ಅಖಂಡ ‌ಜಿಲ್ಲೆಗೆ 24 ಅಂಚೆ ಕಚೇರಿ ಮಂಜೂರು

Published on

ಬಳ್ಳಾರಿ : ಕಳೆದ ಎರಡು ವರ್ಷದಲ್ಲಿ ಅಖಂಡ ಜಿಲ್ಲೆಗೆ ಒಟ್ಟು 24 ಅಂಚೆ ಕಚೇರಿಗಳನ್ನು ಮಂಜೂರು ಗೊಳಿಸಲಾಗಿದೆ ಎಂದು ಸಂಸದ ಈ.ತುಕಾರಾಮ್ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಉಸ್ತುವಾರಿ ಸಮಿತಿ “ದಿಶಾ” ಸಮಿತಿಯ ದ್ವಿತೀಯ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದರು. ಒಂದೊಂದು ಕಚೇರಿಯು 50 ರಿಂದ 60 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಳ್ಳಲಿವೆ. ಬ್ಯಾಂಕಿಂಗ್ ಸೇವೆಯು ಒದಗಿಸಲಾಗುತ್ತದೆ. ಇದರಿಂದ ಅಂಚೆ ಸೌಲಭ್ಯಕ್ಕೆ ಇನ್ನಷ್ಟು ವೇಗ ನೀಡಿದಂತಾಗುತ್ತದೆ ಎಂದರು. ಕೆಲ ತಿಂಗಳಲ್ಲಿ ಭತ್ತದ ಫಸಲು ರೈತರ ಕೈಸೇರಲಿದೆ. ಖರೀದಿಸುವ ಏಜೆನ್ಸಿಗಳು ಅನಧಿಕೃತವಾಗಿದ್ದು, ರೈತರಿಂದ ಭತ್ತ ಖರೀದಿಸಿ, ಅಲ್ಪ ಮೊತ್ತ ಪಾವತಿಸಿ, ನಂತರ ಪಾವತಿಸಲಾಗುವುದು ಎಂದು ರೈತರನ್ನು ನಂಬಿಸಿ, ಮೊಬೈಲ್ ಆಫ್ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಪ್ರಕರಣ ಗಂಗಾವತಿ ದರೋಜಿ ಭಾಗಗಳಲ್ಲಿ ಕಂಡುಬರುತ್ತಿದ್ದು, ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಬೇಕು. ಅಲ್ಲದೆ, ಜಿಲ್ಲಾದ್ಯಂತ ಎಲ್ಲ ಗ್ರಾಪಂ ಗಳಿಂದ ಒಟ್ಟಾರೆ 54 ಕೋಟಿ ರೂ. ವಿದ್ಯುತ್ ಶುಲ್ಕ ಬಾಕಿ ಉಳಿಸಿಕೊಂಡಿವೆ. ಸಂಬಂಧಪಟ್ಟ ಅಧಿಕಾರಿಗಳು ಪಾವತಿಸಲು ಕ್ರಮವಹಿಸಬೇಕು‌ ಎಂದು ಹೇಳಿದರು.

ಜಿಲ್ಲೆಯ ಬಿಎಸ್ಎನ್ಎಲ್ ಕಚೇರಿಗೆ ಕೇಂದ್ರದಿಂದ 12.5 ಲಕ್ಷ ರೂ. ಅನುದಾನ ಒದಗಿಸಲಾಗಿದ್ದು, ಜಿಲ್ಲೆಯಲ್ಲಿ ವಿವಿಧೆಡೆ ನೆಟ್ ವರ್ಕ್ ಅನ್ನು 2ಜಿ, 3ಜಿ ಮತ್ತು 4ಜಿ ಸೇವೆಗಳಿಗೆ ಇನ್ನಷ್ಟು ಚುರುಕು ನೀಡಲು, ಬೇಕಾದ ವಿದ್ಯುತ್ ಸಂಪರ್ಕ, ಕೇಬಲ್ ಲೈನ್ ಅಳವಡಿಕೆ ಕಾಮಗಾರಿ ಕೈಗೊಳ್ಳಬೇಕು. ಇದರಿಂದ ಹಳ್ಳಿ ಭಾಗದ ವಿದ್ಯಾರ್ಥಿಗಳಿಗೆ, ಸರ್ಕಾರಿ ಕಚೇರಿಗಳು ಸುಗಮವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುತ್ತದೆ ಎಂದು ಅಧಿಕಾರಿಗಳಿಗೆ ತಿತಿಳಿಸಿದರು. ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಗರದ ರೇಡಿಯೋ ಪಾರ್ಕ್ ನ 2 ನೇ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪುನಾರಂಭಕ್ಕೆ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರು ದೀಪಾವಳಿ ಹಬ್ಬದ ನಂತರ ಭೂಮಿಪೂಜೆ ನೆರವೇರಿಸುವರು. ಇದಕ್ಕೆ ಅರಣ್ಯ ಇಲಾಖೆಯ ಜಾಗಕ್ಕೆ ಸಂಬಂಧಿಸಿದಂತೆ ಹಣ ಪಾವತಿಸಿದರೆ, ಕಾಮಗಾರಿ ಆರಂಭವಾಗಲಿದೆ. ಈ ಕುರಿತು ರೈಲ್ವೆ ಕೇಂದ್ರ ಕಚೇರಿಯ ಗಮನಕ್ಕೆ ತರಬೇಕು. ಇದಕ್ಕೆ ಬೇಕಾದ ಅಗತ್ಯ ಅನುದಾನ ಕೂಡ ಒದಗಿಸಲಾಗುವುದು. ಹಾಗಾಗಿ ಪರಿಷ್ಕೃತ ರೈಲ್ವೆ ಅಲೈನ್ಮೆಂಟ್ ಯೋಜನಾ ವರದಿ ಸಲ್ಲಿಸಬೇಕು ಎಂದು ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ಹೆಚ್.ಆರ್.ಗವಿಯಪ್ಪ ವೃತ್ತದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಮೇಲ್ಸೇತುವೆ ವಿಸ್ತರಣೆ ಕುರಿತಂತೆ ಪರಿಶೀಲನೆ ನಡೆಸುವರು ಎಂದರು.

ಜಿಲ್ಲೆಯಲ್ಲಿ ಕೇಂದ್ರ ಮತ್ತು ರಾಜ್ಯದ ಅನುದಾನ ಸೇರಿದಂತೆ ವಿವಿಧ ಬಗೆಯ ಅನುದಾನ ಲಭ್ಯವಿದ್ದು, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಒಡಗೂಡಿ ಜಿಲ್ಲೆಯನ್ನು ದೇಶದಲ್ಲಿಯೇ ಮಾದರಿ ಜಿಲ್ಲೆಯನ್ನಾಗಿಸಲು ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದರು.

ನಗರದೊಳಗೆ ಬಾರಿ ಗಾತ್ರದ ವಾಹನಗಳು ಸಂಚಾರಕ್ಕೆ ಕಡಿವಾಣ ಹಾಕಲು ಈಗಾಗಲೇ ಪ್ರಗತಿಯಲ್ಲಿರುವ ರಿಂಗ್ ರೋಡ್ ಕಾಮಗಾರಿಯು ನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಎನ್ ಎಚ್ಎಐ ಅಧಿಕಾರಿಗಳಿಗೆ ತಾಕೀತು ಮಾಡಿದರು. ಅದರಂತೆ ಬಳ್ಳಾರಿ-ಹೊಸಪೇಟೆಗೆ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯೂ ಪೂರ್ಣಗೊಳ್ಳುವ ಹಂತದಲ್ಲಿದ್ದು, ಕೇವಲ 4-5 ಕಿ.ಮೀ ಉದ್ದ ಬಾಕಿ ಇದ್ದು, ತ್ವರಿತವಾಗಿ ಪೂರ್ಣಗೊಳಿಸಬೇಕು. ಸಿರಗುಪ್ಪ ಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಮಗಾರಿಗೆ ಸಹ ವೇಗ ನೀಡಬೇಕು ಎಂದರು. ಇದೇವೇಳೆ ನಗರದ ಹೊರವಲಯದ ಬಿಐಟಿಎಂ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿಯಿಂದ ಸುಧಾಕ್ರಾಸ್ ವರೆಗೆ ಕೈಗೊಳ್ಳಲು ಉದ್ದೇಶಿಸಲಾಗಿರುವ 4 ಲೈನ್ ರಸ್ತೆಗೆ ಸೂಕ್ತ ಸರ್ವೇ ನಡೆಸಿ ನೀಡಬೇಕು ಎಂದು ಲೋಕೋಪಯೋಗಿ ಇಲಾಖಾಧಿಕಾರಿಗಳಿಗೆ ಸೂಚಿಸಿದರು.

ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್ ಮಾತನಾಡಿ, ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಹತ್ತಿರದ ಶಾಲೆಯ ಖಾಲಿ ಇರುವ ಕೊಠಡಿಗಳಿಗೆ ಸ್ಥಳಾಂತರಿಸಬೇಕು, ನಿರ್ವಹಣೆಯು ಸುಲಭವಾಗಲಿದೆ ಎಂದು ಸಲಹೆ ನೀಡಿದರು.

ಸಂಡೂರು ಶಾಸಕಿ ಈ.ಅನ್ನಪೂರ್ಣ ಮಾತನಾಡಿ, ಸಂಡೂರು ಭಾಗದಲ್ಲಿ ಒಬ್ಬ ರೈತ ಒಂದು ಬೆಳೆದರೆ, ಉಳಿದ ರೈತರೆಲ್ಲರೂ ಅದೇ ಬೆಳೆ ಬೆಳೆಯಲು ಮುಂದಾಗುತ್ತಿದಾರೆ. ಇದರಿಂದ ಅಸಮತೋಲನವಾಗುತ್ತಿದ್ದು, ಬಹುವಾರು ಬೆಳೆ ಬೆಳೆಯಲು ರೈತರಿಗೆ ಅರಿವು ಮೂಡಿಸಬೇಕು. ಅದೇರೀತಿಯಾಗಿ ಯೂರಿಯಾ ಗೊಬ್ಬರ ಬಳಕೆಯಿಂದಾಗುವ ಪರಿಣಾಮ ಕುರಿತು ರೈತರಲ್ಲಿ ಮನವರಿಕೆ ಮಾಡಿಕೊಡಬೇಕು ಎಂದರು.

ಸಭೆಯಲ್ಲಿ ಜೆಜೆಎಂ ಕಾಮಗಾರಿ, ಲೋಕೋಪಯೋಗಿ ಇಲಾಖೆ, ವಿಶೇಷಚೇತನರಿಗೆ ನೀಡುವ ಸಾಮಗ್ರಿ-ಸಲಕರಣೆ, ಪ್ರಧಾನಮಂತ್ರಿ ಆವಾಸ್ ಯೋಜನೆ, ಸರ್ವಶಿಕ್ಷಣ ಅಭಿಯಾನ ಕುರಿತಂತೆ ವಿವಿಧ ಕೇಂದ್ರ ಸರ್ಕಾರದ ಯೋಜನೆಗಳು ಕುರಿತು ಸಮಗ್ರವಾಗಿ ಚರ್ಚಿಸಿದರು.

ಬಾಕ್ಸ್ : ದಿಶಾ ಸಭೆಗೆ ಜಿಪಂ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ ಬದಲಾಗಿ ಇಲಾಖೆಯ ಬೇರೋಬ್ಬ ಅಧಿಕಾರಿ ಹಾಜರಾಗಿದ್ದು ಸಂಸದರು ಕಂಡು ಅಧಿಕಾರಿಯನ್ನು ಸಭೆಯಿಂದ ಹೊರ ಹೋಗುವಂತೆ ಸೂಚಿಸಿದರು. ಪಾಲಿಕೆಯ ಅಧಿಕಾರಿ ರೆಹಮಾನ್ ಇಲಾಖೆಯಲ್ಲಿನ ಕಾರ್ಯ ವೈಖರಿ ಗಮನಿಸಿ ಗದರಿಸಿ ನೋಟಿಸ್ ಜಾರಿಗೊಳಿಸಲಾಗುವುದಾಗಿ ಎಚ್ಚರಿಸಿದರು. ಜಿಲ್ಲೆಯ ಕಂಪ್ಲಿ, ನಗರ, ಸಿರಗುಪ್ಪ ಹಾಗೂ ಗ್ರಾಮೀಣ ಶಾಸಕರು ಸಭೆಗೆ ಉಪಸ್ಥಿತಿ ಇರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net