

ಧಾರವಾಡ: ಜಿಲ್ಲೆಯಲ್ಲಿ ಭಾನುವಾರ ಒಂದು ಪ್ರಕರಣ ಪತ್ತೆಯಾದ ಬೆನ್ನಲ್ಲೆ ಹೆಚ್ಚಿನ ಸಂಖ್ಯೆಯಲ್ಲಿ ಶಂಕಿತರು ಪತ್ತೆಯಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಜಿಲ್ಲೆಯಲ್ಲಿ ಶನಿವಾರ ಸಂಜೆಯಿಂದ 24 ಗಂಟೆ ಅವಧಿಯಲ್ಲಿ 629 ಶಂಕಿತರು ಪತ್ತೆಯಾಗಿದ್ದು, ಅವರ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶಂಕಿತರ ಜತೆಗೆ ನಿಗಾ ವಹಿಸಲಾಗಿರುವವರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಶನಿವಾರ ಇದ್ದ 12500 ನಿಗಾದಲ್ಲಿರುವವರ ಸಂಖ್ಯೆ ಭಾನುವಾರ 13154ಕ್ಕೆ ಏರಿಕೆಯಾಗಿದೆ. ಈವರೆಗೆ ಜಿಲ್ಲೆಯಲ್ಲಿ 12442 ಶಂಕಿತ ವ್ಯಕ್ತಿಗಳ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, 11315 ಜನರ ವರದಿ ನೆಗೆಟಿವ್ ಬಂದಿವೆ. 39 ಪ್ರಕರಣಗಳು ಪಾಸಿಟಿವ್ ಬಂದಿದ್ದು, 29 ಜನರಿಗೆ ಕಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 10 ಜನರು ಗುಣಮುಖರಾಗಿದ್ದಾರೆ. ಇನ್ನೂ 1098 ಜನರ ವರದಿಗಳು ಬರಬೇಕಿದೆ. ವೈರಸ್ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆಯು ವಿದೇಶದಿಂದ ಆಗಮಿಸಿರುವ ಹಾಗೂ ಅವರ ಸಂಪರ್ಕಕ್ಕೆ ಒಳಗಾದ 13154 ಜನರ ಮೇಲೆ ನಿಗಾ ಇಟ್ಟಿದೆ. ಈ ಪೈಕಿ 6376 ಜನರು ಮನೆಯಲ್ಲೇ ಪ್ರತ್ಯೇಕವಾಗಿ (14 ದಿನ) ವಾಸವಾಗಿದ್ದಾರೆ. ಆಸ್ಪತ್ರೆ ಪ್ರತ್ಯೇಕ ವಾರ್ಡಗಳಲ್ಲಿ 29 ಜನ ದಾಖಲಾಗಿದ್ದಾರೆ. 3854 ಜನರು 14 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದರೆ, 2895 ಜನರು 28 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.
ಪರೀಕ್ಷೆಗೆ ಒಳಪಟ್ಟ 90 ಜನ
ಹುಬ್ಬಳ್ಳಿ: ಹೊರ ರಾಜ್ಯದಿಂದ ಬಂದು ಕರೊನಾ ತಪಾಸಣೆಗೆ ಒಳಪಡದೇ ಮಿಸ್ಸಿಂಗ್ ಆಗಿದ್ದ ಸುಮಾರು 90 ಜನ ಆರೋಗ್ಯ ತಪಾಸಣೆಗೆ ಒಳಪಡುವ ಮೂಲಕ ಧಾರವಾಡ ಜಿಲ್ಲೆ ನಿಟ್ಟುಸಿರು ಬಿಟ್ಟಿದೆ.
ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ, ಇನ್ನಿತರ ರಾಜ್ಯಗಳಿಂದ ಜಿಲ್ಲೆಗೆ 1589 ಜನ ಆಗಮಿಸಿದ್ದಾರೆ. ಇವರೆಲ್ಲ ಆಗಮನ ಕೇಂದ್ರದಲ್ಲಿ ನೋಂದಣಿ ಮಾಡಿಸಿಕೊಂಡು ಹೋಮ್ ಅಥವಾ ಸಾಂಸ್ಥಿಕ ಕ್ವಾರಂಟೈನ್ಗೆ ಒಳಗಾಗಬೇಕಿತ್ತು. ಆದರೆ, ಇವರಲ್ಲಿ ಕೆಲವರು ತಪ್ಪಿಸಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕಳೆದ 3-4 ದಿನಗಳಿಂದ ಪೊಲೀಸ್, ಆರೋಗ್ಯ ಇಲಾಖೆ ಸಿಬ್ಬಂದಿ ಇವರ ಹುಡುಕಾಟ ನಡೆಸಿದ ಪರಿಣಾಮ ಎಲ್ಲರೂ ಆರೋಗ್ಯ ತಪಾಸಣೆಗೆ ಒಳಪಟ್ಟಿದ್ದಾರೆ. ಕಾನೂನಿನ ಭೀತಿಯಿಂದ ಕೆಲವರು ಸ್ವಯಂ ಆಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ. ಕ್ವಾರಂಟೈನ್ಗೆ ಒಳಗಾಗಿದ್ದಾರೆ.
‘ಹೊರ ರಾಜ್ಯದಿಂದ ಬಂದು ಆಗಮನ ಕೇಂದ್ರದಲ್ಲಿ ನೋಂದಣಿ ಮಾಡಿಸಿಕೊಂಡವರ ಸಂಖ್ಯೆ ಹಾಗೂ ಕ್ವಾರಂಟೈನ್ಗೆ ಒಳಪಟ್ಟವರ ಸಂಖ್ಯೆ ತಾಳೆಯಾಗುತ್ತಿರಲಿಲ್ಲ. ಸುಮಾರ 90 ಜನ ತಪ್ಪಿಸಿಕೊಂಡಿರುವುದು ಗಮನಕ್ಕೆ ಬಂದಿತ್ತು. ಪೊಲೀಸ್-ಆರೋಗ್ಯ ಇಲಾಖೆ ಸಿಬ್ಬಂದಿ ಅವರೆಲ್ಲರನ್ನು ಹುಡುಕಿದ್ದಾರೆ. ಎಲ್ಲರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ’ ಎಂದು ಆಗಮನ ಕೇಂದ್ರದ ನೋಡಲ್ ಅಧಿಕಾರಿ, ಡಿಡಿಪಿಐ ಎಂ.ಎಲ್. ಹಂಚಾಟೆ ವಿಜಯವಾಣಿಗೆ ತಿಳಿಸಿದ್ದಾರೆ. ಹೊರ ರಾಜ್ಯಗಳಿಂದ ಧಾರವಾಡ ಜಿಲ್ಲೆಗೆ 1589 ಜನ ಬಂದಿದ್ದಾರೆ. ಮಹಾರಾಷ್ಟ್ರದಿಂದಲೇ ಅತ್ಯಧಿಕ 710, ಗೋವಾದಿಂದ 320, ಆಂಧ್ರಪ್ರದೇಶದಿಂದ 140, ರಾಜಸ್ಥಾನದಿಂದ 106, ಗುಜರಾತ್ನಿಂದ 85, ತಮಿಳುನಾಡಿನಿಂದ 73, ತೆಲಂಗಾಣದಿಂದ 70 ಜನ ಜಿಲ್ಲೆಗೆ ಆಗಮಿಸಿದ್ದಾರೆ. ಇವರಲ್ಲಿ 461 ಜನ ಹೋಮ್ ಕ್ವಾರಂಟೈನ್ ಇದ್ದಾರೆ. 994 ಜನರ ಗಂಟಲ ದ್ರವ ಪರೀಕ್ಷೆ ನಡೆಸಲಾಗಿದೆ.