ಉಡುಪಿಯ 24 ಪಂಚಾಯಿತಿ ಕೋವಿಡ್ ಮುಕ್ತ

LOCKDOWN new
Published on

ಉಡುಪಿ: ಕೋವಿಡ್ ಎರಡನೇ ಅಲೆಯಲ್ಲಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿಯೂ ಕೋವಿಡ್ ಸೋಂಕು ವ್ಯಾಪಕವಾಗಿ ಹರಡಿದ್ದು, ಪ್ರಸ್ತುತ ಹಲವಾರು ನಿಯಂತ್ರಣ ಕ್ರಮಗಳಿಂದಾಗಿ ಜಿಲ್ಲೆಯ 24 ಗ್ರಾಮ ಪಂಚಾಯಿತಿಗಳು ಕೋವಿಡ್ ಮುಕ್ತವಾಗಿವೆ.

ಜಿಲ್ಲೆಯಲ್ಲಿರುವ 155 ಗ್ರಾಮ ಪಂಚಾಯಿತಿಗಳಲ್ಲಿ ಜೂನ್ 1ರಂದು 33 ಗ್ರಾ.ಪಂಗಳಲ್ಲಿ 50ಕ್ಕೂ ಅಧಿಕ ಸಕ್ರಿಯ ಪ್ರಕರಣಗಳು ವರದಿಯಾಗಿದ್ದವು. ಒಂದೊಂದು ಗ್ರಾ.ಪಂ ವ್ಯಾಪ್ತಿಗಳಲ್ಲಿಯೂ 140ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ವರದಿಯಾಗಿತ್ತು. ಇದೀಗ ಗ್ರಾಮ ಪಂಚಾಯಿತಿಯೊಂದರ ಗರಿಷ್ಠ ಸಕ್ರಿಯ ಸೋಂಕಿತರ ಸಂಖ್ಯೆ 33ಕ್ಕೆ ಇಳಿಕೆಯಾಗಿದೆ. ಜಿಲ್ಲೆಯ 24 ಗ್ರಾ.ಪಂಗಳು ಸಂಪೂರ್ಣ ಸೋಂಕು ಮುಕ್ತವಾಗಿದ್ದರೆ, 124 ಗ್ರಾ.ಪಂಗಳಲ್ಲಿ 10ಕ್ಕೂ ಕಡಿಮೆ ಸಕ್ರಿಯ ಸೋಂಕಿತರಿದ್ದಾರೆ. ಉಳಿದ 7 ಗ್ರಾ.ಪಂ.ಗಳಲ್ಲಿ 10ಕ್ಕೂ ಅಧಿಕ ಪ್ರಕರಣವಿದೆ.

ಸೀಲ್‌ಡೌನ್ ಬಳಿಕ ವೇಗಕ್ಕೆ ತಡೆ: ಅದೆಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೂ ಗ್ರಾಮೀಣ ಭಾಗದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಾ ಇತ್ತು. ಮೇ 5ರಂದು ಜಿಲ್ಲೆಯ ಗರಿಷ್ಠ 1,654 ಜನರಲ್ಲಿ ಸೋಂಕು ದೃಢಪಟ್ಟಿತ್ತು. ಕೋವಿಡ್ ಪಾಸಿಟಿವಿಟಿ ದರ ಶೇ.50ಕ್ಕೆ ತಲುಪಿತ್ತು. ಬಳಿಕ ಜಿಲ್ಲಾಡಳಿತ ಗ್ರಾಮೀಣ ಭಾಗದಲ್ಲಿ ಸೋಕಿತರ ಮನೆ ಸೀಲ್‌ಡೌನ್ ಮಾಡುವ ನಿರ್ಧಾರ ಕೈಗೊಂಡಿತ್ತು. ಮೇ 21ರಿಂದ ಗ್ರಾಮೀಣ ಪ್ರದೇಶದಲ್ಲಿ ಹೊಸದಾಗಿ ಸೋಂಕು ದೃಢಪಟ್ಟ ಮನೆಗಳನ್ನು ಸೀಲ್‌ಡೌನ್ ಮಾಡಲಾಯಿತು. ಸೋಂಕಿತರು ಕೋವಿಡ್ ಕೇರ್ ಸೆಂಟರ್ ಅಥವಾ ಆಸ್ಪತ್ರೆಯಲ್ಲಿದ್ದರೂ ಮನೆ ಗುರುತಿಸಲು ಸಾಧ್ಯವಾಗುವಂತೆ ಟೇಪ್ ಅಳವಡಿಸಲಾಯಿತು. ಇದರಿಂದ ಸೋಂಕಿನ ಪ್ರಸರಣಕ್ಕೆ ಕಡಿವಾಣ ಬಿತ್ತು.

ಗ್ರಾ.ಪಂ. ಲಾಕ್‌ಡೌನ್ ಪರಿಣಾಮಕಾರಿ
ಹಳ್ಳಿಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬರಲು ಇನ್ನೊಂದು ಮಹತ್ವದ ನಿರ್ಧಾರ ಗ್ರಾ.ಪಂ.ಗಳ ಸಂಪೂರ್ಣ ಲಾಕ್‌ಡೌನ್. ಜಿಲ್ಲಾಡಳಿತ, ಜಿ.ಪಂ. ಹಾಗೂ ಆರೋಗ್ಯ ಇಲಾಖೆ ಸಂಘಟಿತವಾಗಿ 50ಕ್ಕಿಂತ ಹೆಚ್ಚು ಸಕ್ರಿಯ ಸೋಂಕಿತರಿದ್ದ ಗ್ರಾ.ಪಂ.ಗಳನ್ನು ಸಂಪೂರ್ಣ ಲಾಕ್‌ಡೌನ್ ಮಾಡಲಾಗಿತ್ತು. ಈ ವೇಳೆ ಗ್ರಾ.ಪಂ. ಮಟ್ಟದಲ್ಲಿ ರಚಿಸಲಾಗಿದ್ದ ಟಾಸ್ಕ್ ಫೋರ್ಸ್ ಪರಿಣಾಮಕಾರಿ ಕಾರ್ಯಾಚರಿಸಿತು. ಸುತ್ತಮುತ್ತಲಿನ ಗ್ರಾ.ಪಂಗಳಲ್ಲಿಯೂ ತಟ್ಟಿದ ಪರಿಣಾಮ 24 ಪಂಚಾಯಿತಿಗಳು ಹಂತಹಂತವಾಗಿ ಸೋಂಕು ಮುಕ್ತವಾಯಿತು.

ಗ್ರಾಮೀಣ ಭಾಗಗಳಲ್ಲಿ ಒಂದು ಪ್ರಕರಣ ಪತ್ತೆಯಾದ ಮನೆಯನ್ನೂ ಸೀಲ್‌ಡೌನ್ ಮಾಡಲಾಯಿತು. ಆಗ ಸೋಂಕಿತರು ಮನೆಯಿಂದ ಹೊರಗೆ ಬರುವ ಅವಕಾಶ ಇರಲಿಲ್ಲ. 50ಕ್ಕೂ ಹೆಚ್ಚು ಸೋಂಕಿತರು ಇರುವ ಗ್ರಾ.ಪಂ.ಗಳನ್ನು ಲಾಕ್‌ಡೌನ್ ಮಾಡಿದಾಗ ಇತರ ಗ್ರಾ.ಪಂಗಳು ಎಚ್ಚರ ವಹಿಸಲು ಸಾಧ್ಯವಾಯಿತು. ಪರಿಣಾಮ ಸೋಂಕಿತರ ಸಂಖ್ಯೆ ಗಣನೀಯ ಇಳಿಕೆಯಾಗಿದೆ.
ಡಾ.ನವೀನ್ ಭಟ್ ವೈ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಉಡುಪಿ ಜಿ.ಪಂ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net