೊಂದಿಗೆ ಜಾರಿಗೊಳಿಸುವುದು * ಶ್ರೀರಂಗಪಟ್ಟಣ ಒಳಚರಂಡಿ ಯೋಜನೆಯನ್ನು ಕಲ್ಪಿಸುವ ಗುರಿ * ಕೆಶಿಪ್-4 ಯೋಜನೆಯಡಿ ಮಳವಳ್ಳಿ-ಬವಲಿ(ಕೇರಳ ಗಡಿ) ರಸ್ತೆ ಅಭಿವೃದ್ಧಿ * ಮದ್ದೂರು ನಗರದಲ್ಲಿ ರಸ್ತೆ ಅಗಲೀಕರಣಕ್ಕೆ ವಿಸ್ತೃತ ಯೋಜನಾ ವರದಿ ತಯಾರಿಕೆ * ಶ್ರೀರಂಗಪಟ್ಟಣ(ಪಾಂಡವಪುರ ರೈಲ್ವೆ ನಿಲ್ದಾಣ) ಬಿ.ಎಂ ರಸ್ತೆ ಜಂಕ್ಷನ್ ಚನ್ನರಾಯಪಟ್ಟಣ(ಕೆ.ಆರ್.ಪೇಟೆ ಮಾರ್ಗ) ರಸ್ತೆ ಅಭಿವೃದ್ಧಿ * ಡಿಸಿಸಿ ಮತ್ತು ಪಿಕಾರ್ಡ್ ಬ್ಯಾಂಕ್‌ಗೆ ಸಂಬಂಧಿಸಿದ ಮಧ್ಯಮಾವಧಿ ಮತ್ತು ದೀರ್ಘಾವಧಿ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ * ಹಳ್ಳಿಕಾರ್ ಮತ್ತು ಬಂಡೂರು ಕುರಿ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಅನುದಾನ * ರಾಜ್ಯದ ಪ್ರಮುಖ ಅಣೆಕಟ್ಟು ಗೇಟುಗಳ ಸದೃಢತೆಯನ್ನು ತಾಂತ್ರಿಕ ಪರಿಶೀಲನೆಗೊಳಪಡಿಸಿ, ಅಗತ್ಯವಿದ್ದರೆ ದುರಸ್ತಿ ಹಾಗೂ ಬದಲಿಸಲು ಆದ್ಯತೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net