

ಕಲಬುರಗಿ: ಚಿಂಚೋಳಿ ವ್ಯಾಪ್ತಿಯಲ್ಲಿ ವೃದ್ಧೆ ಮೇಲೆ ಅತ್ಯಾಚಾರ ಎಸಗಿ ಏಕಾಂಗಿಯಾಗಿ ಎಲ್ಲೆಡೆ ಸಂಚರಿಸುತ್ತಾ, ವಿಚಿತ್ರ ಮನಸ್ಥಿತಿಯನ್ನು ಹೊಂದಿದ ಅತ್ಯಾಚಾರಿಯನ್ನು ಸತತ ೧೦ ದಿನಗಳ ಕಾರ್ಯಾಚರಣೆ ನಡೆಸಿ, ತೆಲಂಗಾಣದ ಹೈದರಾಬಾದ್‌ನಲ್ಲಿ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ತಿಳಿಸಿದರು.
ಚಿಂಚೋಳಿ ತಾಲೂಕಿನ ಐನೊಳ್ಳಿ ಮೂಲದ ತಯಾಬ್ ಶಾಹ ಮಿರಾನ್ ಶಾಹ(೪೦) ಬಂಧಿತ ಆರೋಪಿ. ೧೬ ವರ್ಷದ ಹಿಂದೆಯೇ ಕುಟುಂಬವನ್ನು ತೊರೆದಿದ್ದ. ಚಿಂಚೋಳಿ, ಬೀದರ್, ತೆಲಂಗಾಣದ ಮೇದಕ್, ರಂಗಾರೆಡ್ಡಿ, ಹೈದರಾಬಾದ್ ಸೇರಿ ವಿವಿಧೆಡೆ ಕೂಲಿ ಕೆಲಸ ಮಾಡುತ್ತಿದ್ದ. ಆತನ ಮೊಬೈಲ್ ಫೋನ್ ಇರಲಿಲ್ಲ. ಸಂಬAಧಿಕರಿಗೆ, ಸ್ವತಃ ಆತನಿಗೆ ಮುಂದೆಲ್ಲಿಗೆ ಎಂಬ ಅರಿವು ಇರಲಿಲ್ಲ. ಏಕಾಂಗಿಯಾಗಿ ಸಂಚರಿಸುತ್ತಿದ್ದ, ಕೆಲಸ ಸಿಕ್ಕರೆ ಅಲ್ಲಿಯೇ ಉಳಿದು ಮುಂದೆ ಸಂಚರಿಸುತ್ತಿದ್ದ. ಇತನ ಪತ್ತೆ ಸವಾಲಾಗಿ ಪರಿಣಮಿಸಿತ್ತು. ನಾಲ್ಕು ವಿಶೇಷ ತಂಡ ರಚಿಸಲಾಗಿತ್ತು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿ ಭಾವಚಿತ್ರ ಎಲ್ಲೆಡೆ ಹಂಚಿ ಮಾಹಿತಿ ನೀಡಿದವರಿಗೆ ೧೦ ಸಾವಿರ ರೂ. ಬಹುಮಾನ ಘೋಷಿಸಲಾಗಿತ್ತು. ಆರೋಪಿಯನ್ನು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನ.೧೭-೧೮ರಂದು ರಾತ್ರಿ ವೃದ್ಧೆ ಮೇಲೆ ಅತ್ಯಾಚಾರ ಎಸಗಿ, ಕಳ್ಳತನ ಮಾಡಿ, ಪರಾರಿಯಾಗಿದ್ದ. ರಾಜ್ಯ, ನೆರೆ ರಾಜ್ಯದ ಪೊಲೀಸರ ಜತೆ ಸಂಪರ್ಕ ಸಾಧಿಸಿ, ಪತ್ತೆಗೆ ಯತ್ನಿಸಲಾಗಿತ್ತು. ಎರಡ್ಮೂರು ಕಡೆ ಕಂಡರೂ ಮುಂದೆಲ್ಲಿಗೆ ಎಂಬುದು ತಿಳಿದಿರಲಿಲ್ಲ ಎಂದರು.
ಡಿವೈಎಸ್‌ಪಿ ಸಂಗಮನಾಥ ಎಸ್.ಹಿರೇಮಠ, ಚಿಂಚೋಳಿ ಸಿಪಿಐ ಕಪಿಲದೇವ್, ಪಿಎಸ್‌ಐಗಳಾದ ಗಂಗಮ್ಮ, ಮಡಿವಾಳಪ್ಪ, ವೆಂಕಟೇಶ ನಾಯಕ, ಸಂಗಮೇಶ ಅಂಗಡಿ ಹಾಗೂ ಸಿಬ್ಬಂದಿಗಳಾದ ರಮೇಶ, ಮಹಾಂತೇಶ ನಾಯಕ, ಭಾಗಣ್ಣ, ಶಫಿಯೋದ್ದಿನ್, ಬೀರಪ್ಪ, ಮಂಜುನಾಥ, ಅಪ್ಪಾಸಾಬ್, ರಮೇಶ, ಯಮನೂರಪ್ಪ, ಮಹಾಂತೇಶ, ಮೇಘನಾಥ ರೆಡ್ಡಿ, ನಾಗರಾಜ, ವಿಶ್ವನಾಥ, ಹೊನ್ನಪ್ಪ, ಮೋಹನ ರೆಡ್ಡಿ ಸೇರಿ ಇತರರು ತನಿಖಾ ತಂಡದಲ್ಲಿದ್ದರು ಎಂದು ಹೇಳಿದರು. ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವರಿಗೆ ಪ್ರಶಂಸಾ ಪತ್ರ ನೀಡಿದರು.