

ಚಿತ್ರದುರ್ಗ: ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಜ.22ರಿಂದ 24 ರವರೆಗೆ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
22ರ ಬೆಳಗ್ಗೆ 10ರಿಂದ 1.30ರವರೆಗೆ ಮತ್ತು ಮಧ್ಯಾಹ್ನ 2.30 ರಿಂದ 5ರವರೆಗೆ ನಗರದ ಚಳ್ಳಕೆರೆ ರಸ್ತೆಯ ಎಸ್‌ಜಿ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ಮತ್ತು ವಿಚಾರಣೆ ನಡೆಸುವರು. ಜಿಲ್ಲೆಯಲ್ಲಿ ಸರ್ಕಾರಿ ಅಧಿಕಾರಿ, ನೌಕರರಿಂದ ತೊಂದರೆಗೊಳಗಾದ ಸಾರ್ವಜನಿಕರು ಉಪಲೋಕಾಯುಕ್ತರ ಮುಂದೆ ತಮ್ಮ ಅಹವಾಲುಗಳನ್ನು ಲಿಖಿತ ರೂಪದಲ್ಲಿ ದಾಖಲೆ, ಸಾಕ್ಷ್ಯಾಧಾರಗಳೊಂದಿಗೆ ಸಲ್ಲಿಸಬಹುದಾಗಿದೆ.
ಸಂಜೆ 5.30 ಕ್ಕೆ ಎಸ್‌ಜಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಕರ್ನಾಟಕ ಲೋಕಾಯುಕ್ತ ಕಾಯ್ದೆ ಕುರಿತಂತೆ ಶಿಕ್ಷಣ, ರೇಷ್ಮೆ, ಕೃಷಿ, ತೋಟಗಾರಿಕೆ ಇಲಾಖೆ, ಆರ್‌ಟಿಒ, ಸಬ್‌ರಿಜಿಸ್ಟ್ರಾರ್, ಸಮಾಜ ಕಲ್ಯಾಣ ಹಾಗೂ ನ್ಯಾಯಾಂಗ ಇಲಾಖೆ ಅಧಿಕಾರಿಗಳಿಗೆ ಹಮ್ಮಿಕೊಂಡಿರುವ ಕಾನೂನು ಸಾಕ್ಷರತಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಜಿಲ್ಲಾ ನ್ಯಾಯಾಲಯದ ವಕೀಲರ ಸಂಘದ ಸಭಾಂಗಣದಲ್ಲಿ ಜ.23ರ ಬೆಳಗ್ಗೆ 9.45ಕ್ಕೆ ಬಾರ್ ಅಸೋಸಿಯೇಶನ್ ಸದಸ್ಯರೊಂದಿಗೆ ಸಾರ್ವಜನಿಕ ಆಡಳಿತ ಮತ್ತು ಗುಡ್ ಗೌರ್ನೆನ್ಸ್ ಕುರಿತು ಸಂವಾದ ನಡೆಸಲಿದ್ದಾರೆ. ಬೆಳಗ್ಗೆ 11ರಿಂದ 11.30 ರವರೆಗೆ ಜಿಲ್ಲಾ ಪಂಚಾಯಿತಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸುವರು.
ಬೆಳಗ್ಗೆ 11.30 ರಿಂದ 1.30 ರವರೆಗೆ ಹಾಗೂ ಮಧ್ಯಾಹ್ನ 2.30 ರಿಂದ ಜಿಲ್ಲೆಗೆ ಸಂಬಂಧಿಸಿದಂತೆ ಲೋಕಾಯುಕ್ತ ಸಂಸ್ಥೆಯಲ್ಲಿ ಈಗಾಗಲೇ ದಾಖಲಾಗಿರುವ(ಉಪಲೋಕಾಯುಕ್ತರ ಕಾರ್ಯವ್ಯಾಪ್ತಿ) ಪ್ರಕರಣಗಳ ಕುರಿತು ತನಿಖೆ, ವಿಚಾರಣೆಗೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ವಿಚಾರಣೆ ನಡೆಸಲಿದ್ದಾರೆ.
ಜಿಲ್ಲಾ ನ್ಯಾಯಾಲಯದಲ್ಲಿ 24 ರಂದು ಬೆಳಗ್ಗೆ 9ರಿಂದ 10ರವರೆಗೆ ನ್ಯಾಯಾಂಗ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬೆಳಗ್ಗೆ 10.15ಕ್ಕೆ ಪ್ರವಾಸಿ ಮಂದಿರದಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ಮಧ್ಯಾಹ್ನ 12ರಿಂದ 2ರವರೆಗೆ ಹಾಗೂ ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ವಿವಿಧ ಸರ್ಕಾರಿ ಕಚೇರಿಗಳು ಹಾಗೂ ಸಂಸ್ಥೆಗಳಿಗೆ ಅನಿರೀಕ್ಷಿತ ಭೇಟಿ ನೀಡುವರು ಎಂದು ಲೋಕಾಯುಕ್ತ ಎಸ್‌ಪಿ ಎನ್. ವಾಸುದೇವರಾಮ ತಿಳಿಸಿದ್ದಾರೆ.
ಅಧಿಕಾರಿ, ನೌಕರ ವರ್ಗದಲ್ಲಿ ಆತಂಕ
ಉಪ ಲೋಕಾಯುಕ್ತರ ಕಾರ್ಯಕ್ರಮದ ಮೊದಲ ದಿನ 22ರಂದು ಸಾರ್ವಜನಿಕರ ಅಹವಾಲು ಸ್ವೀಕಾರ ವೇಳೆ ಜಿಲ್ಲೆಯ ಯಾರ ವಿರುದ್ಧ ದೂರುಗಳು ಕೇಳಿ ಬರುತ್ತವೆಯೋ ಎಂಬ ಆತಂಕ ಸರ್ಕಾರಿ ಅಧಿಕಾರಿ, ನೌಕರರಲ್ಲಿ ಎದುರಾಗಿದೆ. ನ್ಯಾಯಮೂರ್ತಿಗಳ ಪ್ರವಾಸ, ಅವರು ಪಾಲ್ಗೊಳ್ಳಲಿರುವ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಅಗತ್ಯ ಸಿದ್ಧತೆಗೆ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಸೂಕ್ತ ಮುನ್ನಚ್ಚರಿಕೆ ಕ್ರಮಗಳನ್ನು ಸೂಚಿಸಿದ್ದಾರೆ.
---