ಕುಂದ್ರಳ್ಳಿಯಲ್ಲಿ 24 ಮನೆಗಳು ಜಲಾವೃತ

H12-LXR02D
Published on

ಲಕ್ಷ್ಮೇಶ್ವರ: ಪಟ್ಟಣ ಸೇರಿ ತಾಲೂಕಿನ ಬಹುತೇಕ ಕಡೆ ಬುಧವಾರ ರಾತ್ರಿ ಸುರಿದ ಅಬ್ಬರದ ಗಾಳಿ ಮಳೆ ಅನೇಕ ಆವಾಂತರ ಸೃಷ್ಟಿಸಿತು. ಹಳ್ಳ ಕೊಳ್ಳಗಳು ತುಂಬಿ ಹರಿದವು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತು.

ಪಟ್ಟಣದಲ್ಲಿ ಚರಂಡಿಗಳು ತುಂಬಿ ರಸ್ತೆ ಮೇಲೆಯೇ ನೀರು ಹರಿದು ಸಂಚಾರ ಅಸ್ತವ್ಯಸ್ಥಗೊಂಡಿತ್ತು. ಕಟ್ಟಿದ್ದ ಚರಂಡಿ, ಲಂಡಿ ನಾಲಾವನ್ನು ಮಳೆಯಲ್ಲಿಯೇ ಪೌರ ಕಾರ್ಮಿಕರು ಸ್ವಚ್ಛಗೊಳಿಸಿದರು.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿದು ವಾಹನ ಸವಾರರು, ಜನರು ಪರದಾಡುವಂತಾಗಿತ್ತು.

ಅಕ್ಕಿಗುಂದ, ಬಟ್ಟೂರ, ದೊಡ್ಡೂರ ಮಾರ್ಗದ ಹಳ್ಳಗಳು ಅಪಾಯದ ಮಟ್ಟ ಮೀರಿ ಹರಿದಿವೆ. ಕೆಲವು ಜಮೀನುಗಳು ಜಲಾವೃತವಾಗಿವೆ. ಕೆಲವೆಡೆ ಬದುವುಗಳು ಒಡೆದಿವೆ. ಕೆಲವೇ ರೈತರು ಬಿತ್ತನೆ ಮಾಡಿದ್ದು, ವಾರದ ಕಾಲ ಮಳೆ ಬಿಡುವಿಗೆ ಮೊರೆ ಹೋಗುವಂತಾಗಿದೆ. ಆದರೆ ಹವಾಮಾನ ಇಲಾಖೆಯು ಇನ್ನೂ 3-4 ದಿನ ಮುಂಗಾರು ಚುರುಕುಗೊಳ್ಳಲಿದೆ ಎಂಬ ಮಾಹಿತಿ ನೀಡಿದ್ದು ರೈತರು ಚಿಂತೆಗೀಡಾಗಿದ್ದಾರೆ.

ಕುಂದ್ರಳ್ಳಿಯಲ್ಲಿ ತೊಂದರೆ

ಕುಂದ್ರಳ್ಳಿ ಗ್ರಾಮವಂತೂ ಅಕ್ಷರಶಃ ನೀರಿನಲ್ಲಿ ನಿಂತಂತಾಗಿದೆ. ತಾಲೂಕಿನ ಹರದಗಟ್ಟಿ ಗ್ರಾಮದಲ್ಲಿ ಸುಮಾರು 30 ಎಕರೆಯಲ್ಲಿ ಮಳೆ ನೀರು ನಿಂತಿದ್ದು, ಮೆಕ್ಕೆಜೋಳದ ಬೆಳೆ ಕೊಳೆಯುವ ಭೀತಿ ಎದುರಾಗಿದೆ.

ಕುಂದ್ರಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮೇಲ್ಭಾಗದಿಂದ ಅಪಾರ ಪ್ರಮಾಣದ ಮಳೆ ನೀರು ತಗ್ಗು ಪ್ರದೇಶಗಳಲ್ಲಿನ 24 ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ವಿಷಯ ತಿಳಿದು ತಹಸೀಲ್ದಾರ್ ವಾಸುದೇವ ಸ್ವಾಮಿ ಅವರು ರಾತ್ರಿ 11 ಗಂಟೆ ವೇಳೆಗೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಿವಾಸಿಗಳಿಗೆ ಸರ್ಕಾರಿ ಶಾಲೆಯಲ್ಲಿ ತಂಗಲು ಅವಕಾಶ ಕಲ್ಪಿಸಿಕೊಟ್ಟರು. ಪಿಡಿಒ ಎಂ.ಎನ್. ಮಾದರ ಹಾಗೂ ಗ್ರಾಪಂ ಸದಸ್ಯರೊಂದಿಗೆ ಸಮಸ್ಯೆಗೆ ಪರಿಹಾರ ಕುರಿತು ಚರ್ಚಿಸಿದರು.

ತಹಸೀಲ್ದಾರ್ ಸೇರಿದಂತೆ ನೋಡಲ್ ಅಧಿಕಾರಿ ಅಮಿತ್ ಬಿದರಿ, ತಾಪಂ ಇಒ ಕೃಷ್ಣಪ್ಪ ಧರ್ಮರ, ಕಂದಾಯ ನಿರೀಕ್ಷಕ ನದಾಫ, ಗ್ರಾಮ ಆಡಳಿತಾಧಿಕಾರಿ ಮಲ್ಲಿಗವಾಡ ಸೇರಿದಂತೆ ಮತ್ತಿತರ ಅಧಿಕಾರಿಗಳ ತಂಡ ಗುರುವಾರವೂ ಕುಂದ್ರಳ್ಳಿ ಗ್ರಾಮಕ್ಕೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿದರು.

ನಿವಾಸಿಗಳಿಗಾಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲು ಸೂಚನೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net