

ಚಿತ್ರದುರ್ಗ: ದ್ವಿತೀಯ ಪಿಯುಸಿ ಪರೀಕ್ಷೆ-2ಗೆ ಜಿಲ್ಲೆಯಲ್ಲಿ 19,950 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆಂದು ಎಡಿಸಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಡಿಸಿ ಕಚೇರಿಯಲ್ಲಿ ಪರೀಕ್ಷೆ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿ, ಏ.24 ರಿಂದ ಮೇ 8ರವರೆಗೆ ನಡೆಯುವ ಪರೀಕ್ಷೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ವ್ಯವಸ್ಥಿತವಾಗಿ ಕಾರ‌್ಯನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಪಿಯು ಡಿಡಿ ಆರ್.ಪುಟ್ಟಸ್ವಾಮಿ ಮಾತನಾಡಿ, ಚಿತ್ರದುರ್ಗದ ಬಾಲಕರ ಸರ್ಕಾರಿ ಹಾಗೂ ಬಾಲಕಿಯರ, ಎಸ್‌ಜೆಎಂ, ಚಳ್ಳಕೆರೆಯ ಸರ್ಕಾರಿ, ಬಾಪೂಜಿ, ಹಿರಿಯೂರು, ಹೊಸದುರ್ಗ, ಮೊಳಕಾಲ್ಮೂರು ಸರ್ಕಾರಿ ಹಾಗೂ ಹೊಳಲ್ಕೆರೆ ಕೊಟ್ರನಂಜಪ್ಪ ಪದವಿ ಪೂರ್ವ ಕಾಲೇಜುಗಳ ಸಹಿತ ಜಿಲ್ಲೆಯ 9 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದರು.
ಅನುತ್ತೀರ್ಣ, ಪುನರಾವರ್ತಿತ ಹಾಗೂ ಫಲಿತಾಂಶ ಸುಧಾರಣೆ ಬಯಸಿದವರು ಸೇರಿ 19,950 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.
ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಅವಶ್ಯಕತೆ ಇದೆ. ಜಿಲ್ಲಾ ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳನ್ನು ಕೊಂಡೊಯ್ಯುವ ಮತ್ತು ವಿತರಿಸುವ ಸಮಯಕ್ಕೆ 6 ಮಾರ್ಗಗಳ ತಂಡಕ್ಕೆ ಪೊಲೀಸ್ ರಕ್ಷಣೆ ಬೇಕಿದೆ. ಜಿಲ್ಲಾ ಖಜಾನೆಯಿಂದ ಪ್ರಶ್ನೆ ಪತ್ರಿಕೆ ಕೊಂಡ್ಯೊಯುವ ವಾಹನಗಳಿಗೆ ಜಿಪಿಎಸ್ ಅಳವಡಿಸಬೇಕು ಎಂದು ಹೇಳಿದರು.
ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಬೇಕಿದೆ. ಪರೀಕ್ಷೆಗೆ ಗೈರು ಹಾಜರಾದ ವಿದ್ಯಾರ್ಥಿಗಳ ಮಾಹಿತಿಯನ್ನು ಆನ್‌ಲೈನ್ ಮೂಲಕ ದಾಖಲಿಸಬೇಕು. ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಮೊಬೈಲ್ ಫೋನ್ ತರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದರು.
ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆ ಪತ್ರಿಕೆ ತೆರೆಯುವಾಗ ಹಾಗೂ ಉತ್ತರ ಪತ್ರಿಕೆಗಳ ಬಂಡಲ್ ಮಾಡುವಾಗ ಸಿಸಿ ಕ್ಯಾಮರಾದಡಿ ಕಾರ‌್ಯನಿರ್ವಹಿಸಬೇಕು. ಜಿಪಂದಲ್ಲಿ ಎಲ್ಲ ಪರೀಕ್ಷಾ ಕೇಂದ್ರಗಳ ವೀಕ್ಷಣೆಗೆ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ, ಡಿಡಿಪಿಐ ಎಂ.ಆರ್.ಮಂಜುನಾಥ್ ಇತರರಿದ್ದರು.
----
ಪರೀಕ್ಷಾ ವೇಳಾಪಟ್ಟಿ
ಏ.24 ರಂದು ಕನ್ನಡ, ಅರೇಬಿಕ್, 25ರಂದು ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ, 26ಕ್ಕೆ ಇತಿಹಾಸ, ಭೌತಶಾಸ್ತ್ರ, 28ರಂದು ಭೂ ಗೋಳ ಶಾಸ್ತ್ರ, ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ, 29ಕ್ಕೆ ಇಂಗ್ಲಿಷ್, ಮೇ 2 ರಂದು ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಗಣಿತ, ಶಿಕ್ಷಣ ಶಾಸ್ತ್ರ, 3 ರಂದು ಸಮಾಜಶಾಸ್ತ್ರ, ಭೂಗರ್ಭಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ, 5 ರಂದು ಅರ್ಥಶಾಸ್ತ್ರ, 6ಕ್ಕೆ ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, 7 ರಂದು ಹಿಂದಿ, 8ಕ್ಕೆ ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್.