24-25 ಸಾವಯವ ಕೃಷಿಕ ಗ್ರಾಹಕ ಬಳಗದಿಂದ ‘ಹಲಸು ಹಬ್ಬ’

jack
Published on

ಮಂಗಳೂರು: ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ವತಿಯಿಂದ ಆಯೋಜಿಸುವ ಎಂಟನೇ ವರ್ಷದ ‘ಹಲಸು ಹಬ್ಬ’ ಮೇ 24 ಮತ್ತು 25ರಂದು ನಗರದ ಶ್ರೀ ಶರವು ದೇವಸ್ಥಾನದ ಬಳಿಯ ಬಾಳಂಭಟ್ ಹಾಲ್‌ನಲ್ಲಿ ನಡೆಯಲಿದೆ.

ಮೇ 24 ರಂದು ಬೆಳಗ್ಗೆ 9.30ಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ. ಅವರು ಮೇಳ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ನಟ ಸ್ವರಾಜ್ ಶೆಟ್ಟಿ ಹಾಗೂ ದೇಸಿ ಭತ್ತದ ತಳಿಯ ಸಂರಕ್ಷಕಿ ಆಸ್ಮಬಾನು ಅವರು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ಜಿ.ಆರ್. ಪ್ರಸಾದ್ ವಹಿಸಲಿದ್ದು, ಬಳಗದ ಗೌರವ ಮಾರ್ಗದರ್ಶಕ ಪ್ರದೀಪ್ ಕುಮಾರ್ ಕಲ್ಕೂರ ಮತ್ತು ಗೌರವಾಧ್ಯಕ್ಷ ಅಡ್ಡೂರು ಕೃಷ್ಣ ರಾವ್ ಉಪಸ್ಥಿತರಿರುವರು. ಹಲಸು ತಳಿ ಸಂಶೋಧಕ, ನಿವೃತ್ತ ಅರಣ್ಯಾಧಿಕಾರಿ ಗ್ಯಾಬ್ರಿಯಲ್ ಸ್ಟ್ಯಾನಿ ವೇಗಸ್ ಅವರಿಗೆ ಗೌರವ ಸನ್ಮಾನ ನೆರವೇರಲಿದೆ ಎಂದು ಬಳಗದ ಅಧ್ಯಕ್ಷ ಜಿ.ಆರ್. ಪ್ರಸಾದ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಲಸು ಮೇಳದಲ್ಲಿ ರಾಜ್ಯಾದ್ಯಂತದ ರೈತರು ಭಾಗವಹಿಸಲಿದ್ದು, ವಿವಿಧ ಬಗೆಯ ಹಲಸು ಅಲ್ಲದೇ ಸಾವಯವ ರೀತಿಯಲ್ಲಿ ತಯಾರಿಸಿದ (ಸಕ್ಕರೆ, ಮೈದಾ, ರಾಸಾಯನಿಕ ಬಣ್ಣ ಅಥವಾ ಸುವಾಸನೆಯನ್ನು ಉಪಯೋಗಿಸದೆ, ತೆಂಗಿನ ಎಣ್ಣೆ ಬಳಸಿ) ಹಲಸಿನ ಅನೇಕ ವಿವಿಧ ತಾಜಾ ತಿಂಡಿ ತಿನಿಸುಗಳೂ ದೊರೆಯಲಿವೆ. ಇತರ ಸಾವಯವ ಉತ್ಪನ್ನಗಳ ಮಾರಾಟವೂ ಇರುತ್ತದೆ ಎಂದು ವಿವರಿಸಿದರು.

ವಿವಿಧ ಸ್ಪರ್ಧೆ ಆಯೋಜನೆ

ಬಳಗದ ಕಾರ್ಯದರ್ಶಿ ಕೆ. ರತ್ನಾಕರ ಕುಳಾಯಿ ಮಾತನಾಡಿ, ಹಲಸು ಹಬ್ಬದಲ್ಲಿ ಈ ಬಾರಿ ವಿಶೇಷವಾಗಿ ಸಾರ್ವಜನಿಕರಿಗೆ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮಹಿಳೆಯರು, ಪುರುಷರು ಮತ್ತು ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಇರಲಿದೆ. ಹಲಸಿನ ವಿವಿಧ 9 ವಿಭಾಗಗಳಲ್ಲಿ 10 ಸ್ಪರ್ಧೆ ನಡೆಯಲಿದೆ. ಎಲ್ಲಾ ಸ್ಪರ್ಧಾ ವಿಜೇತರಿಗೆ ಬಹುಮಾನ, ಸ್ಮರಣಿಕೆಯನ್ನು ನೀಡಿ ಪುರಸ್ಕರಿಸಲಾಗುವುದು. ಪಾಲ್ಗೊಂಡ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣಪತ್ರ, ಪದಕ ಕೊಡಲಾಗುತ್ತದೆ. ಹಲಸಿನ ಎರಡು ವಿಭಾಗದಲ್ಲಿ, ಸ್ಪರ್ಧಾ ವಿಜೇತರಿಗೆ ನಗದು ಪುರಸ್ಕಾರ ನೀಡಲಾಗುವುದು ಎಂದರು.

ಕೋಶಾಧ್ಯಕ್ಷ ಶರತ್ ಕುಮಾರ್, ಟ್ರಸ್ಟ್ ನಿರ್ದೇಶಕರಾದ ದಾಕ್ಷಾಯಿಣಿ ವಿಶ್ವೇಶ್ವರ್, ಜಯಶ್ರೀ, ಸದಸ್ಯ ಪ್ರವೀಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net