24ರಂದು ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ

22-3
ಸುದ್ದಿಗೋಷ್ಠಿಯಲ್ಲಿ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿದರು. ಜಿ.ಕೆ.ಗಿರೀಶ ಉಪ್ಪಾರ, ಶಿವಪುತ್ರ ಜಕಬಾಳ, ಅರ್ಜುನ ನಾಯಕವಾಡ ಇತರರಿದ್ದರು.
Published on

ಬೆಳಗಾವಿ: ಗೋಕಾಕ ಹಾಗೂ ಮೂಡಲಗಿ ಉಪ್ಪಾರ ಸಂಘದ ಸಹಯೋಗದಲ್ಲಿ ಸೆ.24ರಂದು ಬೆಳಗ್ಗೆ 10ಕ್ಕೆ ಗೋಕಾಕದ ಮಹಾಲಕ್ಷ್ಮೀ ಭವನದಲ್ಲಿ ಜಿಲ್ಲಾಮಟ್ಟದ ಉಪ್ಪಾರ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ ಎಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಮಧುರೆಯ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.90 ಅಂಕ, ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚಿನ ಅಂಕ ಗಳಿಸಿದ ಉಪ್ಪಾರ ಸಮುದಾಯದ ವಿದ್ಯಾರ್ಥಿಗಳು, ಅಧಿಕಾರಿಗಳು ಹಾಗೂ ಸಾಧಕರನ್ನು ಸತ್ಕರಿಸಿ, ಪ್ರೋತ್ಸಾಹಿಸಲಾಗುವುದು ಎಂದು ಹೇಳಿದರು.

ಪ್ರವರ್ಗ-1ರಲ್ಲಿರುವ ಉಪ್ಪಾರ ಸಮುದಾಯ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದೆ. ಈ ಸಮುದಾಯವನ್ನು ಮುಖ್ಯವಾಹಿನಿಗೆ ತರಲು, ಅಭಿವೃದ್ಧಿಗಾಗಿ ರಾಜ್ಯಾದ್ಯಂತ ಸಂಚರಿಸಿ, ಜಾಗೃತಿ ಮೂಡಿಸುತ್ತಿದ್ದೇವೆ. ನಮ್ಮ ಸಮುದಾಯಕ್ಕೆ ಹೆಚ್ಚಿನ ಮೀಸಲಾತಿ ನೀಡಬೇಕೆಂದು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಹಂಪಿ ವಿಶ್ವವಿದ್ಯಾಲಯ ನಡೆಸುತ್ತಿರುವ ಕುಲಶಾಸ್ತ್ರ ಅಧ್ಯಯನದ ಸಲ್ಲಿಸುವ ವರದಿ ಪಡೆದು, ಉಪ್ಪಾರ ಸಮುದಾಯವನ್ನು ಎಸ್‌ಟಿಗೆ ಸೇರ್ಪಡಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಕೆ.ಗಿರೀಶ ಉಪ್ಪಾರ, ರಾಜ್ಯದ 32 ಹಾಗೂ ಬೆಳಗಾವಿ ಜಿಲ್ಲೆಯ 8 ಕ್ಷೇತ್ರಗಳಲ್ಲಿ ಉಪ್ಪಾರ ಸಮುದಾಯದವರೇ ನಿರ್ಣಾಯಕರಿದ್ದೇವೆ. ನಮ್ಮನ್ನು ಕಡೆಗಣಿಸಿದರೆ ಯಾವುದೇ ಪಕ್ಷ ಸೋಲಿಸಬಹುದು ಅಥವಾ ಗೆಲ್ಲಿಸಬಹುದು. ಎಲ್ಲ ಪಕ್ಷಗಳು ನಮಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದರು.
ಡಿಸೆಂಬರ್‌ನಲ್ಲಿ ಪಕ್ಷಾತೀತವಾಗಿ ಒಂದು ಸಭೆ ನಡೆಸಿ, ಬೀದರ್‌ನಿಂದ ಚಾಮರಾಜನಗರದವರೆಗೆ ಭಗೀರಥ ಜ್ಯೋತಿ ಯಾತ್ರೆ ನಡೆಸಲಾಗುವುದು. ರಾಜ್ಯದ ಎಲ್ಲ ತಾಲೂಕುಗಳಿಗೂ ಯಾತ್ರೆ ಸಂಚರಿಸಲಿದ್ದು, ಡಿಸೆಂಬರ್ ಅಂತ್ಯಕ್ಕೆ ಅಥವಾ 2023ರ ಜನವರಿಯಲ್ಲಿ ಬೆಂಗಳೂರಿನಲ್ಲಿ ಅರಮನೆ ಮೈದಾನದಲ್ಲಿ ಸಮಾವೇಶ ನಡೆಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಶಿವಪುತ್ರ ಜಕಬಾಳ, ಅರ್ಜುನ ನಾಯಕವಾಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net