

ರಾಣೆಬೆನ್ನೂರ: ತಾಲೂಕಿನ 24 ಗ್ರಾಮಗಳು ಕರೊನಾ ಸೋಂಕಿನಿಂದ ಸುರಕ್ಷಿತವಾಗಿವೆ. ನಗರಕ್ಕಿಂತ ಗ್ರಾಮೀಣ ಭಾಗದಲ್ಲಿಯೇ ಹೆಚ್ಚು ಕೋವಿಡ್ ಪ್ರಕರಣಗಳಿವೆ. ತಾಲೂಕಿನಲ್ಲಿ 108 ಗ್ರಾಮಗಳಿವೆ. ಅವುಗಳ ಪೈಕಿ 24 ಗ್ರಾಮಗಳಲ್ಲಿ ಈವರೆಗೂ ಕೋವಿಡ್-19 ಪ್ರಕರಣ ಪತ್ತೆಯ ಾಗದಿರುವುದು ವಿಶೇಷವಾಗಿದೆ.
ಕರೊನಾ ಎರಡನೇ ಅಲೆ ಶುರುವಾಗುತ್ತಿದ್ದಂತೆ ಬೆಂಗಳೂರು ಸೇರಿ ಬೇರೆ ಬೇರೆ ಜಿಲ್ಲೆ, ಹೊರ ರಾಜ್ಯದಿಂದ ಬಂದವರನ್ನು ಆಯಾ ಗ್ರಾಮದವರೇ ಹೋಂ ಕ್ವಾರಂಟೈನ್ ಮಾಡಿಸಿದ್ದರು. ಮದುವೆ, ಸೀಮಂತ, ಗೃಹ ಪ್ರವೇಶ ಸೇರಿ ಇತರ ಸಭೆ, ಸಮಾರಂಭಗಳನ್ನು ಸ್ವಯಂ ಪ್ರೇರಣೆಯಿಂದ ಮುಂದೂಡಿದ್ದಾರೆ.
ಗ್ರಾಮದವರನ್ನು ಹೊರತು ಪಡಿಸಿ ಬೇರೆ ಬೇರೆ ಊರುಗಳಿಂದ ಬರುವವರಿಗೆ ಹಾಗೂ ಸಂಬಂಧಿಕರ ಪ್ರವೇಶಕ್ಕೂ ನಿರ್ಬಂಧ ಹೇರಲಾಗಿದೆ. ಸರಳ ಧಾರ್ವಿುಕ ಆಚರಣೆಗೆ ಜಾತ್ರೆಗಳನ್ನು ಸೀಮಿತಗೊಳಿಸಿದ್ದಾರೆ. ಅಲ್ಲದೆ, ಗ್ರಾಪಂ ಹಾಗೂ ಗ್ರಾಮದ ಮುಖಂಡರು ಸೇರಿ ಸ್ವತಃ ಕರೊನಾ ಕುರಿತು ಜಾಗೃತಿ ಮೂಡಿಸಿದ್ದಾರೆ.
ಗ್ರಾಮದ ಕಟ್ಟೆ ಮೇಲೆ ಕುಳಿತುಕೊಳ್ಳುವಂತಿಲ್ಲ. ಅಗತ್ಯ ಕೆಲಸಕ್ಕೆ ಮನೆಯಿಂದ ಹೊರ ಬರುವುದಾದರೆ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಗ್ರಾಮದಿಂದ ಯಾರೊಬ್ಬರೂ ರಾಣೆಬೆನ್ನೂರ ನಗರಕ್ಕೆ ತೆರಳುವಂತಿಲ್ಲ. ತರ್ತ ಇದ್ದವರು ನಗರಕ್ಕೆ ತೆರಳಿದರೂ ಅಂಥವರು ವಾಪಸ್ ಗ್ರಾಮಕ್ಕೆ ಬಂದ ಕೂಡಲೆ ಬಿಸಿ ನೀರಿನಲ್ಲಿ ಸ್ನಾನ ಮಾಡಬೇಕು. ಸ್ಯಾನಿಟೈಸರ್ ಬಳಸಬೇಕು.
ಹೀಗೆ ಗ್ರಾಪಂ ಹಾಗೂ ಆಯಾ ಗ್ರಾಮಗಳ ಮುಖಂಡರು ಹತ್ತು ಹಲವು ಷರತ್ತುಗಳನ್ನು ವಿಧಿಸಿದ ಪರಿಣಾಮ 24 ಗ್ರಾಮಗಳು ಇಂದಿಗೂ ಕರೊನಾ ಮುಕ್ತವಾಗಿವೆ. ಅಲ್ಲದೆ ಗ್ರಾಮದ ಮುಖಂಡರ ಮಾತು ಕೇಳದ ಜನರಿಗೆ ಪೊಲೀಸರನ್ನು ಕರೆಯಿಸಿ ದಂಡ ಕೂಡ ವಿಧಿಸಿದ ಉದಾಹರಣೆಗಳು ಇವೆ.
ಕರೊನಾ ಮುಕ್ತ ಗ್ರಾಮಗಳಿವು
ಗೋಡಿಹಾಳ, ಹನುಮನಹಳ್ಳಿ, ಮಲಕನಹಳ್ಳಿ, ವಡೇರಾಯನಹಳ್ಳಿ, ಸಿದ್ದಾಪುರ, ಕೂಸಗಟ್ಟಿ, ಬಡಸಂಗಾಪುರ, ತಿಮ್ಮೇನಹಳ್ಳಿ, ಹೊಳೆ ಆನ್ವೇರಿ, ನಂದಿಹಳ್ಳಿ, ಲಕ್ಷಾ್ಮಪುರ, ಬಿಲ್ಲಹಳ್ಳಿ, ದಂಡಗಿಹಳ್ಳಿ, ಕೂಲಿ, ಗುಡ್ಡದಹೊಸಳ್ಳಿ, ವೀರಾಪುರ, ಹಳೇ ಹುಲಿಹಳ್ಳಿ, ಸೋಮಲಾಪುರ, ಕೋಣನತಂಬಗಿ, ಎಣ್ಣಿಹೊಸಳ್ಳಿ, ಶಿಡಗನಾಳ, ಹುಲ್ಲತ್ತಿ ತಾಂಡಾ, ಗುಡ್ಡದ ಆನ್ವೇರಿ ಮತ್ತು ಕುದರಿಹಾಳ.
ಗ್ರಾಮಗಳಲ್ಲಿ ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ನಗರ ಪ್ರದೇಶದಿಂದ ಗ್ರಾಮಗಳಿಗೆ ಬಂದವರನ್ನು ಯಾವುದೇ ಕಾರಣಕ್ಕೂ ಹೊರಗಡೆ ಓಡಾಡಲು ಬಿಟ್ಟಿಲ್ಲ. ಅಲ್ಲದೆ, ಗ್ರಾಮ ಮಟ್ಟದಲ್ಲಿ ಅವರೇ ಲಾಕ್ಡೌನ್ ಮಾಡಿಕೊಂಡ ಕಾರಣ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸೂಚನೆಯನ್ನು ಸೂಕ್ತವಾಗಿ ಪಾಲಿಸಿದ ಹಿನ್ನೆಲೆಯಲ್ಲಿ ತಾಲೂಕಿನ 24 ಗ್ರಾಮಗಳು ಕರೊನಾ ಮುಕ್ತವಾಗಿವೆ.| ಶಂಕರ ಜಿ.ಎಸ್. ತಹಸೀಲ್ದಾರ್ ರಾಣೆಬೆನ್ನೂರ
ದರ ನಿಗದಿ
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನೊಂದಿಗೆ ವಿಲೀನಗೊಂಡ ಜಿಲ್ಲೆಯ 10ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರ ಕೋಟಾದ 281 ಬೆಡ್ಗಳು ಲಭ್ಯವಿವೆ. ಈವರೆಗೆ ಆರು ಜನರು ಚಿಕಿತ್ಸೆಗೆ ದಾಖಲಾಗಿದ್ದಾರೆ. ಖಅಖಖ ನಲ್ಲಿ ನೋಂದಾಯಿಸಿಕೊಂಡ ಖಾಸಗಿ ಆಸ್ಪತ್ರೆಗಳಲ್ಲಿರುವ ಶೇ. 50ರಷ್ಟು ಬೆಡ್ಗಳನ್ನು ಜಿಲ್ಲಾಡಳಿತಕ್ಕೆ ನೀಡಬೇಕಾಗಿದೆ. ಈ ಬೆಡ್ಗಳಿಗೆ ಸರ್ಕಾರವೇ ರೋಗಿಗಳಿಗೆ ಹಂಚಿಕೆ ಮಾಡಲಿದೆ. ಖಾಸಗಿ ಆಸ್ಪತ್ರೆಯಲ್ಲಿ ಸೌಲಭ್ಯ ಪಡೆಯುವ ರೋಗಿಗಳಿಗೆ ಸಾದಾ ಬೆಡ್ಗೆ ಪ್ರತಿ ದಿನಕ್ಕೆ 5,500ರೂ. ಆಕ್ಸಿಜನ್ ಬೆಡ್ಗೆ 8,000 ರೂ. ಹಾಗೂ ಐಸಿಯು ಬೆಡ್ಗೆ 11,500ರೂ. ದರ ನಿಗದಿಪಡಿಸಲಾಗಿದೆ. ಸರ್ಕಾರ ಕೋಟಾದಡಿ ಖಾಸಗಿ ಆಸ್ಪತ್ರೆಗೆ ದಾಖಲಾದ ಸೋಂಕಿತರ ಬಿಲ್ ಅನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿಂದ ಭರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.