ದಾಂಪತ್ಯ ಜೀವನಕ್ಕೆ ಕಾಲಿಟ್ಟ 24 ಜೋಡಿ

MARRIAGE
Published on

ನರೇಗಲ್ಲ: ಮದುವೆ ಪ್ರತಿಯೊಬ್ಬರ ಜೀವನದ ಮಹತ್ತರ ಘಟ್ಟ. ಅದಕ್ಕಾಗಿ ಅನಗತ್ಯವಾಗಿ ಹಣ ವ್ಯರ್ಥ ಮಾಡುವ ಅಗತ್ಯವಿಲ್ಲ. ಸಾಮೂಹಿಕ ವಿವಾಹದಲ್ಲಿ ಸಂಸಾರ ಜೀವನಕ್ಕೆ ಪಾದಾರ್ಪಣೆ ಮಾಡುವುದರಿಂದ ಆರ್ಥಿಕ ಹೊರೆ ತಗ್ಗಿ, ಪ್ರಗತಿಗೆ ಪೂರಕವಾಗುತ್ತದೆ. ಇದು, ಕುಟುಂಬಕ್ಕಷ್ಟೇ ಅಲ್ಲದೆ, ದೇಶದ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ. ಮಿತ ಸಂತಾನ, ಮಕ್ಕಳ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದು ಹಾಲಕೆರೆಯ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.

ಅಬ್ಬಿಗೇರಿಯ ಶ್ರೀ ಅನ್ನದಾನೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ 24 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಸಾಮೂಹಿಕ ವಿವಾಹ ಎಂದರೆ ಅದು ಕೇವಲ ಬಡ ಜನರ ಮದುವೆ ಕಾರ್ಯಕ್ರಮವಲ್ಲ. ಸಹಸ್ರಾರು ಭಕ್ತರ ಮತ್ತು ಮಠಾಧೀಶರ ಹಾರೈಕೆ, ಆಶೀರ್ವಾದದೊಂದಿಗೆ ಸಾಮೂಹಿಕ ವಿವಾಹವಾಗುವ ಭಾಗ್ಯ ಜೀವನದ ಸಾರ್ಥಕತೆಯ ಕ್ಷಣವಾಗಿದೆ. ಜಾತಿ, ಧರ್ಮಗಳ ಬೇಲಿಯನ್ನು ದಾಟಿ ಸರ್ವ ಸಮುದಾಗಳ ಜನರನ್ನು ಒಗ್ಗೂಡಿಸಿ ನಡೆಸುವ ಉಚಿತ ಸಾಮೂಹಿಕ ವಿವಾಹಗಳಿಂದ ಬಡವರಿಗೆ ಅನುಕೂಲವಾಗುತ್ತದೆ. ಕಲುಷಿತಗೊಳ್ಳುತ್ತಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಸಾಮರಸ್ಯದಿಂದ ಬದುಕಲು ಪ್ರೇರೇಪಿಸುತ್ತದೆ ಎಂದರು.

ಜಿಗೇರಿಯ ಗುರುಸಿದ್ಧ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ‘ಸಮಾಜದಲ್ಲಿ ಶ್ರೀಮಂತರಿಗೆ ಕೊರತೆ ಇಲ್ಲ. ಆದರೆ, ಹೃದಯ ಶ್ರೀಮಂತಿಕೆ ಇರುವವರು ಬಹಳಷ್ಟು ಕಡಿಮೆ. ಸವೆಯದಷ್ಟು ಹಣ ಸಂಪಾದಿಸಿದರೂ ಅದರಲ್ಲಿ ಒಂದಷ್ಟು ಭಾಗವನ್ನು ಸಾಮಾಜಿಕ ಕಾರ್ಯಗಳಿಗೆ ಮತ್ತು ಬಡವರಿಗಾಗಿ ವಿನಿಯೋಗಿಸುವ ವಿವೇಚನ ಇಲ್ಲದವರೇ ಹೆಚ್ಚಾಗಿದ್ದಾರೆ. ಹಾಲಕೆರೆಯ ಶ್ರೀಮಠದ ಬಹುತೇಕ ಎಲ್ಲ ಶಾಖಾ ಮಠಗಳ ಜಾತ್ರಾ ಮಹೋತ್ಸವದಲ್ಲಿ ಉಚಿತ ಸಾಮೂಹಿಕ ವಿವಾಹಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ’ ಎಂದರು.

ಬನವಾಸಿಯ ಶಿವಲಿಂಗ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಬಸವರಾಜ ತಳವಾರ, ಬಸವರಾಜ ಬಾರಕೇರ, ಅಂದಪ್ಪ ಕಲ್ಲೆಶ್ಯಾನಿ, ಸುರೇಶ ಶಿದ್ನೇಕೊಪ್ಪ, ಮಹಾದೇವಪ್ಪ ಬಸವರಡ್ಡೇರ, ಅಂದಪ್ಪ ಮುಧೋಳ, ಶರಣಪ್ಪ ತಿಪ್ಪಶೆಟ್ಟಿ, ಅಶೋಕ ಬಸವರಡ್ಡೇರ, ಶರಣಯ್ಯ ಅರಳಲಿಮಠ, ಸಂಗಯ್ಯ ಮಠಪತಿ, ವಿದ್ಯಾ ಅಂಗಡಿ, ಲಕ್ಷ್ಮೀ ಬಾರಕೇರ, ನಾಗರತ್ನಾ ಶಿವಶಿಂಪರ, ಮಂಜುಳಾ ಸಾಲಿಮಠ, ಬಸಮ್ಮ ಚಿತ್ತರಗಿ ಇತರರಿದ್ದರು. ಅಂದಪ್ಪ ವೀರಾಪೂರ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net