

ಯಲ್ಲಾಪುರ: ಶ್ರೀಮಾತಾ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿಯು ಕಳೆದ ಆರ್ಥಿಕ ವರ್ಷದಲ್ಲಿ 25.39 ಲಕ್ಷ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಜಿ.ಎನ್. ಹೆಗಡೆ ಹಿರೇಸರ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಳೆ ವರ್ಷ 86 ಕೋಟಿ ರೂ.ಗಿಂತ ಹೆಚ್ಚು ವ್ಯವಹಾರ ನಡೆದಿದ್ದು, 15.38 ಲಕ್ಷ ರೂ ಸಾಲ ನೀಡಲಾಗಿದೆ. ಸಹಕಾರಿಯ ಸದಸ್ಯರಿಗೆ ವಿಮೆ, ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ವಿತರಣೆ, ಕ್ಯಾನ್ಸರ್ ಪೀಡಿತರಿಗೆ ಅನುಕಂಪ ಪರಿಹಾರ ಇತರ ಸೌಲಭ್ಯಗಳನ್ನೂ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪ್ರಸಕ್ತ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆ ಸೆ.16ರಂದು ಬೆಳಗ್ಗೆ 10ಕ್ಕೆ ಉಮ್ಮಚಗಿಯಲ್ಲಿ ನಡೆಯಲಿದೆ. ಸಂಘವು ಪ್ರಸ್ತುತ ದ್ವಿ ದಶಮಾನೋತ್ಸವದ ಸಂಭ್ರಮದಲ್ಲಿದ್ದು, ಈ ಪ್ರಯುಕ್ತ ಸೆ. 16ರಂದು ಮಧ್ಯಾಹ್ನ 2.30 ಕ್ಕೆ ಉಮ್ಮಚಗಿಯ ಪ್ರಧಾನ ಕಚೇರಿ ಆವಾರದಲ್ಲಿ ಸಹಕಾರಿಗೋಷ್ಠಿ ಆಯೋಜಿಸಲಾಗಿದೆ. ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಎಂಡಿ ಶರಣೇಗೌಡ ಪಾಟೀಲ, ಜಿಲ್ಲಾ ಸೌಹಾರ್ದ ಸಹಕಾರಿಯ ಅಧ್ಯಕ್ಷ ಕೆ.ವಿ. ನಾಯ್ಕ ಇತರರು ಗೋಷ್ಠಿಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಶಾಸಕರಾದ ಆರ್.ವಿ. ದೇಶಪಾಂಡೆ, ಶಿವರಾಮ ಹೆಬ್ಬಾರ, ಭೀಮಣ್ಣ ನಾಯ್ಕ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.