

ಮೈಸೂರು: ನಿರಂತರ ಫೌಂಡೇಷನ್ ವತಿಯಿಂದ ನಿರಂತರ ರಂಗತಂಡದ ಸದಸ್ಯರು ಅಭಿನಯಿಸುವ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಪ್ರಬಂಧ ಹಾಗೂ ಇತರ ಕೃತಿಗಳನ್ನು ಆಧರಿಸಿದ ‘ಗೊರೂರು’ ನಾಟಕ ಪ್ರದರ್ಶನ ಆ.24ರಂದು ಸಂಜೆ 6.30ಕ್ಕೆ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಸ್ವಾತಂತ್ರೃ ಪೂರ್ವದಲ್ಲೇ ಸಾಂಸ್ಕೃತಿಕ ಚಲನಶೀಲತೆಯನ್ನು ಗುರುತಿಸಿದವರಾಗಿದ್ದಾರೆ. ಅವರು ಆ ದಿನಗಳಲ್ಲಿಯೇ ವೈಚಾರಿಕತೆ ಹೊಂದಿದ್ದರು. ಗೊರೂರಿನ ಜನಜೀವನದ ಬೆಸುಗೆಯೂ ಆಗಿದ್ದರು. ಅಂದಿನ ಮೌಢ್ಯವನ್ನು ನವಿರಾದ ಹಾಸ್ಯದ ಮೂಲಕ ಛೇಡಿಸಿದ್ದಾರೆ. ಆದರೂ ಅವರ ಕೃತಿಗಳು ಪರಿಪೂರ್ಣವಾಗಿ ನಾಟಕ ರೂಪದಲ್ಲಿ ಹೊರಬಂದಿರಲಿಲ್ಲ.
ಈ ಕೆಲಸವನ್ನು ಮಂಜುನಾಥ ಎಲ್.ಬಡಿಗೇರ ಅವರು ನಿಭಾಯಿಸಿ, ನಾಟಕವನ್ನು ನಿರ್ದೇಶಿಸಿದ್ದಾರೆ ಎಂದು ಫೌಂಡೇಷನ್ ಅಧ್ಯಕ್ಷ ಎಂ.ಎಂ. ಸುಗುಣ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಟಕದ ನಿರ್ದೇಶಕ ಮಂಜುನಾಥ ಎಲ್. ಬಡಿಗೇರ, ಪತ್ರಕರ್ತರಾದ ದಯಾಶಂಕರ ಮೈಲಿ, ಆರ್.ಕೃಷ್ಣ ಇನ್ನಿತರರು ಇದ್ದರು.