24ಕ್ಕೆ ಸಚಿವ ಸಂಪುಟ ಸಭೆ

Published on

ಚಾಮರಾಜನಗರ: ಪದೇ ಪದೆ ದಿನಾಂಕ ಮುಂದೂಡಿಕೆಯಾಗಿ ಜಿಲ್ಲೆಯಲ್ಲಿ ನಡೆಯುತ್ತದೆಯೋ ಅಥವಾ ಇಲ್ಲವೋ ಎಂಬ ಅನುಮಾನ ಹುಟ್ಟುಹಾಕಿದ್ದ ಸಚಿವ ಸಂಪುಟ ಸಭೆ ಇದೀಗ ಏ.24ಕ್ಕೆ ನಿಗದಿಯಾಗಿದೆ.

ಚಾಮರಾಜನಗರವೂ ಸೇರಿದಂತೆ ಹಳೇ ಮೈಸೂರು ಭಾಗದ ಸುತ್ತಮುತ್ತಲಿನ ಜಿಲ್ಲೆಗಳ ಅಭಿವೃದ್ಧಿಗೆ ಮುನ್ನುಡಿ ಬರೆಯಲು ರಾಜ್ಯ ಸರ್ಕಾರ ಮಹದೇಶ್ವರ ಬೆಟ್ಟದಲ್ಲಿ ನಡೆಯಲು ಉದ್ದೇಶಿಸಿರುವ ಸಚಿವ ಸಂಪುಟ ಸಭೆಯ ತೀರ್ಮಾನ ಪದೇ ಪದೆ ಮುಂದೂಡಿಕೆಯಾಗುತ್ತಲೇ ಇತ್ತು. ಇದೀಗ ಕ್ಯಾಬಿನೆಟ್ ಸಭೆಯನ್ನು ಏ.24ಕ್ಕೆ ಫಿಕ್ಸ್ ಮಾಡಲಾಗಿದೆ.

ಈ ಹಿಂದೆ ೆ.15ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ರಾಜ್ಯ ಸಚಿವ ಸಂಪುಟ ಸಭೆಯನ್ನು ನಿಗದಿ ಮಾಡಲಾಗಿತ್ತು. ಬಳಿಕ ಇದನ್ನು ೆ.17ಕ್ಕೆ ಮುಂದೂಡಲಾಯಿತು. ಮಹದೇಶ್ವರ ಬೆಟ್ಟದ 108 ಅಡಿ ಎತ್ತರದ ಮಾದಪ್ಪನ ವಿಗ್ರಹವಿರುವ ಸ್ಥಳದಲ್ಲಿ ಟೆಂಟ್ ಹಾಕಿ ಸಿದ್ಧತೆಯನ್ನೂ ಕೈಗೊಳ್ಳಲಾಗುತ್ತಿತ್ತು. ಇತ್ತ ಚಾಮರಾಜನಗರದಲ್ಲಿ ೆ.16ರಂದು ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಲಾನುಭವಿಗಳ ಸಮಾವೇಶ ಹಮ್ಮಿಕೊಳ್ಳಲೂ ಸಹ ತಯಾರಿ ಮಾಡಿಕೊಳ್ಳಲಾಗಿತ್ತು. ಬಳಿಕ ಎರಡನ್ನೂ ಮುಂದೂಡಿಕೆ ಮಾಡಲಾಯಿತು.

ಇತ್ತೀಚೆಗೆ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ರೇಷ್ಮೆ, ಪಶು ಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮಾತನಾಡಿ, ಏ.24ಕ್ಕೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ ಎಂದು ತಿಳಿಸಿದ್ದರು. ಈಗಾಗಲೇ ಇದೇ ರೀತಿ ದಿನಾಂಕಗಳನ್ನು ನಿಗದಿ ಮಾಡಿ ಮುಂದೂಡಿಕೆ ಮಾಡಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ಏ.24ರಂದು ಕ್ಯಾಬಿನೆಟ್ ಸಭೆ ಖಚಿತವಾಗಿ ನಡೆಯುತ್ತದೆ ಎಂದು ನಂಬಲು ಸಾಧ್ಯವಾಗದ ಸ್ಥಿತಿ ಬಂದುಬಿಟ್ಟಿದೆ.

ನಿರೀಕ್ಷೆಗಳು ಹಲವು

ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ವಿಚಾರದಲ್ಲಿ ಮಹತ್ವ ಪಡೆದುಕೊಂಡಿದೆ. ಈ ಬಾರಿಯ ರಾಜ್ಯ ಬಜೆಟ್‌ನಲ್ಲೂ ಸಹ ನಿರೀಕ್ಷೆ ಮಟ್ಟದಲ್ಲಿ ಕೊಡುಗೆಗಳು ದೊರಕಲಿಲ್ಲ. ದೊಡ್ಡ ಹಳ್ಳಿಯಂತಿರುವ ಜಿಲ್ಲೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಕಾಡುತ್ತಿದೆ. ನೀರಾವರಿ ಸೌಲಭ್ಯಗಳು ಬೇಕಾಗಿದೆ. ಆರೋಗ್ಯ ವ್ಯವಸ್ಥೆ ಶರವೇಗದಲ್ಲಿ ಸುಧಾರಣೆ ಕಾಣಬೇಕಾಗಿದೆ.

ಕೇರಳ ಮತ್ತು ತಮಿಳುನಾಡು ಮಾರುಕಟ್ಟೆಯನ್ನೇ ಅವಲಂಬಿಸಿರುವ ರೈತರಿಗೆ ಜಿಲ್ಲೆಯಲ್ಲಿ ಸುಸಜ್ಜಿತ ಮಾರುಕಟ್ಟೆ ಬೇಕಾಗಿದೆ. ಹೀಗೆ ಕೊರತೆಗಳ ಪಟ್ಟಿಯನ್ನು ಮಾಡುತ್ತ ಹೋದರೆ ಮಾರುದ್ದ ಬೆಳೆಯುತ್ತದೆ. ಕ್ಯಾಬಿನೆಟ್ ಸಭೆಯಲ್ಲಿ ಮೈಸೂರು ಭಾಗದ ಎಲ್ಲ ಜಿಲ್ಲೆಗಳಿಗೂ ಆದ್ಯತೆ ನೀಡುವುದರೊಂದಿಗೆ ಚಾಮರಾಜನಗರಕ್ಕೆ ವಿಶೇಷ ಆದ್ಯತೆ ನೀಡಿದರೆ ಜಿಲ್ಲೆಯ ಚಿತ್ರಣ ಬದಲಾಗುವ ಸಾಧ್ಯತೆಯಿದೆ. ಜಿಲ್ಲೆಗೆ ಅಗತ್ಯವಿರುವ ಅಂಶಗಳನ್ನು ಈಗಾಗಲೇ ಜಿಲ್ಲಾಡಳಿತ ಪಟ್ಟಿ ಮಾಡಿಕೊಂಡಿದೆ. ಇದಕ್ಕೆ ಬೇಕಾದ ಅನುದಾನದ ಲೆಕ್ಕಾಚಾರವನ್ನೂ ಹಾಕಿಕೊಂಡಿದೆ. ಇದಕ್ಕೆಲ್ಲ ಒಪ್ಪಿಗೆ ಸಿಗಲು ಕ್ಯಾಬಿನೆಟ್ ಸಭೆ ನಿಗದಿತ ದಿನಾಂಕದಂದು ನಡೆಯಬೇಕಾಗಿದೆ ಅಷ್ಟೆ.

ಬಿಳಿಗಿರಿರಂಗನಬೆಟ್ಟಕ್ಕೂ ಕೋರಿಕೆ ಈ ಹಿಂದೆ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಬಿಳಿಗಿರಿರಂಗನಬೆಟ್ಟದಲ್ಲಿ ಮಿನಿ ಸಚಿವ ಸಂಪುಟ ಸಭೆ ನಡೆದಿತ್ತು. ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಲು ಉದ್ದೇಶಿಸಿದಾಗಿನಿಂದ ಬಿಳಿಗಿರಿರಂಗನಬೆಟ್ಟದಲ್ಲೂ ಕ್ಯಾಬಿನೆಟ್ ಮೀಟಿಂಗ್ ನಡೆಸಬೇಕೆಂದು ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಒತ್ತಾಯ ಮಾಡುತ್ತಲೇ ಇದ್ದಾರೆ. ಬುಡಕಟ್ಟು ಜನರು ವಾಸವಿರುವ ವಿಶಿಷ್ಟ ಸಂಸ್ಕೃತಿ ಆಚರಣೆಯಲ್ಲಿರುವ ಬಿಳಿಗಿರಿರಂಗನಬೆಟ್ಟದಲ್ಲೂ ಸಚಿವ ಸಂಪುಟ ಸಭೆ ಮಾಡಿದರೆ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎನ್ನುವ ಉದ್ದೇಶದಿಂದ ಶಾಸಕ ಎಆರ್‌ಕೆ ಸಚಿವರಲ್ಲಿ ಕೇಳಿಕೊಳ್ಳುತ್ತಲೇ ಇದ್ದಾರೆ.

ಏ.24ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ. ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಶಿಲ್ಪಾನಾಗ್ ಜಿಲ್ಲಾಧಿಕಾರಿ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net