

ಬಂಗಾರಪೇಟೆ: ತಾಲೂಕು ಐನೋರ ಹೊಸಹಳ್ಳಿ ಗ್ರಾಮ ಪಂಚಾಯಿತಿ ಕಟ್ಟಡ ಶಿಥಿಲಗೊಂಡಿದ್ದು, ಮಳೆ ಬಂದರೆ ಸೋರುತ್ತಿದೆ. ಜತೆಗೆ ಕಟ್ಟಡದ ಮೇಲ್ಛಾವಣಿ ಉದುರುತ್ತಿರುವ ಕಾರಣ ಸಿಬ್ಬಂದಿ ಪ್ರಾಣ ಭಯದಲ್ಲೇ ಕಾರ್ಯ ನಿರ್ವಹಿಸುವಂತಾಗಿದೆ.
ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಪ್ರಜಾಸತ್ತಾತ್ಮಕ ಸಂಸ್ಥೆಯಾಗಿರುವ ಐನೋರಹೊಸಹಳ್ಳಿ ಗ್ರಾಮ ಪಂಚಾಯಿತಿಯಲ್ಲೇ ಸಮಸ್ಯೆಗಳ ಆಗರ ಎದ್ದು ಕಾಣುತ್ತಿದೆ. ತಾಲೂಕು ಕೇಂದ್ರಕ್ಕೆ 2 ಕಿ.ಮೀ ದೂರದಲ್ಲಿರುವ ಪಂಚಾಯಿತಿ ಕೇಂದ್ರ ಇದಾಗಿದ್ದು, ಪಂಚಾಯಿತಿ ಕಟ್ಟಡವನ್ನು ನಿರ್ಮಿಸಿ ಹಲವು ದಶಕಗಳೇ ಕಳೆದಿವೆ. ಈ ಹಿಂದೆ ಇದ್ದಂತಹ ಮಂಡಲ ಪಂಚಾಯಿತಿಯು ಇದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಈಗ ಸಂಪೂರ್ಣ ಶಿಥಿಲಗೊಂಡಿದ್ದು, ಸ್ಥಳಿಯ ಆಡಳಿತ ನಡೆಸಲು ಸಮಸ್ಯೆ ಎದುರಾಗಿದೆ. ಕಟ್ಟಡವಂತು ಸಂಪೂರ್ಣ ಶಿಥಿಲಗೊಂಡಿದ್ದು, ಛಾವಣಿಯಿಂದ ಮಳೆ ನೀರು ಸೋರುತಿದ್ದು, ಕಟ್ಟಡದ ತುಂಬಾ ನೀರು ತುಂಬಿಕೊಳ್ಳುತ್ತಿದೆ. ಇದರಿಂದ ಮಳೆ ನೀರಿನಿಂದ ಕಡತಗಳನ್ನು ರಕ್ಷಣೆ ಮಾಡುವುದು ಅಧಿಕಾರಿ ಮತ್ತು ಸಿಬ್ಬಂದಿಗೆ ಸವಾಲಿನ ಕೆಲಸವಾಗಿದೆ.
ಐನೋರ ಹೊಸಹಳ್ಳಿ ಪಟ್ಟಣಕ್ಕೆ ಸಮೀಪವಿರುವ ಕಾರಣ ಪುರಸಭೆ ವ್ಯಾಪ್ತಿಗೆ ಸೇರಿಸಬೇಕು ಎಂಬ ಪ್ರಸ್ತಾವನೆ ಸಹ ಈ ಹಿಂದೆ ಮಾಡಲಾಗಿತ್ತು. ಆದರೆ ಅದು ಇನ್ನೂ ಸಹ ಪ್ರಸ್ತಾವನೆ ಹಂತದಲ್ಲೇ ಇರುವುದರಿಂದ ಅಭಿವೃದ್ಧಿ ಮರೀಚಿಕೆಯಾಗಿದೆ.
ತಾಲೂಕಿನ ಕಾರಹಳ್ಳಿ ಗ್ರಾಪಂಗೆ ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಉಳಿದಂತೆ ಬಹುತೇಕ ಗ್ರಾಪಂ ಕೇಂದ್ರಗಳಿಗೆ ಸ್ವಂತ ಸುಸಜ್ಜಿತ ಕಟ್ಟಡವಿದ್ದು, ಅದರಂತೆ ಐನೋರ ಹೊಸಹಳ್ಳಿ ಪಂಚಾಯಿತಿಗೆ ಇರುವ ಕಟ್ಟಡವನ್ನು ಅಭಿವೃದ್ಧಿಪಡಿಸಲು ಈ ಹಿಂದೆ ಕ್ರಿಯಾ ಯೋಜನೆ ತಯಾರಿಸಲಾಗಿತ್ತು. ಅದರಂತೆ ನರೇಗಾದಲ್ಲಿ 36 ಲಕ್ಷ ರೂ.ಅನುದಾನ ಮೀಸಲಿಡಲಾಗಿತ್ತು. ಕಳೆದ ಆಡಳಿತ ಮಂಡಳಿಯಲ್ಲಿ ಉಂಟಾದ ಆಂತರಿಕ ಸಮಸ್ಯೆಯಿಂದ ನೂತನ ಕಟ್ಟಡವನ್ನು ನಿರ್ಮಿಸಲು ಸಾಧ್ಯವಾಗದೇ ಅನುದಾನ ಸರ್ಕಾರಕ್ಕೆ ವಾಪಸ್ಸು ಹೋಗಿದೆ ಎನ್ನಲಾಗುತ್ತಿದೆ.
ಸರ್ಕಾರದಿಂದ ಅನುದಾನ ಪಡೆದು ಶಿಥಿಲಗೊಂಡ ಕಟ್ಟಡ ಕೆಡವಿ ಆ ಸ್ಥಳದಲ್ಲಿ ನೂತನ ಕಟ್ಟಡ ನಿರ್ಮಿಸಬೇಕು. ಅಥವಾ ಬೇರೆ ಸ್ಥಳದಲ್ಲಿ ಆಧುನಿಕತೆಗೆ ತಕ್ಕಂತೆ ಪಂಚಾಯಿತಿ ಕಟ್ಟಡ ನಿರ್ಮಿಸಿ ಸಾರ್ವಜನಿಕರಿಗೆ ಸೌಲಭ್ಯ ಕಲ್ಪಿಸಲು ಮುಂದಾಗಬೇಕು. ಇದಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಮೊಬೈಲ್ ಮೂಲಕ ಇಂಟರ್ನೆಟ್ ಸಂಪರ್ಕ
ಆಧುನಿಕತೆ ಬೆಳೆದಂತೆ ಗ್ರಾಮ ಪಂಚಾಯಿತಿಗಳಿಗೆ ವಿನೂತನ ಸ್ಪರ್ಶ ನೀಡಲು ಸರ್ಕಾರ ಅನುದಾನ ವಿತರಣೆ ಮಾಡಲಾಗುತ್ತಿದೆ. ಬಹುತೇಕ ಪಂಚಾಯಿತಿಗಳಲ್ಲಿ ಹೈಸ್ಪೀಡ್ ಬ್ಯ್ಯಾಂಡ್ ಇಂಟರ್ನೆಟ್ ವ್ಯವಸ್ಥೆ ಮಾಡಲಾಗಿದ್ದು, ಇಲ್ಲಿ ಮಾತ್ರ ಆಗಾಗ ಮೊಬೈಲ್ ಮೂಲಕ ಇಂಟರ್ನೆಟ್ ಸಂಪರ್ಕ ಕಲ್ಪಿಸಿ ಕಾರ್ಯ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ತಂತ್ರಜ್ಞಾನ ಮತ್ತು ಆಧುನಿಕತೆಗೆ ತಕ್ಕಂತೆ ಪಂಚಾಯಿತಿ ಕಟ್ಟಡವನ್ನು ಉನ್ನತಿಕರಿಸದಿದ್ದರೆ ಸಾರ್ವಜನಿಕರಿಗೆ ಸೇವೆ ನೀಡಲು ಹೇಗೆ ಸಾಧ್ಯ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಶೌಚಗೃಹಕ್ಕೆ ಪರದಾಟ
ಪಂಚಾಯಿತಿ ವ್ಯಾಪ್ತಿಗೆ 13 ಗ್ರಾಮಗಳು ಒಳಪಡಲಿದ್ದು, ಸುಮಾರು 5 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇದ್ದಾರೆ. ಪಂಚಾಯಿತಿಗೆ 20 ಗ್ರಾಪಂ ಸದಸ್ಯರು ಆಯ್ಕೆಯಾಗಿದ್ದು, ಗ್ರಾಮಗಳ ಸಮಸ್ಯೆ ಸರಿಪಡಿಸುವುದರ ಜತೆಗೆ ಪಂಚಾಯಿತಿ ಕೇಂದ್ರದಲ್ಲಿನ ಸಮಸ್ಯೆಗಳನ್ನು ಬಗೆಹರಿಸುವುದು ದೊಡ್ಡ ಸಮಸ್ಯೆಯಾಗಿದೆ. ಪಂಚಾಯಿತಿಯಲ್ಲಿ ಸರಿಯಾದ ಶೌಚಗೃಹವಿಲ್ಲದ ಕಾರಣ ಸಿಬ್ಬಂದಿ ಹಾಗೂ ಸಾರ್ವಜನಿಕರು ಶೌಚಗೃಹಕ್ಕೆ ಪರದಾಡುವುದು ಸಾಮಾನ್ಯವಾಗಿದೆ.
ಪಂಚಾಯಿತಿ ಕಟ್ಟಡ ಶಿಥಿಲಗೊಂಡಿರುವ ಕಾರಣ ಪಕ್ಕದ ಹಳೇ ಕೆನರಾ ಬ್ಯಾಂಕಿನ ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತದೆ. ತಾಪಂ ಇಒ ಅವರ ಸಮ್ಮತಿ ಪಡೆದು ಹಳೇ ಪಂಚಾಯಿತಿ ಕಟ್ಟಡವನ್ನು ಕೆಡವಿ ಆ ಜಾಗದಲ್ಲಿ ನೂತನ ಕಟ್ಟಡ ನಿರ್ಮಿಸಲಾಗುತ್ತದೆ. - ಟಿ.ಯಶ್ವಂತ್, ಪಿಡಿಒ ಪಂಚಾಯಿತಿ ಕಟ್ಟಡವನ್ನು ನರೇಗಾ ಮೂಲಕ ನಿರ್ಮಿಸಲು ಅನುದಾನವನ್ನು ಈ ಹಿಂದೆ ಮೀಸಲಿಡಲಾಗಿತ್ತು. ಆದರೆ, ಕಟ್ಟಡವನ್ನು ನಿರ್ಮಿಸಲು ಆಸಕ್ತಿ ತೋರದ ಕಾರಣ ಅನುದಾನ ವಾಪಸ್ಸು ಹೋಗಿದೆ. ಈಗ 20 ಲಕ್ಷ ರೂ. ಅನುದಾನವನ್ನು ಮೀಸಲಿಟ್ಟು ಕ್ರಿಯಾ ಯೋಜನೆ ತಯಾರಿಸಿದ್ದು, ನರೇಗಾ ಯೋಜನೆಯ ಮೂಲಕ ನೂತನ ಕಟ್ಟಡ ನಿರ್ಮಿಸಲಾಗುತ್ತದೆ. - ಕೆ.ಜಿ ಮಂಜುನಾಥ, ಅಧ್ಯಕ್ಷ, ಗ್ರಾಪಂ