

ತುಮಕೂರು: ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲು 108 ಆಂಬುಲೆನ್ಸ್ ಸೇವೆ ದಿನದ 24ಗಂಟೆಯೂ ಸಾರ್ವಜನಿಕರಿಗೆ ಲಭ್ಯವಿರುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ತಾಯಿ ಮತ್ತು ಶಿಶು ಮರಣ, ತಂಬಾಕು ನಿಯಂತ್ರಣ ಕೋಶದ ಕಾರ್ಯಕ್ರಮಗಳ ನಾಲ್ಕನೇ ತ್ರೈಮಾಸಿಕ, ಜಿಲ್ಲಾ ಸಮಗ್ರ ರೋಗಗಳ ಕಣ್ಗಾವಲು ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. 108 ಆಂಬುಲೆನ್ಸ್ ಸೇವೆ ಸಾರ್ವಜನಿಕರಿಗೆ ಸಕಾಲದಲ್ಲಿ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ದಿನದ 24 ಗಂಟೆಗಳ ಕಾಲ ಸೇವೆ ಒದಗಿಸದೆ ಕರ್ತವ್ಯ ಲೋಪ ಎಸಗಿದರೆ 108 ವಾಹನ ನಿರ್ವಹಣಾ ಸಂಸ್ಥೆಯ ವಿರುದ್ಧ ಕ್ರಮಕೈಗೊಳ್ಳಬೇಕು ಎಂದರು.
ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸುವುದರಿಂದ ರಾಷ್ಟ್ರೀಯ ಹೆದ್ದಾರಿಗಳು, ಮಾಯಸಂದ್ರದ ರಸ್ತೆ ಸೇರಿ ಮತ್ತಿತರ ರಸ್ತೆಗಳಲ್ಲಿ 108 ವಾಹನ ಚಾಲಕರು ಸೇವೆ ಒದಗಿಸಲು ಸದಾ ಸಿದ್ಧರಿರುವಂತೆ ಹಾಗೂ ವಾಹನ ದುರಸ್ತಿಗೆ ಬಂದಾಗ ಸ್ಥಳೀಯ ತಾಲೂಕು ಆರೋಗ್ಯಾಧಿಕಾರಿಗಳ ಗಮನಕ್ಕೆ ತರುವಂತೆ ಆಂಬುಲೆನ್ಸ್ ನಿರ್ವಹಣಾ ಸಂಸ್ಥೆಯ ಪ್ರತಿನಿಧಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ತಾಯಿ ಮತ್ತು ಶಿಶು ಮರಣ ಪ್ರಮಾಣ ಕುರಿತು ಸಭೆಗೆ ಮಾಹಿತಿ ನೀಡಿದ ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಕೇಶವರಾಜು 2021ರ ನವೆಂಬರ್‌ನಿಂದ 2022ರ ಫೆಬ್ರವರಿವರೆಗೆ 10855 ಹೆರಿಗೆಗಳಾಗಿದ್ದು, ಈ ಪೈಕಿ ವಿವಿಧ ಕಾರಣಗಳಿಂದ 10 ತಾಯಿ ಮರಣ ಹಾಗೂ 102 ಶಿಶು ಮರಣ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ತಾಯಿ ಮತ್ತು ಶಿಶು ಮರಣ ಪ್ರಕರಣಗಳು ವರದಿಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದ ಅವರು, ತಾಯಿ-ಶಿಶು ಮರಣ ಹೊಂದಿರುವ ತಾಲೂಕು ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು.
ಜಿಲ್ಲಾದ್ಯಂತ ಶಾಲಾ- ಕಾಲೇಜು ಸುತ್ತ ಮುತ್ತ 92 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಸಂಪೂರ್ಣವಾಗಿ ನಿಷೇಧಿಸಲಾಗಿದ್ದರೂ, ಇದಕ್ಕೆ ವ್ಯತಿರಿಕ್ತವಾಗಿ ಮಾರಾಟ ಮಾಡುವುದು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಡಿಡಿಪಿಐ ಸಿ.ನಂಜಯ್ಯಗೆ ಡಿಸಿ ಸೂಚಿಸಿದರು. ಜಿಲ್ಲಾ ತಂಬಾಕು ಕೋಶದ ಸಲಹೆಗಾರ ರವಿಪ್ರಕಾಶ್ ಮಾತನಾಡಿ, ಜಿಲ್ಲಾದ್ಯಂತ 62 ದಾಳಿ ನಡೆಸಿ 2212 ಪ್ರಕರಣ ದಾಖಲಿಸಲಾಗಿದ್ದು, 192660 ರೂ. ದಂಡ ವಸೂಲಿ ಮಾಡಲಾಗಿದೆ ಎಂದರು. ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀಧರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ, ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹಿಮಾ ಮತ್ತಿತರರು ಇದ್ದರು.
ಅಜ್ಜಗೊಂಡನಹಳ್ಳಿ ಕಸ ವಿಲೇವಾರಿ ಘಟಕ ಪ್ರದೇಶದಲ್ಲಿ ಜೈವಿಕ ತ್ಯಾಜ್ಯ ನಿರ್ವಹಣೆಗಾಗಿ 2 ಎಕರೆ ಪ್ರದೇಶ ಪಾಲಿಕೆ ನೀಡಬೇಕು. ಜೈವಿಕ ತ್ಯಾಜ್ಯ ನಿರ್ವಹಣೆ ಜವಾಬ್ದಾರಿಯನ್ನು ಭಾರತೀಯ ವೈದ್ಯಕೀಯ ಸಂಘದ ತುಮಕೂರು ಶಾಖೆ ನಿರ್ವಹಿಸಬೇಕು. ವೈ.ಎಸ್.ಪಾಟೀಲ ಜಿಲ್ಲಾಧಿಕಾರಿ