24ರಂದು ಕೆಎಎಸ್ ಪೂರ್ವಭಾವಿ ಪರೀಕ್ಷೆ

Meet
Published on

ಕಲಬುರಗಿ: ನಗರದ 35 ಪರೀಕ್ಷಾ ಕೇಂದ್ರಗಳಲ್ಲಿ 24 ರಂದು 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ (ಕೆ.ಎ.ಎಸ್) ಗ್ರೂಪ್ ಎ ಮತ್ತು ಬಿ ಹುದ್ದೆಗಳ ನೇಮಕಾತಿಗೆ ಪೂರ್ವಭಾವಿ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ಪಾರದರ್ಶಕವಾಗಿ ನಡೆಸಬೇಕು. ಯಾವುದೇ ದೂರಿಗೆ ಅವಕಾಶ ನೀಡಬಾರದು ಎಂದು ಪರೀಕ್ಷಾ ಕೇಂದ್ರ ಮುಖ್ಯಸ್ಥರಿಗೆ ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈ ಕುರಿತು ಶುಕ್ರವಾರ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಬುರಗಿ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ಒಟ್ಟಾರೆ 14340 ವಿದ್ಯಾರ್ಥಿಗಳು ನಾನಾ ಪರೀಕ್ಷಾ ಕೇದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಇದಕ್ಕಾಗಿ ನಗರದಲ್ಲಿ 34 ಸಾಮಾನ್ಯ ಪರೀಕ್ಷಾ ಕೇಂದ್ರಗಳು ಮತ್ತು ಕೋವಿಡ್-19 ಪಾಸಿಟಿವ್ ಹೊಂದಿರುವ ವಿದ್ಯಾರ್ಥಿಗಳಿಗೆ ಏಶನ್ ಮಾಲ್ ಹಿಂಬದಿ ಇರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಕೋವಿಡ್ ಕೇರ್ ಪರೀಕ್ಷಾ ಕೇಂದ್ರದಲ್ಲಿ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಎರಡು ಕೋಣೆಗಳನ್ನು ಕಂಟೇನ್ಮೆಂಟ್ ವಲಯದಿಂದ ಬಂದಿರುವ, ಕೊರೋನಾ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿ ಬಂದ ಅಥವಾ ಕೊರೋನಾ ಲಕ್ಷಣವಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಮೀಸಲಿರಿಸಬೇಕು ಎಂದರು.
ಪರೀಕ್ಷೆ ಸುಸೂತ್ರವಾಗಿ ನಡೆಯಲು 14 ಮಾರ್ಗ ಅಧಿಕಾರಿಗಳು, 35 ಕೇಂದ್ರಗಳಿಗೂ ಸ್ಥಳೀಯ ಪರಿವೀಕ್ಷಣಾಧಿಕಾರಿ ಹಾಗೂ 2-3 ಕೇಂದ್ರಗಳಿಗೆ ತಲಾ ಓರ್ವ ಅಧಿಕಾರಿಯನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ. ಎಲ್ಲಿಯಾದರು ನಕಲು ಕಂಡುಬಂದಲ್ಲಿ ಪರೀಕ್ಷಾ ಕೇಂದ್ರದ ಮುಖ್ಯಸ್ಥರೆ ಜವಾಬ್ದಾರರಾಗುತ್ತಾರೆ. ಡಿಡಿಪಿಐ ಅವರು ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಡಾ.ಶಂಕರ ವಣಿಕ್ಯಾಳ ತಿಳಿಸಿದರು.
ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಪರೀಕ್ಷೆ ಮುನ್ನವೆ ಕೇಂದ್ರದಲ್ಲಿ ಆಸನ, ಕುಡಿಯುವ ನೀರು, ಸಾಕಷ್ಟು ಬೆಳಕು, ಶೌಚಾಲಯ ವ್ಯವಸ್ಥೆ ಹಾಗೂ ಸುಗಮ ಪರೀಕ್ಷಾ ಸಿದ್ಧತೆಯ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಪ್ರತ್ಯೇಕ ಮಹಿಳಾ ಮತ್ತು ಪುರುಷ ಪೊಲೀಸರನ್ನು ಫ್ರೀ ಸ್ಕ್ರೀನಿಂಗ್ಗಾಗಿ ನೇಮಿಸಲಾಗುವುದು ಎಂದರು.
ಕರೊನಾ ಮುಂಜಾಗ್ರತೆ
ಕರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಪರೀಕ್ಷೆ ನಡೆಯುವ ಮುನ್ನ ಪರೀಕ್ಷಾ ಕೋಣೆ ಸ್ಯಾನಿಟೈಸ್ ಮಾಡಿಸಬೇಕು. ವಿದ್ಯಾರ್ಥಿಗಳನ್ನು ಡಿಜಿಟಲ್ ಥರ್ಮೋ ಮೀಟರ್ನಿಂದ ಪರೀಕ್ಷಿಸಬೇಕು. ಹ್ಯಾಂಡ್ ಸ್ಯಾನಿಟೈಸರ್ ಬಳಕೆ ಮತ್ತು ಮಾಸ್ಕ್ ಧರಿಸುವುದು ಕಡ್ಡಾಯ. ದೈಹಿಕ ಅಂತರದೊಂದಿಗೆ ಪರೀಕ್ಷೆ ಬರೆಯಲು ಆಸನ ನಿಗದಿಪಡಿಸಬೇಕು. ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಕಾರಣಕ್ಕೂ ಜನಸಂದಣಿಯಾಗದಂತೆ ಎಚ್ಚರವಹಿಸಬೇಕು. ಕೇಂದ್ರದಲ್ಲಿ 300 ವಿದ್ಯಾರ್ಥಿಗಳಿದ್ದಲ್ಲಿ ಒಂದು ಮತ್ತು ಅದಕ್ಕು ಹೆಚ್ಚಿದಲ್ಲಿ ಎರಡು ಆರೋಗ್ಯ ತಂಡಗಳು ಕಾರ್ಯನಿರ್ವಹಿಸಬೇಕು.
ಸಿ.ಸಿ.ಟಿ.ವಿ. ಕಣ್ಗಾವಲು : ಪರೀಕ್ಷೆ ಸಂಪೂರ್ಣವಾಗಿ ಸಿಸಿ.ಟಿ.ವಿ. ಕಣ್ಗಾವಲಿನಲ್ಲಿ ನಡೆಯಲಿದೆ. ಪರೀಕ್ಷೆ ಆರಂಭದಿಂದ ಹಿಡಿದು ಮುಕ್ತಾಯದವರೆಗೆ ಪ್ರತಿ ಚಟುವಟಿಕೆಯ ವಿಡಿಯೋಗ್ರಾಫಿ ಮಾಡಬೇಕು. ಯಾವುದೇ ಅಕ್ರಮಕ್ಕೆ ಇಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಮೋಬೈಲ್ ನಿಷೇಧ
ವಿದ್ಯಾರ್ಥಿಗಳು ಪರೀಕ್ಷೆಗೆ ಬರುವಾಗ ಮೊಬೈಲ್, ಸ್ಮಾರ್ಟ್​ ಫೋನ್, ಸ್ಮಾರ್ಟ್​ ವಾಚ್, ಬ್ಲ್ಯೂಟೂತ್ ಡಿವೈಸ್, ಪೇಜರ್, ವೈರಲೆಸ್, ಕ್ಯಾಲ್ಕುಲೇಟರ್ ಇತರೆ ಉಪಕರಣಗಳು, ಸ್ಲೈಡರೂಲ್, ಮಾರ್ಕರ್, ಲಾಗ್ ಟೇಬಲ್, ವೈಟ್ ಫ್ಲೂಯಿಡ್, ಬ್ಲೇಡ್, ಎರೆಸರ್, ವಾಚ್ ಕ್ಯಾಲ್ಕುಲೇಟರ್, ಪಠ್ಯ ಪುಸ್ತಕ, ನಕಲು ಚೀಟಿ ತರುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಡಿಡಿಪಿಐ ಎಸ್.ಪಿ.ಬಾಡಗಂಡಿ ಅವರು ಪರೀಕ್ಷೆಗೆ ಕೈಗೊಂಡಿರುವ ಸಿದ್ಧತೆಗಳನ್ನು ವಿವರಿಸಿದರು. ಕೆ.ಪಿ.ಎಸ್.ಸಿ. ಕಲಬುರಗಿ ಕಚೇರಿಯ ಹಿರಿಯ ಸಹಾಯಕಿ ಅನ್ನಪೂರ್ಣ, ಸಹಾಯಕ ನಟರಾಜ್ ಸೇರಿದಂತೆ ತಹಸೀಲ್ದಾರ, ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ವೀಕ್ಷಕರು ಮತ್ತು ಮಾರ್ಗಾಧಿಕಾರಿಗಳು ಇದ್ದರು.

ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೆಟ್ ಜತೆಗೆ ಚುನಾವಣಾ ಐಡಿ, ಆಧಾರ್ ಕಾರ್ಡ , ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ , ಪಾಸ್ಪೋರ್ಟ್​ , ಸರ್ಕಾರಿ ನೌಕರರ ಐಡಿ ಇವುಗಳಲ್ಲಿ ಯಾವುದಾದರೊಂದು ಗುರುತಿನ ಚೀಟಿ ತರುವುದು ಕಡ್ಡಾಯ.
ಡಾ.ಶಂಕರ ವಣಿಕ್ಯಾಳ,
ಅಪರ ಡಿಸಿ ಡ.ಶಂಕರ ವಣಿಕ್ಯಾಳ, ಕಲಬುರಗಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net