

ಮೈಸೂರು: ರಾಜ್ಯದ ರೈತರು ಫೆ.23ರೊಳಗೆ ತಂಬಾಕು ಮಾರಾಟ ಮಾಡಬೇಕೆಂದು ತಂಬಾಕು ಮಂಡಳಿ ಮೈಸೂರು ಮತ್ತು ಪಿರಿಯಾಪಟ್ಟಣ ಪ್ರಾದೇಶಿಕ ವ್ಯವಸ್ಥಾಪಕ ಎಂ.ಲಕ್ಷ್ಮಣರಾವ್ ತಿಳಿಸಿದ್ದಾರೆ.
ಆಂಧ್ರಪ್ರದೇಶದ ತಂಬಾಕು ಹರಾಜು ಪ್ರಕ್ರಿಯೆ ಫೆ.23ರಂದು ಪ್ರಾರಂಭವಾಗಲಿದೆ. ಅದಕ್ಕೂ ಮುನ್ನ ಕರ್ನಾಟಕದ ಹರಾಜು ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಬೇಕೆಂಬ ಸೂಚನೆ ಇದೆ. ಆದ್ದರಿಂದ ರೈತರು ಆದಷ್ಟು ಬೇಗ ತಮ್ಮ ತಂಬಾಕು ಬೇಲ್‌ಗಳನ್ನು ತಂದು ಮಾರಾಟ ಮಾಡಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಪ್ರಸ್ತುತ ತಂಬಾಕು ಸರಾಸರಿ ದರ 239.31 ರೂ. ಇದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 75 ರೂ. ಹೆಚ್ಚಿನ ದರ ಇದೆ. 2022-23ನೇ ಸಾಲಿಗೆ ನಿಗದಿಯಾಗಿದ್ದ 60 ಮಿಲಿಯನ್ ಕೆ.ಜಿ. ಪೈಕಿ ಇದುವರೆಗೆ 31 ಮಿಲಿಯನ್ ಕೆ.ಜಿ. ಮಾತ್ರ ಮಾರಾಟವಾಗಿರುತ್ತದೆ. ಈಗಾಗಲೇ 82 ದಿನ ಪೂರೈಸಿದ್ದು, ಪ್ರಸಕ್ತ ಸಾಲಿನ ಬೆಳೆಯ ಪ್ರಮಾಣಕ್ಕಿಂತ ಕಡಿಮೆ ತಂಬಾಕು ಮಾರಾಟವಾಗಿದೆ. ಆದ್ದರಿಂದ ರೈತರು ಬೆಲೆಯನ್ನು ಕಾಯದೆ ಆದಷ್ಟು ಬೇಗ ತಂಬಾಕು ಮಾರುಕಟ್ಟೆಗೆ ಫೆ. 23ರೊಳಗೆ ಕಡ್ಡಾಯವಾಗಿ ತಂದು ಮಾರಾಟ ಮಾಡಿಕೊಳ್ಳಬೇಕೆಂದು ತಿಳಿಸಿದ್ದಾರೆ.