ಕೊಳ್ಳೇಗಾಲ: ಕರ್ನಾಟಕಕ್ಕೆ ಆಗಮಿಸುವ ಅನ್ಯಭಾಷಿಗರಿಗೆ ಕನ್ನಡವನ್ನು ಕಲಿಸಿ, ನಾವು ಬಳಕೆ ಮಾಡುವ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ವಿಸ್ತರಿಸಬೇಕು ಎಂದು ಸಾಹಿತಿ ಹನೂರು ಚೆನ್ನಪ್ಪ ಸಲಹೆ ನೀಡಿದರು.
ಪಟ್ಟಣದ ಕಾರ್ನರ್ ಸ್ಟೋನ್ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಜೆಎಸ್‌ಬಿ ಪ್ರತಿಷ್ಠಾನ ಆಯೋಜಿಸಿದ್ದ ’ಕನ್ನಡ ಮಾಸಾಚರಣೆ 2024’ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಕನ್ನಡ ಭಾಷೆ ನಮ್ಮ ತಾಯಿಯಂತೆ, ಆಂಗ್ಲಭಾಷೆಯು ಅನ್ನದ ಭಾಷೆ ಎನಿಸಿದೆ. ನಾವು ಕನ್ನಡಿಗರು ಅನ್ನ ಬಿಟ್ಟರೂ ತಾಯಿಯನ್ನು ಬಿಡುವುದಿಲ್ಲ. ಇಂದಿನ ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತ, ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಬಿ ಪ್ರತಿಷ್ಠಾನದ ಎಸ್.ಶಶಿಕುಮಾರ ಮಾತನಾಡಿ, ನಾವು ಕನ್ನಡವನ್ನು ಮೊದಲು ಬಳಸುವುದನ್ನು ಸರಿಯಾಗಿ ರೂಢಿಸಿಕೊಳ್ಳಬೇಕು. ಭಾಷೆಯನ್ನು ಹೆಚ್ಚೆಚ್ಚು ಬಳಸುವುದರಿಂದ ಅದು ಬೆಳೆಯುತ್ತದೆ ಮತ್ತು ಉಳಿಯುತ್ತದೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ನಮ್ಮ ಭಾಷೆಯನ್ನು ಹೆಚ್ಚಾಗಿ ಉಪಯೋಗಿಸೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತರಾದ ಹೊನ್ನೂರಿನ ಗೌರಮ್ಮ ಮತ್ತು ಮಹದೇವಮ್ಮ ಅವರನ್ನು ಸನ್ಮಾನಿಸಲಾಯಿತು. ನಂತರ ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡ ಕಿರುಪುಸ್ತಕ ನೀಡಿ, ಕನ್ನಡ ಓದನ್ನು ಪ್ರೋತ್ಸಾಹಿಸಲಾಯಿತು. ಪ್ರಾಂಶುಪಾಲ ಡಾ.ರೋಷನ್ ಪ್ರಿನ್ಸ್, ನಿಸರ್ಗ ಶಾಲೆಯ ಶಿಕ್ಷಕ ಶಿವಕುಮಾರ, ಉಪನ್ಯಾಸಕರಾದ ಸರ್ವೇಶ, ರೋಜಾ, ಮಲ್ಲೇಶ, ಪವನ್, ವಿಶ್ವಾಸ್, ಸುಷ್ಮಾ, ಭವಾನಿ, ಸಿಬ್ಬಂದಿ, ಪಾಲಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.