24 ಗಂಟೆಯಲ್ಲಿ ಗುಂಡಿ ಮುಚ್ಚಿ

01
Published on

ಬೆಳಗಾವಿ: ಮಹಾನಗರದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ನಡೆಯಲಿರುವ ಮಾರ್ಗಗಳಲ್ಲಿರುವ ರಸ್ತೆಗಳನ್ನು ಮುಂದಿನ 24 ಗಂಟೆಗಳ ಒಳಗಾಗಿ ಮುಚ್ಚಬೇಕು. ಕಪಿಲೇಶ್ವರ ಹೊಂಡದ ಸುತ್ತಲೂ ಬೇಲಿ ಅಳವಡಿಸಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೂಚಿಸಿದರು.

ನಗರದಲ್ಲಿ ಅದ್ದೂರಿ ಗಣೇಶೋತ್ಸವದ ಹಿನ್ನೆಲೆಯಲ್ಲಿ ಸೋಮವಾರ ಶನಿವಾರ ಕೂಟ, ಕಪಿಲೇಶ್ವರ ಹೊಂಡ, ಖಡೇಬಜಾರ್​, ರಾಮಲಿಂಗ್​ ಕಿಂಡ್​ ಗಲ್ಲಿ ಸೇರಿದಂತೆ ಮೆರವಣಿಗೆ ಮಾರ್ಗಗಳು ಹಾಗೂ ಗಣೇಶ ವಿಸರ್ಜನಾ ಹೊಂಡಗಳನ್ನು ಬೈಕ್​ ಮೇಲೆ ಸಂಚರಿಸಿ ಪರಿಶೀಲನೆ ನಡೆಸಿ ಸಾರ್ವಜನಿಕರಿಂದ ಮಾಹಿತಿ ಪಡೆದು ಕೊಂಡರು. ಬಳಿಕ ಅಧಿಕಾರಿಗಳೊಂದಿಗೆ ಸ್ಥಳದಲ್ಲಿಯೇ ಸಭೆ ನಡೆಸಿ ಸಮಸ್ಯೆ ತಕ್ಷಣ ಪರಿಹರಿಸಬೇಕು ಎಂದು ತಿಳಿಸಿದರು.

ಗಣೇಶ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಯಾವುದೇ ರೀತಿಯ ಅನನುಕೂಲ ಎದುರಾಗಬಾರದು. ರಾತ್ರಿ ಸಮಯದಲ್ಲಿ ವಿದ್ಯುತ್​ ಸಮಸ್ಯೆ ಎದುರಾಗದಂತೆ ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು. ಕೆಳಹಂತದಲ್ಲಿರುವ ಹೈಟೆನ್ಷನ್​ ವಿದ್ಯುತ್​ ತಂತಿಗಳನ್ನು ಕೂಡಲೇ ಸರಿಪಡಿಸಬೇಕು. ಗಣೇಶ ವಿಸರ್ಜನೆ ಮಾಡುವ ಕಪಿಲೇಶ್ವರ ಹೊಂಡವನ್ನು ಮತ್ತು ಸುತ್ತಮುತ್ತಲಿನ ಜಾಗವನ್ನು ಸ್ವಚ್ಛಗೊಳಿಸಬೇಕು. ಸುರತೆ ದೃಷ್ಟಿಯಿಂದ ತಾತ್ಕಾಲಿಕ ಬೇಲಿ ಅಳವಡಿಸಬೇಕು ಎಂದು ನಿರ್ದೇಶನ ನೀಡಿದರು.

ಗಣೇಶ ವಿಸರ್ಜನೆ ಮೆರವಣಿಗೆ ವೀಕ್ಷಿಸಲು ವಿವಿಧ ಭಾಗಗಳಿಂದ ಲಕ್ಷಾಂತರ ಜನರು ಬರುತ್ತಾರೆ. ಹಾಗಾಗಿ ಸ್ವಚ್ಛತೆ, ಸುರಕ್ಷತೆ, ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಅಲ್ಲದೆ, ನಗರದಲ್ಲಿ ಎಲ್ಲೆಲ್ಲಿ ಸಂಚಾರ ಹೊಂಡಗಳನ್ನು ವ್ಯವಸ್ಥೆ ಮಾಡಿರುವುದು ಮತ್ತು ಎಲ್ಲೆಲ್ಲಿ ವಿಸರ್ಜನಾ ಸಂಚಾರಿ ವಾಹನಗಳಿವೆ ಎಂಬುದರ ಕುರಿತು ಸಾರ್ವಜನಿಕರಿಗೆ ಮುಂಚಿತ ವಾಗಿ ಮಾಹಿತಿ ನೀಡಬೇಕು. ಈ ವಿಷಯದಲ್ಲಿ ಯಾರು ರ್ನಿಲಕ್ಷ ಮಾಡಬಾರದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ ಮಾತನಾಡಿ, ಈಗಾಗಲೇ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಕೆಲಸ ಆರಂಭಿಸಲಾಗಿದೆ. ಅಲ್ಲದೆ, 11 ದಿನಗಳ ಕಾಲ ಜರುಗುವ ಗಣೇಶೋತ್ಸವದಲ್ಲಿ ಸ್ವಚ್ಛತೆ, ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಪಾಲಿಕೆ ಇಂಜಿನಿಯರ್​ ಲಕ್ಷಿ$್ಮ ನಿಪ್ಪಾಣಿಕರ, ಹೆಸ್ಕಾಂ ಅಧಿಕಾರಿಗಳು ಇದ್ದರು.

ಹಣ್ಣು, ಹೂವು ಬೆಲೆ ಏರಿಕೆ: ಗಣೇಶೋತ್ಸವದ ಹಬ್ಬದ ಹಿನ್ನೆಲೆಯಲ್ಲಿ ವಸ್ತುಗಳ ಬೆಲೆ ಗಗನಕ್ಕೇರಿದ್ದವು. ದಾಳಿಂಬೆ 150 ರಿಂದ 200 ರೂ., ಕಿತ್ತಳೆ 200 ರಿಂದ 280 ರೂ., ಸೇಬು 140 ರಿಂದ 230 ರೂ.. ಮೋಸಂಬಿ 120 ರಿಂದ 180 ರೂ., ವಿವಿಧ ಹೂವುಗಳು ಕೆಜಿಗೆ 850 ರಿಂದ 1000 ರೂ. ವರೆಗೆ ಮಾರಾಟವಾಗುತ್ತಿದೆ. ಸಾಮಾನ್ಯ ದಿನಗಳಿಗೆ ಹೋಲಿಕೆ ಮಾಡಿದರೆ ಕೆಜಿ ದರದಲ್ಲಿ 50 ರಿಂದ 75 ರೂ. ವರೆಗೆ ಹೆಚ್ಚಳವಾಗಿದೆ. ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ ಎಂದು ಸಾರ್ವಜನಿಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಮಾರುಕಟ್ಟೆಯಲ್ಲಿ ಜನಜಂಗುಳಿ: ಗೌರಿ&ಗಣೇಶ ಹಬ್ಬದ ಹಿನ್ನೆಲೆಯಲ್ಲಿ ನಗರದ ಮಾರುಕಟ್ಟೆಗಳಲ್ಲಿ ಸೋಮವಾರ ಪೂಜಾ ಸಾಮಗ್ರಿ, ಗಣೇಶ ಮೂರ್ತಿ ಖರೀದಿ ಜೋರಾಗಿ ನಡೆಯಿತು. ಖಡೇಬಜಾರ, ಗಣಪತಿ ಗಲ್ಲಿ, ಶನಿವಾರ ಕೂಟ, ಬಸ್​ ನಿಲ್ದಾಣ ರಸ್ತೆ, ಶಹಾಪುರ, ವಡಗಾವಿ, ಕಪಿಲೇಶ್ವರ ದೇವಸ್ಥಾನ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವರ್ತಕರು ಹೂವು, ಹಣ್ಣು, ಗಣೇಶ ಮೂರ್ತಿಗಳ ಮಾರಾಟ ವ್ಯಾಪಾರ ಜೋರಾಗಿ ನಡೆಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಮಾರುಕಟ್ಟೆಗೆ ಆಗಮಿಸಿದ್ದರಿಂದ ಕೆಲವೊತ್ತು ಸಂಚಾರ ದಟ್ಟಣೆ ಉಂಟಾಯಿತು. ರಸ್ತೆ ಬದಿಗಳಲ್ಲಿ, ತಳ್ಳು ಗಾಡಿಗಳಲ್ಲಿ ಹಣ್ಣುಗಳ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿರುವ ದೃಶ್ಯ ಕಂಡು ಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net