ಗೋಣಿಕೊಪ್ಪ: ಕೊಡವ ತಕ್ಕ್ ಎಳ್ತ್‌ಕಾರಡ ಕೂಟ ಹಾಗೂ ಪೊನ್ನಂಪೇಟೆ ಕೊಡವ ಸಮಾಜದ ಸಹಯೋಗದಲ್ಲಿ ಸಮಾಜದ ಆವರಣದಲ್ಲಿ ಜು.23ರಂದು ಬೆಳಗ್ಗೆ 9.30 ಗಂಟೆಯಿಂದ ಸಂಜೆ 6.30ರವರೆಗೆ ನಡೆಯುವ ಕೊಡವ ತಕ್ಕ್ ಎಳ್ತ್‌ಕಾರಡ ಕೂಟದ ಬೆಳ್ಳಿ ಹಬ್ಬ ಕಾರ್ಯಕ್ರಮದಲ್ಲಿ ಕಥೆ, ಕಾದಂಬರಿ, ಕವನ, ಚುಟುಕ, ನಾಟಕ, ವೈಚಾರಿಕ, ಮಕ್ಕಳ ಕಥೆ, ಮಕ್ಕಳ ನಾಟಕ, ಭಕ್ತಿಗೀತೆ, ಸಣ್ಣ ಕಥೆಗಳು, ಮಕ್ಕಳ ವಿವಿಧ ಲೇಖನಗಳು, ಪದ್ಧತಿ-ಜಾನಪದ, ಪೌರಾಣಿಕ, ಗಾದೆ, ಯೋಗಾಭ್ಯಾಸ ಸೇರಿದಂತೆ ವಿವಿಧ ಪ್ರಕಾರದ 25 ಪುಸ್ತಕಗಳನ್ನು ಪ್ರಥಮ ಬಾರಿಗೆ ಏಕ ವೇದಿಕೆಯಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲಾಗುವುದು.
ದರೊಂದಿಗೆ ಕೊಡವ ತಕ್ಕ್ ಏಳ್ತ್‌ಕಾರಡ ಕೂಟ ನಡೆದು ಬಂದ ದಾರಿಯ ಸಮಗ್ರ ಚಿತ್ರಣಗಳುಳ್ಳ ವಿಶೇಷ ಸ್ಮರಣ ಸಂಚಿಕೆ ಬಿಡುಗಡೆಯಾಗಲಿದೆ. ಈ ಸಂದರ್ಭ ಕೂಟದ 25ನೇ ವರ್ಷಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾದ ವಿವಿಧ ಕಾರ್ಯಕ್ರಮ ಹಾಗೂ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಗುವುದು.
ಇದರೊಂದಿಗೆ ಕೂಟದ ಸ್ಥಾಪನೆಗೆ ಕಾರಣಕರ್ತರಾದ ಪ್ರಥಮ ಆಡಳಿತ ಮಂಡಳಿಯ ಅಧ್ಯಕ್ಷರು ಸದಸ್ಯರಾದಿಯಾಗಿ ಇದುವರೆಗೆ ಕೂಟದಲ್ಲಿ ಕಾರ್ಯನಿರ್ವಹಿಸಿದ ಅಧ್ಯಕ್ಷ, ಆಡಳಿತ ಮಂಡಳಿಯವರಿಗೆ, ಇದುವರೆಗೆ ಕೂಟದ ವತಿಯಿಂದ ಬಿಡುಗಡೆಯಾದ ಎಲ್ಲ ಪುಸ್ತಕಗಳ ಲೇಖಕರಿಗೆ ಹಾಗೂ ಕೂಟದ ಪುಸ್ತಕ ಯೋಜನೆಗೆ ಧನಸಹಾಯ ನೀಡಿದ ಎಲ್ಲ ದಾನಿಗಳಿಗೂ ಸೇರಿದಂತೆ ಒಟ್ಟು 300 ಜನರಿಗೆ ಸನ್ಮಾನ ಮಾಡಲಾಗುವುದು.
ವಿವಿಧ ಆಕರ್ಷಕ ಸಾಂಸ್ಕೃತಿಕ ಪ್ರದರ್ಶನ, ಗಣ್ಯಾತಿಗಣ್ಯ ಅತಿಥಿಗಳ ಭಾಷಣ ಸೇರಿದಂತೆ ಹಲವು ವಿಶೇಷಗಳನ್ನೊಳಗೊಂಡ ಈ ಕಾರ್ಯಕ್ರಮಕ್ಕೆ ದೇಶ ವಿದೇಶಗಳಲ್ಲಿರುವ ಕೊಡವ ಭಾಷೆ, ಸಾಹಿತ್ಯ, ಕಲೆ-ಸಂಸ್ಕೃತಿಯ ಅಭಿಮಾನಿಗಳು ಭಾಗವಹಿಸಲಿದ್ದು, ಕೂಟದ ಬೆಳ್ಳಿ ಹಬ್ಬಕ್ಕೆ ಎಲ್ಲ ಕೊಡವ ಸಂಘಟನೆಗಳು ಸಹಕಾರ ನೀಡಲಿವೆ ಎಂದು ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಹಾಗೂ ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.